ಕೊಪ್ಪಳ: ಒಂದು ಪುಸ್ತಕ ಎಂದರೆ ಕೇವಲ ಕಾಗದದ ಕಟ್ಟಲ್ಲ, ಅದು ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಜ್ಞಾನದ ಬಾಗಿಲು. ಸರ್ಕಾರವೂ ಇದೇ ಉದ್ದೇಶದಿಂದ ಪ್ರತಿವರ್ಷ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸುತ್ತದೆ.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಗುಜರಿ ಅಂಗಡಿಯಲ್ಲಿ ಎಂಟನೇ ಹಾಗೂ ಒಂಬತ್ತನೇ ತರಗತಿಯ ಪಠ್ಯಪುಸ್ತಕಗಳು ಇರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಾಲಾ–ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್ ಹಾಗೂ ಗೌರವಾಧ್ಯಕ್ಷ ಬಸವರಾಜ ಶೀಲವಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾಹಿತಿ ನಿಜವೆಂದು ಖಚಿತವಾದ ಆನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿಇಒ ಸೂಚನೆಯಂತೆ ಇಲಾಖೆಯ ಸಿಬ್ಬಂದಿ ವೈಶಂಪಾಯನ ಮತ್ತು ಸದಾನಂದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಗುಜರಿ ಅಂಗಡಿಯಲ್ಲಿದ್ದ ಪುಸ್ತಕಗಳನ್ನು ತೂಕ ಮಾಡಿದಾಗ ಒಟ್ಟು 99 ಕೆ.ಜಿ. ಪಠ್ಯಪುಸ್ತಕಗಳು ಪತ್ತೆಯಾಗಿದ್ದು, ಅವುಗಳನ್ನು ಇಲಾಖೆಯ ವಶಕ್ಕೆ ಪಡೆದುಕೊಳ್ಳಲಾಯಿತು.
ಸರ್ಕಾರಿ ಶಾಲೆಗಳಿಗೆ ಬರುವ ಪ್ರತಿಯೊಂದು ಪುಸ್ತಕಕ್ಕೂ ಲೆಕ್ಕವಿರುತ್ತದೆ. ಎಷ್ಟು ಪುಸ್ತಕಗಳು ಬಂದವು? ಎಷ್ಟು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು? ಎಷ್ಟು ಉಳಿದಿವೆ ಎಂಬ ವಿವರಗಳು ಶಾಲೆ ಮತ್ತು ಶಿಕ್ಷಣ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿರುತ್ತವೆ. ಆದರೂ ಇಷ್ಟೊಂದು ಪ್ರಮಾಣದ ಪುಸ್ತಕಗಳು ಗುಜರಿ ಅಂಗಡಿಗೆ ತಲುಪಿರುವುದು ಅಚ್ಚರಿ ಮೂಡಿಸಿದೆ.
ಈ ಪ್ರಕರಣದಲ್ಲಿ ಕೇವಲ ಪುಸ್ತಕಗಳನ್ನು ವಶಪಡಿಸಿಕೊಳ್ಳುವುದರಿಂದ ಕೆಲಸ ಮುಗಿಯುವುದಿಲ್ಲ, ಅವು ಯಾವ ಶಾಲೆಯವು? ಯಾವ ಶೈಕ್ಷಣಿಕ ವರ್ಷದವು? ಯಾರಿಂದ ಗುಜರಿಗೆ ಮಾರಾಟವಾಗಿವೆ? ಇದರಲ್ಲಿ ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿಯ ಪಾತ್ರ ಇದೆಯೇ? ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಂಡರೆ ಮಾತ್ರ ಇಂತಹ ಘಟನೆಗಳಿಗೆ ತಡೆ ಬೀಳಲಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.