ನೆಟ್‍ವರ್ಕ್ ಸಮಸ್ಯೆಗೆ ಬೇಸತ್ತುಸಮೀಕ್ಷೆ ತಿರಸ್ಕರಿಸಿದ 9 ಗ್ರಾಮ

KannadaprabhaNewsNetwork |  
Published : Oct 06, 2025, 01:00 AM IST
ಫೋಟೋ: 4ಟಿಜಿಟಿ1:  ಬರೂರು ಗ್ರಾಮಪಂಚಾಯಿತಿ ಕಛೇರಿ ಮುಂಭಾಗ ಜಮಾಯಿಸಿದ  ಪ್ರತಿಭಟನಾ ನಿರತರನ್ನು ಉದ್ದೇಶಿಸಿ ತಹಶೀಲ್ದಾರ್ ರಶ್ಮಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಮೊಬೈಲ್‍ ನೆಟ್‍ವರ್ಕ್ ಸಿಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶಿವಮೊಗ್ಗ ಜಿಲ್ಲೆ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಸ್ಥರು ಜನಗಣತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತ್ಯಾಗರ್ತಿ

ಮೊಬೈಲ್‍ ನೆಟ್‍ವರ್ಕ್ ಸಿಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶಿವಮೊಗ್ಗ ಜಿಲ್ಲೆ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೊಪ್ಪ, ಬರೂರು, ತೆಪ್ಪಗೋಡು, ಮುಳುಕೆರೆ, ಕುಂದೂರು, ಬಸವನಬ್ಯಾಣ, ಪರ್ಸಿಕೊಪ್ಪ, ಇಡುವಳ್ಳಿ, ಮಸೆಕೈಲುಬೈಲು ಗ್ರಾಮಸ್ಥರು ಜನಗಣತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ಶನಿವಾರ ಬರೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಹಲವು ವರ್ಷಗಳಿಂದ ನೆಟ್‍ವರ್ಕ್ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೂ, ಸಮಸ್ಯೆ ಬಗೆಹರಿದಿಲ್ಲ ಎಂದು ಕಿಡಿ ಕಾರಿದರು.

ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ರಶ್ಮಿ, ತಾಲೂಕು ಪಂಚಾಯಿತಿ ಇಒ ಶಿವಪ್ರಕಾಶ್‌ ಪ್ರತಿಭಟನಾ ನಿರತರನ್ನು ಮನವೊಲಿಸಲು ಯತ್ನಿಸಿದರು. ಶೀಘ್ರವೇ ಸಂಬಂಧಿತ ಅಧಿಕಾರಿಗಳಿಂದ ನೆಟ್‌ವರ್ಕ್‌ ಕೊಡಿಸುವ ಭರವಸೆ ನೀಡಿದರು. ಜೊತೆಗೆ, ನೆಟ್‍ವರ್ಕ್ ಸಿಗುವ ಜಾಗಕ್ಕೆ ಬರುವಂತೆ ಗ್ರಾಮಸ್ಥರ ಮನವೊಲಿಸಿ, ಗಣತಿ ಸಮೀಕ್ಷೆ ನಡೆಸಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸಮೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ, ಗ್ರಾಮಸ್ಥರು ಪ್ರತಿಭಟನೆಯನ್ನು ವಾಪಸ್‌ ಪಡೆದರು.

ನಿನ್ನೆ 7 ಲಕ್ಷ ಮನೆಗಳ ಸಮೀಕ್ಷೆ:

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ(ಜಾತಿ ಗಣತಿ) ವಿಧಿಸಿರುವ ಗಡುವು ಹತ್ತಿರವಾಗುತ್ತಿದ್ದಂತೆ ಕೆಲ ದಿನಗಳಿಂದ ಮನೆಗಳ ಸಮೀಕ್ಷೆ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಭಾನುವಾರ ಕೇವಲ 7 ಲಕ್ಷ ಮನೆಗಳ ಸಮೀಕ್ಷೆ ಮಾತ್ರ ನಡೆಸಲಾಗಿದೆ.ಇದರೊಂದಿಗೆ ಇದುವರೆಗೆ 1.09 ಕೋಟಿಗೂ ಹೆಚ್ಚು ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಸಮೀಕ್ಷೆಗೆ ಗುರುತಿಸಿರುವ ಒಟ್ಟು 1.43 ಕೋಟಿಗೂ ಹೆಚ್ಚು ಮನೆಗಳ ಪೈಕಿ ಇನ್ನೂ ಶೇ.76.41 ಮನೆಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಂತಾಗಿದೆ. ಸಮೀಕ್ಷೆ ಪೂರ್ಣಗೊಳಿಸಲು ನಿಗದಿಪಡಿಸಿರುವ ಅ.7ರ ಗಡುವಿಗೆ ಇನ್ನೆರಡು ದಿನ ಮಾತ್ರ ಬಾಕಿ ಇದ್ದು, ಅಷ್ಟರಲ್ಲಿ ಇನ್ನೂ 33 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಆಗಬೇಕಿದೆ.

ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿ ಸೆ.22ರಿಂದ ಆರಂಭವಾದ ಜಾತಿ ಗಣತಿಯು ಆರಂಭದ ನಾಲ್ಕೈದು ದಿನ ಮಂದಗತಿಯಲ್ಲಿ ಸಾಗಿತ್ತು. ಇದರಿಂದ ಸಿಟ್ಟಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.26ರಂದು ಸಭೆ ನಡೆಸಿ ನಿತ್ಯ ಶೇ.10ರಷ್ಟು ಮನೆಗಳ(ಶೇ.11.45 ಲಕ್ಷ) ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಈವರೆಗೆ ಕೇವಲ 4 ಲಕ್ಷದಷ್ಟಿದ್ದ ಮನೆಗಳ ಸಮೀಕ್ಷೆ ದಿನೇ ದಿನೆ 8, 10, 12 ಲಕ್ಷ ಹೀಗೆ ಏರುತ್ತಲೇ ಸಾಗಿ ಕಳೆದ ಸೋಮವಾರ ಮತ್ತು ಮಂಗಳವಾರ ತಲಾ ಗರಿಷ್ಠ 15 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆದಿತ್ತು. ಇದರಿಂದ ನಿಗದಿತ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳ್ಳುವ ವಿಶ್ವಾಸ ಮೂಡಿತ್ತು. ಆದರೆ, ಆಯುಧಪೂಜೆ ನಂತರ ಗುರುವಾರ 10 ಲಕ್ಷ, ಶುಕ್ರವಾರ 9 ಲಕ್ಷ, ಶನಿವಾರ 8 ಲಕ್ಷ, ಭಾನುವಾರ 7 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆದಿದ್ದು, ಸಮೀಕ್ಷೆ ಪ್ರಮಾಣ ಕಡಿಮೆಯಾಗುತ್ತಲೇ ಬರುತ್ತಿದೆ.

ಸಮೀಕ್ಷೆ ವೇಳೆ ಬೀದಿ ನಾಯಿ ದಾಳಿಯಿಂದ ಶಿಕ್ಷಕಿ ಗಂಭೀರ:

