ತುಂಗಭದ್ರಾ ಜಲಾಶಯದಿಂದ ನದಿಗೆ 98 ಸಾವಿರ ಕ್ಯುಸೆಕ್ ನೀರು

KannadaprabhaNewsNetwork |  
Published : Jul 27, 2025, 12:01 AM IST

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಶನಿವಾರ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಲಾಯಿತು‌. ಸಂಜೆ ವೇಳೆಗೆ 98 ಸಾವಿರ ಕ್ಯುಸೆಕ್ ಹೊರಹರಿವು ದಾಖಲಾಯಿತು.

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಶನಿವಾರ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಲಾಯಿತು‌. ಸಂಜೆ ವೇಳೆಗೆ 98 ಸಾವಿರ ಕ್ಯುಸೆಕ್ ಹೊರಹರಿವು ದಾಖಲಾಯಿತು.

ಡ್ಯಾಂನಿಂದ ಶನಿವಾರ ಬೆಳಗ್ಗೆ 11 ಗಂಟೆ ವೇಳೆಗೆ 21 ಕ್ರಸ್ಟ್ ಗೇಟ್ ಗಳನ್ನು 2.5 ಅಡಿ ಎತ್ತರಿಸಿ 61 ಸಾವಿರ ಸೇರಿದಂತೆ ಒಟ್ಟು 65 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. ಇದು ಸಂಜೆ 5 ಗಂಟೆಗೆ ಬೃಹತ್ ಪ್ರಮಾಣಕ್ಕೇರಿತ್ತು.

68,102 ಕ್ಯುಸೆಕ್ ಒಳಹರಿವಿದ್ದು, 17 ಕ್ರಸ್ಟ್ ಗೇಟ್‌ಗಳನ್ನು 2.5 ಅಡಿ ಮತ್ತು 9 ಕ್ರಸ್ಟ್‌ಗೇಟ್‌ಗಳನ್ನು 3.5 ಅಡಿ ಎತ್ತರಿಸಿ ಒಟ್ಟು 26 ಕ್ರಸ್ಟ್‌ಗೇಟ್‌ಗಳ ಮೂಲಕ 84,736 ಕ್ಯುಸೆಕ್ ಸೇರಿ 88,590 ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. ಕಾಲುವೆಗೆ ಹರಿಸುತ್ತಿರುವುದನ್ನು ಸೇರಿ ಒಟ್ಟಾರೆ 98,299 ಕ್ಯುಸೆಕ್ ಹೊರಹರಿವು ಇತ್ತು.

105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಟಿಬಿ ಡ್ಯಾಂನಲ್ಲಿ ಈ ವರ್ಷ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ನಿರ್ಧರಿಸಲಾಗಿದ್ದು, ಸದ್ಯ 77.54 ಟಿಎಂಸಿ ನೀರು ಸಂಗ್ರಹವಾಗಿದೆ. ಈ ವರ್ಷ ಜು. 2ರಂದು ಮೊದಲ ಬಾರಿಗೆ ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗಿತ್ತು. ಆನಂತರ ಒಳಹರಿವು ಇಳಿಕೆಯಾಗಿದ್ದರಿಂದ ನದಿಗೆ ಹರಿಸುವ ನೀರಿನ ಪ್ರಮಾಣ ಇಳಿಸಲಾಗಿತ್ತು.

ಇದೀಗ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮತ್ತು ತುಂಗಾ ಜಲಾಶಯದಿಂದ ಹಾಗೂ ವರದಾ ನದಿಗಳಿಂದ ಹೆಚ್ಚಿನ ಒಳಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ನದಿ ಪಾತ್ರದಲ್ಲಿ ಎಚ್ಚರಿಕೆ, ಟಿಬಿ ಬೋರ್ಡ್ ಅಲರ್ಟ್: ನದಿಗೆ 60ರಿಂದ 90 ಕ್ಯುಸೆಕ್ ನೀರು ಹರಿಸಲಿದ್ದು, ನದಿ ಪಾತ್ರದಲ್ಲಿ ಎಚ್ಚರಿಕೆ ವಹಿಸುವಂತೆ ಟಿಬಿ ಬೋರ್ಡ್ ಸಂಬಂಧಿಸಿದ ಆಡಳಿತಗಳಿಗೆ ಅಲರ್ಟ್ ಸಂದೇಶ ನೀಡಿತ್ತು.

ಟಿಬಿ ಡ್ಯಾಂಗೆ ಪ್ರಸ್ತುತ 68 ಸಾವಿರ ಕ್ಯುಸೆಕ್ ಒಳಹರಿವಿದ್ದು, 77.54 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಾ ಜಲಾಶಯದಿಂದ 70 ಸಾವಿರ ಮತ್ತು ಭದ್ರಾ ಜಲಾಶಯದಿಂದ 20 ಸಾವಿರ ಕ್ಯುಸೆಕ್ ಹಾಗೂ ವರದಾ ನದಿಯಿಂದಲೂ ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, 60ರಿಂದ 90 ಕ್ಯುಸೆಕ್ ವರೆಗೆ ನೀರು ನದಿಗೆ ಹರಿಸುವ ಎಚ್ಚರಿಕೆ ನೀಡಿದೆ‌.

ಸ್ಮಾರಕಗಳು ಮುಳುಗಡೆ: ಹೆಚ್ಚಿನ ಪ್ರಮಾಣದ ನೀರು ಹರಿಸಿದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ನದಿ ಪಾತ್ರದಲ್ಲಿರುವ ಸ್ಮಾರಕಗಳು ಮುಳುಗಡೆ ಹಂತಕ್ಕೆ ತಲುಪಿದ್ದು, ಪ್ರವಾಸಿಗರನ್ನು ನದಿ ಪಾತ್ರಕ್ಕೆ ತೆರಳದಂತೆ ಪೊಲೀಸರು ಎಚ್ಚರಿಕೆ ನೀಡಿದರು. ಬೆಳಗ್ಗೆಯಿಂದ ಹಂತ ಹಂತವಾಗಿ ನೀರು ಹೆಚ್ಚಳ ಮಾಡಿದ್ದು, ಪುರಂದರ ಮಂಟಪ ಅರ್ಧ ಮುಳುಗಡೆಯಾಗಿತ್ತು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