ಕೊಡಗಿನಲ್ಲಿ ತೆರಿಗೆದಾರರು, ಸರ್ಕಾರಿ ನೌಕರರ ಅವಲಂಬಿತರ 903 ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

KannadaprabhaNewsNetwork | Published : Nov 22, 2024 1:15 AM

ಸಾರಾಂಶ

ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳ ವರೆಗೆ ಸರ್ಕಾರದ ನಿಯಮಾನುಸಾರ ತೆರಿಗೆದಾರರ 876 ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಲಾಗಿದ್ದು, ಈ ಕಾರ್ಡ್ ಗಳನ್ನು ರದ್ದುಗೊಳಿಸಿ ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರ ಅವಲಂಬಿತರ 27 ಕಾರ್ಡ್‌ಗಳನ್ನೂ ಎಪಿಎಲ್ ಆಗಿ ಬದಲಿಸಲಾಗಿದೆ

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದಲ್ಲಿ ಹಲವರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ಬರುತ್ತಿದೆ. ವಿರೋಧ ಪಕ್ಷ ಕೂಡ ಇದನ್ನು ತೀವ್ರವಾಗಿ ಖಂಡಿಸಿದೆ. ಅಧಿಕೃತ ಮಾಹಿತಿ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಬಿಪಿಎಲ್ ಪಡಿತರ ಚೀಟಿ ರದ್ದುಗೊಂಡಿಲ್ಲ.

ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳ ವರೆಗೆ ಸರ್ಕಾರದ ನಿಯಮಾನುಸಾರ ತೆರಿಗೆದಾರರ 876 ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಲಾಗಿದ್ದು, ಈ ಕಾರ್ಡ್ ಗಳನ್ನು ರದ್ದುಗೊಳಿಸಿ ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರ ಅವಲಂಬಿತರ 27 ಕಾರ್ಡ್‌ಗಳನ್ನೂ ಎಪಿಎಲ್ ಆಗಿ ಬದಲಿಸಲಾಗಿದೆ ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.

ಜಿಲ್ಲೆಯಲ್ಲಿ ಹೊಸ ಬಿಪಿಎಲ್ ಕಾರ್ಡ್‌ ಸದ್ಯ ನೀಡಲಾಗುತ್ತಿಲ್ಲ. ಸೆಪ್ಟೆಂಬರ್‌ ವರೆಗೆ 535 ಹೊಸ ಕಾರ್ಡ್ ಗಳನ್ನು ನೀಡಲಾಗಿದೆ.

ಜಿಲ್ಲೆಯಲ್ಲಿ 9,077 ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳಿದೆ. ಮಡಿಕೇರಿ ತಾಲೂಕಿನಲ್ಲಿ 1,988, ಸೋಮವಾರಪೇಟೆ ತಾಲೂಕಿನಲ್ಲಿ 1,239, ವಿರಾಜಪೇಟೆ ತಾಲೂಕಿನಲ್ಲಿ 2,168, ಕುಶಾಲನಗರ ತಾಲೂಕಿನಲ್ಲಿ 1,520 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 2,162 ಕಾರ್ಡ್‌ಗಳಿದೆ.

96,022 ಆದ್ಯತಾ ಪಡಿತರ ಚೀಟಿಗಳಿದ್ದು, ಮಡಿಕೇರಿ ತಾಲೂಕಿನಲ್ಲಿ 21,885, ಸೋಮವಾರಪೇಟೆ ತಾಲೂಕಿನಲ್ಲಿ 22,457, ವಿರಾಜಪೇಟೆ ತಾಲೂಕಿನಲ್ಲಿ 17,258, ಕುಶಾಲನಗರ ತಾಲೂಕಿನಲ್ಲಿ 20,344 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 14,078 ಕಾರ್ಡ್‌ಗಳಿವೆ.

38,014 ಆದ್ಯತೇತರ ಪಡಿತರ ಚೀಟಿಗಳಿದೆ. ಮಡಿಕೇರಿ ತಾಲೂಕಿನಲ್ಲಿ 13,966, ಸೋಮವಾರಪೇಟೆ ತಾಲೂಕಿನಲ್ಲಿ 4,621, ವಿರಾಜಪೇಟೆ ತಾಲೂಕಿನಲ್ಲಿ 6,481, ಕುಶಾಲನಗರ ತಾಲೂಕಿನಲ್ಲಿ 4,822 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 8,094 ಕಾರ್ಡ್‌ಗಳಿವೆ.

ಜಿಲ್ಲೆಯಲ್ಲಿ ಒಟ್ಟು 1,43,113 ಪಡಿತರ ಕಾರ್ಡ್ ಗಳಿದ್ದು, ಮಡಿಕೇರಿ ತಾಲೂಕಿನಲ್ಲಿ 37,869, ಸೋಮವಾರಪೇಟೆ ತಾಲೂಕಿನಲ್ಲಿ 28,317, ವಿರಾಜಪೇಟೆ ತಾಲೂಕಿನಲ್ಲಿ 25,907, ಕುಶಾಲನಗರ ತಾಲೂಕಿನಲ್ಲಿ 26,686 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 24,334 ಕಾರ್ಡ್‌ಗಳಿವೆ. ಪಟ್ಟಣ ಪ್ರದೇಶದಲ್ಲಿ 22, ಗ್ರಾಮೀಣ ಭಾಗದಲ್ಲಿ 252 ನ್ಯಾಯಬೆಲೆ ಅಂಗಡಿಗಳಿವೆ.

ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದಾಗಿ ಜಿಲ್ಲೆಯಲ್ಲೂ ಕೂಡ ಹೊಸ ಬಿಪಿಎಲ್ ಕಾರ್ಡ್ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ ಸದ್ಯಕ್ಕೆ ಕಾರ್ಡ್ ಮಾಡಿಸಲು ಅವಕಾಶವಿಲ್ಲ. ಜಿಲ್ಲೆಯಲ್ಲಿ ಅನರ್ಹ ಹೊಂದಿರುವವರನ್ನು ಪಚ್ಚೆಮಾಡುವ ಕಾರ್ಯ ಮಾಡಿ ಅಂತವರ ವಿರುದ್ಧ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ.

.........................

ಜಿಲ್ಲೆಯಲ್ಲಿ ಇತ್ತೀಚೆಗೆ ಯಾವುದೇ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಸರ್ಕಾರದಲ್ಲಿನ ಪಟ್ಟಿಯಂತೆ ತೆರಿಗೆದಾರರು ಹಾಗೂ ಸರ್ಕಾರಿ ನೌಕರರ ಅವಲಂಬಿತರ ಒಟ್ಟು 903 ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. ಹೊಸ ಪಡಿತರ ಕಾರ್ಡ್ ಗಳನ್ನು ಕೂಡ ಸದ್ಯಕ್ಕೆ ನೀಡುತ್ತಿಲ್ಲ.

-ಕುಮುದಾ ಶರತ್, ಜಂಟಿ ನಿರ್ದೇಶಕ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಡಿಕೇರಿ.

Share this article