ಜಾತಿಗಣತಿ ಸಮೀಕ್ಷೆಗೆ ಹೋಗಿದ್ದ ಶಿಕ್ಷಕಿ ಮೇಲೆ‌ ಬೀದಿ ನಾಯಿಗಳು ದಾಳಿ ಮಾಡಿದ ಪರಿಣಾಮ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನ ಜಿಲ್ಲೆ ಬೇಲೂರಿನ ಹೊಯ್ಸಳ ನಗರದ ಬಡಾವಣೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ.ಪಟ್ಟಣದ ನೆಹರೂ ನಗರ ಜಿಎಸ್‌ಇಎಸ್ ಶಾಲೆಯ ಚಿಕ್ಕಮ್ಮ ಅವರು ಟೈಲರ್ ನವೀನ್ ಅವರ ಮನೆಗೆ ಸಮೀಕ್ಷೆಗೆ ಹೋದ ಸಂದರ್ಭದಲ್ಲಿ ಬೀದಿ ನಾಯಿ ಚಿಕ್ಕಮ್ಮನವರ ಮೇಲೆ ದಾಳಿ ನಡೆಸಿ, ಕೆನ್ನೆ, ಕಿವಿ, ತೊಡೆ ಹಾಗೂ ಹೊಟ್ಟೆ ಭಾಗದಲ್ಲಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಪತಿ ಶಿವಕುಮಾರ್, ಪತ್ನಿಯನ್ನು ಬಿಡಿಸಲು ಹೋದ ಸಮಯದಲ್ಲಿ ಅವರಿಗೂ ನಾಯಿ ಕಚ್ಚಿದ್ದು, ಅವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳಿಕ, ಇದೇ ನಾಯಿ, ಇತರ ನಾಯಿಗಳ ಜೊತೆ ಸೇರಿಕೊಂಡು ಜೈ ಭೀಮ್ ನಗರದ ಬೀದಿಯಲ್ಲಿ ಆಟವಾಡುತ್ತಿದ್ದ ಕಿಶನ್ ಎಂಬ 5 ವರ್ಷದ ಬಾಲಕ, ಆತನ ತಾತ ಧರ್ಮಯ್ಯ ಹಾಗೂ ಜೊತೆಯಲ್ಲಿದ್ದ ಸಚಿನ್‌, ಪೃಥ್ವಿ ಎಂಬುವರಿಗೆ ಕಚ್ಚಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಒಂದು ನಾಯಿಯನ್ನು ಹೊಡೆದು ಸಾಯಿಸಿದ್ದಾರೆ.ವಿಷಯ ತಿಳಿದು ಶಾಸಕ ಎಚ್.ಕೆ.ಸುರೇಶ್ ಹಾಗೂ ದಂಡಾಧಿಕಾರಿ ಶ್ರೀಧರ್ ಕಂಕನವಾಡಿ, ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಪಟ್ಟಣದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಅವುಗಳನ್ನು ಹಿಡಿದು ಬೇರೆಡೆ ಸಾಗಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.ಸ್ಕೂಟರ್‌ಗೆ ನಾಯಿ ಸಿಲುಕಿ ಗಣತಿದಾರ ಶಿಕ್ಷಕಿಗೆ ಗಾಯ:ಜಾತಿಗಣತಿ ಸಮೀಕ್ಷೆಗೆ ಹೋಗಿ ಬರುವಾಗ ಸ್ಕೂಟಿಗೆ ಅಡ್ಡಲಾಗಿ ನಾಯಿ ಬಂದಿದ್ದರಿಂದ ರಸ್ತೆಗೆ ಬಿದ್ದು ಶಿಕ್ಷಕಿಯೊಬ್ಬರು ಗಾಯಗೊಂಡ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ವಡ್ಡರಹಳ್ಳಿಯಲ್ಲಿ ಭಾನುವಾರ ನಡೆದಿದೆ. ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಧಾ ಗಾಯಗೊಂಡವರು. ಇವರನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಗಣತಿ ಡಿಕೆಶಿ ಬಳಿಕ ಸೋಮಣ್ಣ ಗರಂ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಕ ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ ಜಾತಿ ಗಣತಿಗೆ ಬಂದಿದ್ದ ಗಣತಿದಾರರ ತರೇಹವಾರಿ ಪ್ರಶ್ನೆಗಳಿಗೆ ಗರಂ ಆಗಿದ್ದಾರೆ.

ಭಾನುವಾರ ವಿಜಯನಗರದಲ್ಲಿರುವ ಸೋಮಣ್ಣ ಅವರ ಅವರ ನಿವಾಸಕ್ಕೆ ಜಾತಿ ಗಣತಿ ಸಂಬಂಧ ಸುಮಾರು ಒಂಬತ್ತು ಮಂದಿ ಆಗಮಿಸಿದ್ದರು. ಇದನ್ನು ಕಂಡ ಸೋಮಣ್ಣ ಅವರು ಇಷ್ಟು ಜನ ಏಕೆ ಬಂದಿದ್ದೀರಿ ಎಂದು ತುಸು ಬೇಸರದಿಂದಲೇ ಪ್ರಶ್ನಿಸಿದರು.ಮುಂದೆ ನಮ್ಮ ಕೇಂದ್ರ ಸರ್ಕಾರ ಗಣತಿ ಮಾಡಿಸಲಿದೆ. ಆಗ ಹೇಗೆ ಮಾಡಿಸುತ್ತೆ ನೋಡಿ. ಅದನ್ನು ಕೂಡ ನೀವೇ ಮಾಡಬೇಕಾಗುತ್ತದೆ. ಸಮೀಕ್ಷೆಗೆ ಇಷ್ಟು ಪ್ರಶ್ನೆಗಳು ಬೇಕೇ? ಇದೆಲ್ಲವನ್ನೂ ನೀವೇ ಸರ್ಕಾರಕ್ಕೆ ತಿಳಿಸಬೇಕು. ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಕ್ಲಾಸ್‌ ತೆಗೆದುಕೊಂಡರು ಎನ್ನಲಾಗಿದೆ.

