ಬಳ್ಳಾರಿಯಲ್ಲಿ 9 ಸಂಪರ್ಕ ಸೇತುವೆ ಮುಳುಗಡೆ: ಆಂಧ್ರ ಸಂಪರ್ಕ ಬಂದ್

KannadaprabhaNewsNetwork | Published : Aug 21, 2024 12:39 AM

ಸಾರಾಂಶ

5 ವಿದ್ಯುತ್ ಟ್ರಾನ್ಸ್‌ಮರ್‌ಗಳು, 51 ವಿದ್ಯುತ್ ಕಂಬಗಳು, ಹೊಲಗದ್ದೆಗಳಿಗೆ ನೀರು ಪೂರೈಸುವ ಡ್ರಾಪ್‌ಗಳು ಕೊಚ್ಚಿ ಹೋಗಿವೆ.

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಳೆದ 24 ತಾಸಿನಲ್ಲಿ ಭಾರೀ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.

ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗಿನಜಾವದ ವರೆಗೆ ಸತತವಾಗಿ ಸುರಿದ ಮಳೆಗೆ 9 ಸಂಪರ್ಕ ಸೇತುವೆಗಳು ಮುಳುಗಿದ್ದು, 5 ವಿದ್ಯುತ್ ಟ್ರಾನ್ಸ್‌ಮರ್‌ಗಳು, 51 ವಿದ್ಯುತ್ ಕಂಬಗಳು, ಹೊಲಗದ್ದೆಗಳಿಗೆ ನೀರು ಪೂರೈಸುವ ಡ್ರಾಪ್‌ಗಳು ಕೊಚ್ಚಿ ಹೋಗಿವೆ.

ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮಣ್ಣಿನ ಮನೆಗಳು ಕುಸಿದುಬಿದ್ದಿವೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಮಣ್ಣಿನ ರಸ್ತೆಗಳು ಭಾಗಶಃ ಹಾಳಾಗಿ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಯ ಅವಾಂತರದಿಂದ ಸಾವಿರಾರು ಎಕರೆ ಪ್ರದೇಶದ ಬತ್ತ, ಬಾಳೆ, ಕಬ್ಬು ಬೆಳೆಗಳು ಹಾನಿಯಾಗುವ ಆತಂಕ ಎದುರಾಗಿದೆ. ಮಳೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಳೆಹಾನಿಯಾಗಿರುವ ಕುರಿತು ಜಂಟಿ ಸರ್ವೆ ಮಾಡಿಸಲಾಗುವುದು. ಬೆಳೆಹಾನಿಯಾಗಿದ್ದಲ್ಲಿ ಪರಿಹಾರ ನೀಡುವ ಕುರಿತು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಈ ವರ್ಷದಲ್ಲಿಯೇ ದೊಡ್ಡ ಮಳೆ:

ಹವಾಮಾನ ಇಲಾಖೆ ನೀಡುವ ಮಾಹಿತಿ ಪ್ರಕಾರ ಈ ವರ್ಷದಲ್ಲಿಯೇ ಇದು ದೊಡ್ಡ ಮಳೆ. ಕಳೆದ ವಾರದಲ್ಲಿ ಜಿಲ್ಲೆಯಲ್ಲಿ 28.23 ಮಿ.ಮೀ. ಮಳೆಯಾಗಿತ್ತು. ಆದರೆ ಕಳೆದ 24 ತಾಸಿನಲ್ಲಿ (ಸೋಮವಾರ ಬೆಳಿಗ್ಗೆ 8ರಿಂದ ಮಂಗಳವಾರ ಬೆಳಿಗ್ಗೆ 8ರ ವರೆಗೆ) ದಾಖಲೆಯ ಒಟ್ಟು 55.57 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಸುರಿದ ಮಳೆಗೆ ಅನೇಕ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಮಳೆಯ ನೀರು ಮನೆಗೆ ನುಗ್ಗಿ ಪಾತ್ರೆ ಪಗಡಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಯ ಕುಸಿತದಿಂದ ಅನೇಕರು ನಿರಾಶ್ರಿತರಾಗಿದ್ದು, ಸಂಬಂಧಿಗಳ ಮನೆಗಳಲ್ಲಿ ಸದ್ಯ ಆಶ್ರಯ ಪಡೆಯುತ್ತಿದ್ದಾರೆ.

ಆಂಧ್ರ ಸಂಪರ್ಕ ಬಂದ್:

ವರುಣನ ಆರ್ಭಟದಿಂದ ಸಿರುಗುಪ್ಪ ತಾಲೂಕಿನ ಮಾಟಸೂಗೂರು ಬ್ರಿಡ್ಜ್ ಸಂಪೂರ್ಣ ಮುಳುಗಿದ್ದು, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸಂಪರ್ಕ ಬಂದ್ ಆಗಿದೆ. ಇದೇ ತಾಲೂಕಿನ ಯಲ್ಲಮ್ಮನಹಳ್ಳ ಮುಳುಗಡೆಯಾಗಿದೆ. ಕರೂರು ಹಿರೇಹಳ್ಳ ಸಹ ತುಂಬಿಕೊಂಡಿದ್ದು, ರೈತರ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ಹರಿದಿದೆ. ಇದರಿಂದ ನಾಟಿ ಹಂತದಲ್ಲಿರುವ ಬತ್ತ ಬೆಳೆ ನಾಶದ ಆತಂಕ ಎದುರಾಗಿದೆ.

ತಾಲೂಕುವಾರು ಮಳೆ ವಿವರ:

ಬಳ್ಳಾರಿ 33.1 ಮಿ.ಮೀ.

ಸಿರುಗುಪ್ಪ 78.7 ಮಿ.ಮೀ.

ಸಂಡೂರು 16.8 ಮಿ.ಮೀ.

ಕುರುಗೋಡು 85.00 ಮಿ.ಮೀ.

ಕಂಪ್ಲಿ 64.00 ಮಿ.ಮೀ.

ಮನೆಹಾನಿ ತಾಲೂಕುವಾರು:

ಬಳ್ಳಾರಿ 8

ಸಿರುಗುಪ್ಪ 3

ಕುರುಗೋಡು 5

ಕಂಪ್ಲಿ 7

Share this article