ಬಡವರ ಮನೆಗೆ ಸರ್ಕಾರದಿಂದ ವಂತಿಗೆಗೆ ಅಸ್ತು

KannadaprabhaNewsNetwork | Published : Aug 21, 2024 12:39 AM

ಸಾರಾಂಶ

ರಾಜೀವ್‌ಗಾಂಧಿ ವಸತಿ ನಿಗಮದಿಂದ ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ ಯೋಜನೆ ಅಡಿ 47,887 ಮನೆ ನಿರ್ಮಾಣದ ಫಲಾನುಭವಿಗಳ ವಂತಿಗೆ, ಮೂಲಸೌಕರ್ಯ ವೆಚ್ಚದ ಮೊತ್ತ 2,213 ಕೋಟಿ ರು.ಗಳನ್ನು ಸರ್ಕಾರದಿಂದಲೇ ಭರಿಸುವ ಸಂಬಂಧ ಹಣಕಾಸು ಇಲಾಖೆಯಿಂದ ತಾತ್ವಿಕ ಒಪ್ಪಿಗೆ ದೊರೆತಿದೆ.

ರಾಜೀವ್‌ ವಸತಿ ಸ್ಕೀಂ 47887 ಮನೆಗೆ 2,213 ಕೋಟಿ ರು. ನೆರವಿಗೆ ಹಣಕಾಸು ಇಲಾಖೆ ಒಪ್ಪಿಗೆಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜೀವ್‌ಗಾಂಧಿ ವಸತಿ ನಿಗಮದಿಂದ ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ (ಎಎಚ್‌ಪಿ) ಯೋಜನೆ ಅಡಿಯಲ್ಲಿ 47,887 ಮನೆ ನಿರ್ಮಾಣದ ಫಲಾನುಭವಿಗಳ ವಂತಿಗೆ ಮತ್ತು ಮೂಲಸೌಕರ್ಯ ವೆಚ್ಚದ ಮೊತ್ತ 2,213 ಕೋಟಿ ರು.ಗಳನ್ನು ಸರ್ಕಾರದಿಂದಲೇ ಭರಿಸುವ ಸಂಬಂಧ ಹಣಕಾಸು ಇಲಾಖೆಯಿಂದ ತಾತ್ವಿಕ ಒಪ್ಪಿಗೆ ದೊರೆತಿದ್ದು, ಅದರ ಅನುಮೋದನೆಗಾಗಿ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಲು ವಸತಿ ಇಲಾಖೆ ನಿರ್ಧರಿಸಿದೆ.

ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್‌ಗಾಂಧಿ ವಸತಿ ನಿಗಮದಿಂದ ಬಡವರಿಗೆ ಮನೆ ಹಂಚಿಕೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್‌ ಅಹಮದ್‌ ಖಾನ್‌ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಹಣಕಾಸು ಇಲಾಖೆ ಹೆಚ್ಚುವರಿ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಸಭೆಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ಎಎಚ್‌ಪಿ ಯೋಜನೆ ಅಡಿ ಕೈಗೊಳ್ಳಲಾಗಿರುವ 47,887 ಮನೆ ನಿರ್ಮಾಣಕ್ಕೆ ಫಲಾನುಭವಿಗಳ ವಂತಿಗೆ ಹಾಗೂ ಮೂಲಸೌಕರ್ಯಕ್ಕಾಗಿ 2,213 ಕೋಟಿ ರು.ಗಳ ಅವಶ್ಯಕತೆಯಿದ್ದು, ಅದನ್ನು ಸರ್ಕಾರದಿಂದಲೇ ಭರಿಸಲು ಹಣಕಾಸು ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಆದರೂ, ಅದನ್ನು ಸಚಿವ ಸಂಪುಟ ಅನುಮೋದನೆ ನೀಡಬೇಕಿದ್ದು, ಅದಕ್ಕಾಗಿ ಮುಂದಿನ ಸಂಪುಟ ಸಭೆಯಲ್ಲಿ ವಿಷಯ ಮಂಡಿಸುವ ಕುರಿತು ನಿರ್ಧರಿಸಲಾಗಿದೆ.

ಅದೇ ರೀತಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಎಎಚ್‌ಪಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ 1.82 ಲಕ್ಷ ಮನೆಗಳ ಪೈಕಿ ಎರಡನೇ ಹಂತದಲ್ಲಿ ನಿರ್ಮಿಸಲಾಗಿರುವ 32,946 ಮನೆಗಳನ್ನು ಮುಂದಿನ ತಿಂಗಳು ಹಂಚಿಕೆ ಮಾಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯ ಹಾಗೂ ಫಲಾನುಭವಿಗಳ ವಂತಿಗೆ ಮೊತ್ತ 862 ಕೋಟಿ ರು.ಗಳ ಬಿಡುಗಡೆಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಜಮೀರ್‌ ಸೂಚಿಸಿದರು. ಇದೇ ವೇಳೆ ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗಿರುವ 36,784 ಮನೆಗಳಿಗೆ ಸಂಬಂಧಿಸಿದಂತೆ 500 ಕೋಟಿ ರು. ಬಾಕಿಯಿದ್ದು, ಅದರ ಬಿಡುಗಡೆ ಕುರಿತಂತೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್‌ ಅಹಮದ್‌, ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡ, ಆಯುಕ್ತೆ ಕವಿತಾ ಮನ್ನಿಕೇರಿ, ಮುಖ್ಯ ಎಂಜಿನಿಯರ್‌ ರವಿಕುಮಾರ್‌, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ್‌, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್‌ ಖಾನ್, ವ್ಯವಸ್ಥಾಪಕ ನಿರ್ದೇಶಕ ನಜೀರ್‌, ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಇತರರಿದ್ದರು.

Share this article