ಸಮೀಕ್ಷೆ ನಡೆಸುವ ಸಿಬ್ಬಂದಿ ನಿಮ್ಮ ಉಪಜಾತಿ ಯಾವುದು ಎಂದು ಸೋಮಣ್ಣ ಅವರನ್ನು ಪ್ರಶ್ನಿಸಿದಾಗ, ಅದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಬರೆದುಕೊಳ್ಳಿ. ಇಡೀ ದೇಶದಲ್ಲಿ ಸಿದ್ದರಾಮಯ್ಯ ಜಾತಿ ಎಂದೇ ಮಾಡಿಕೊಳ್ಳಿ ಎಂದು ವ್ಯಂಗ್ಯವಾಗಿ ಹೇಳಿದರು.

ನಿಮ್ಮ ವಿವಾಹ ಆದಾಗ ಎಷ್ಟು ವರ್ಷ ಎಂಬ ಪ್ರಶ್ನೆ ಸಿಬ್ಬಂದಿಯಿಂದ ಬಂದಾಗ, ಇದೆಲ್ಲ ಯಾಕೆ ಬೇಕು? ನಮ್ಮ ಅಪ್ಪ ಅಮ್ಮನನ್ನು ಕೇಳಬೇಕು. 26 ಅಂತ ಬರೆದುಕೊಳ್ಳಿ ಎಂದುತ್ತರಿಸಿದರು.ಹಲವು ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಹಾಕಿಕೊಳ್ಳಿ. ಈ ಸಮೀಕ್ಷೆಯನ್ನು ಸಿದ್ದರಾಮಯ್ಯ ಅವರು ವೋಟಿಗಾಗಿ ಮಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿಯೂ ಸಚಿವ ಸೋಮಣ್ಣ ಹೇಳಿದರು.ಇನ್ನು ಕೆಲ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡ ಸೋಮಣ್ಣ ಅವರು, ಉತ್ತರ ನೀಡಲು ಆಗದ ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳುತ್ತಿದ್ದೀರಿ. ಯಾವನೋ ತಲೆ ಕೆಟ್ಟಿರುವವನೇ ಇದನ್ನು ಮಾಡಿರಬೇಕು. ಆತನನ್ನು ಕರೆಯಿರಿ ಎಂದು ತೀಕ್ಷ್ಣವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

-ಬಾಕ್ಸ್‌-

ಇದೊಂದು ಅವೈಜ್ಞಾನಿಕ ಸಮೀಕ್ಷೆ: ಸೋಮಣ್ಣಇದೊಂದು ಅವೈಜ್ಞಾನಿಕ ಸಮೀಕ್ಷೆ. ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲಸಕ್ಕೆ ಬಾರದೆ ಇದನ್ನು ಸೃಷ್ಟಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಸೋಮಣ್ಣ ಹರಿಹಾಯ್ದಿದ್ದಾರೆ.ಭಾನುವಾರ ತಮ್ಮ ನಿವಾಸದಲ್ಲಿ ಸಮೀಕ್ಷೆ ಕಾರ್ಯ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಗಾಗಿ ಸುಮಾರು 1 ಗಂಟೆ 4 ನಿಮಿಷಗಳ ಕಾಲ ನನ್ನಿಂದ ಮಾಹಿತಿ ಪಡೆದಿದ್ದಾರೆ. ಇದನ್ನು ಇನ್ನೂ ಸರಳೀಕರಣ ಮಾಡಬೇಕು ಎಂದರು.

ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಸುಮಾರು ಅಧಿಕಾರಿಗಳು ಕೇಳಿದ ಮಾಹಿತಿ ಅನಾವಶ್ಯಕವಾಗಿತ್ತು.

ಇದರಿಂದ ಜನ ಗೊಂದಲ‌ಕ್ಕೆ ಒಳಗಾಗುತ್ತಿದ್ದಾರೆ. ಸಮೀಕ್ಷೆ ಸರಳೀಕರಣ ಮಾಡಬೇಕು. ಈಗಿನ ಸಮೀಕ್ಷೆ ಮಾಡಿ ಮುಗಿಸಲು ಆರು ತಿಂಗಳು ಬೇಕಾಗುತ್ತದೆ ಎಂದು ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