ಕಾರವಾರ: ನಗರದ ರವೀಂದ್ರನಾಥ ಟಾಗೋರ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏ. 18 ರಿಂದ 22 ವರೆಗೆ 5 ದಿನಗಳವರೆಗೆ ಕರಾವಳಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಇಲ್ಲಿನ ಜಿಪಂ ಸಭಾಂಗಂಣದಲ್ಲಿ ಸೋಮವಾರ ಕರಾವಳಿ ಉತ್ಸವ ಹಾಗೂ ಶಿವರಾತ್ರಿ ಆಚರಣೆ ಕುರಿತಂತೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮಟ್ಟದ ಕರಾವಳಿ ಉತ್ಸವ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ತಿಳಿಸಿದ ಅವರು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂಬಂಧ ಕಲಾವಿದರನ್ನು ಸಂಪರ್ಕಿಸುವಂತೆ ಮತ್ತು ಸ್ಥಳೀಯ ಕಲಾವಿದರಿಂದಲೂ ಕಾರ್ಯಕ್ರಮದಲ್ಲಿ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲಾಡಳಿತ ವತಿಯಿಂದ ಫೆ. 26ರಂದು ಮುರ್ಡೇಶ್ವರದಲ್ಲಿ ಶ್ರದ್ಧಾ ಭಕ್ತಿಪೂರ್ವಕವಾಗಿ ಶಿವರಾತ್ರಿ ಆಚರಣೆಯನ್ನು ಹಾಗೂ ಫೆ. 27ರಂದು ಗೋಕರ್ಣದಲ್ಲಿ ಶಿವರಾತ್ರಿ ಆಚರಿಸಲಾಗುವುದು ಎಂದ ಸಚಿವರು, ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ ಕಳೆದ ವರ್ಷ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಲಾಗಿತ್ತು. ಅದರಂತೆ ಈ ಬಾರಿಯು ವಿವಿಧ ಸಂಘ- ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಹಾಗೂ ಎಲ್ಲ ಸಹಕಾರದಿಂದ ಭಕ್ತಿಪೂರ್ವಕವಾಗಿ ಆಚರಿಸಲಾಗುವುದು ಎಂದರು.ಕದಂಬೊತ್ಸವ ಆಚರಣೆ ಕುರಿತಂತೆ ಶಿರಸಿಯಲ್ಲಿ ಪ್ರತ್ಯೇಕ ಸಭೆ ಆಯೋಜಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕ ಸತೀಶ ಸೈಲ್, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಎಂಎಲ್‌ಸಿ ಗಣಪತಿ ಡಿ. ಉಳ್ವೇಕರ್, ಡಿಸಿ ಲಕ್ಷ್ಮೀಪ್ರಿಯಾ, ಸಿಇಒ ಈಶ್ವರಕುಮಾರ ಕಾಂದೂ ಮೊದಲಾದವರು ಇದ್ದರು.ಕಿತ್ರೆ ದೇವಸ್ಥಾನದಲ್ಲಿ ನಾಳೆಯಿಂದ ವರ್ಧಂತ್ಯುತ್ಸವ, ರಥೋತ್ಸವ
ಭಟ್ಕಳ: ತಾಲೂಕಿನ ದೇವಿಮನೆಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ. ೫ರಿಂದ ೭ರ ವರೆಗೆ ದೇವರ ವರ್ಧಂತ್ಯುತ್ಸವ, ದೇವರ ರಜತ ಉತ್ಸವಮೂರ್ತಿ ಸಮರ್ಪಣೆ ಹಾಗೂ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.ಕಿತ್ರೆ ದೇವಿಮನೆಗೆ ಫೆ. ೪ರಂದು ಸಂಜೆ ರಾಘವೇಶ್ವರ ಭಾರತೀ ಸ್ವಾಮೀಜಿ ಆಗಮಿಸಲಿದ್ದಾರೆ. ಫೆ. ೫ರಂದು ಬೆಳಗ್ಗೆ ಗಣೇಶ ಪೂಜಾ, ದೇವತಾ ಪ್ರಾರ್ಥನೆ, ನಾಂದಿ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಗ್ವರಣ, ಬ್ರಹ್ಮಕೂರ್ಚಾ ಹವನ, ಮಹಾಗಣಪತಿ ಪ್ರೀತ್ಯರ್ಥ ಅರ್ಥರ್ವಶೀರ್ಷ ಹವನ, ಮಹಾಪೂಜೆ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಸಂಜೆ ೬ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜನಾ ಅಶೋಕ ಭಟ್ಟ ಅವರಿಂದ ಸಂಗೀತ ಸಂಜೆ, ಮಂಗಲಾ ಬಾಲಚಂದ್ರ ಭಟ್ಟ ಬೆಂಗಳೂರು ಅವರಿಂದ ಹರಿಕಥಾಮೃತ ನಡೆಯಲಿದೆ. ಫೆ. ೬ರಂದು ಬೆಳಗ್ಗೆ ಗಣೇಶ ಪೂಜೆ, ಪುಣ್ಯಾಹ, ರುದ್ರಹವನದ ಮಹಾಸಂಕಲ್ಪ, ಶ್ರೀದೇವರಿಗೆ ಕಲಾವೃದ್ಧಿ- ಯಾದಿ ಹವನ, ವೀರಭದ್ರ ದೇವರ ಪ್ರೀತ್ಯರ್ಥ ರುದ್ರವನದ ಪೂರ್ಣಾಹುತಿ, ಬಲಿ, ರಥ ಸಂಪ್ರೋಕ್ಷಣೆ, ಶ್ರೀದೇವರ ರಥಾರೋಹಣ, ಮಹಾರಥೋತ್ಸವ, ಅನ್ನ ಸಂತರ್ಪಣೆ ನಡಯಲಿದೆ.ಮಧ್ಯಾಹ್ನ ೩ ಗಂಟೆಗೆ ಸಿದ್ದಾಪುರದ ಶಿರಳಗಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದೆ. ಸಂಜೆ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಕಾರ್ತಿಕ ಚಿಟ್ಟಾಣಿ ಅವರ ಸಾರಥ್ಯದಲ್ಲಿ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ ಪಂಚದುರ್ಗಾ ಹವನ, ಅಗ್ನಿಜನನ, ಅಗ್ನಿಸಂಸ್ಕಾರ, ಕಲಶಸ್ಥಾಪನೆ, ರಾಜೋಪಚಾರ ಪೂಜೆ, ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಫೆ. ೭ರಂದು ಗಣೇಶ ಪೂಜಾ, ಪುಣ್ಯಾಹ, ಪಂಚದುರ್ಗಾ ಹವನ, ಮಹಾಸಂಕಲ್ಪ, ಹವನದ ಪೂರ್ಣಾಹುತಿ, ದೇವರಿಗೆ ಕಲಶಾಭಿಷೇಕ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ತಿಳಿಸಿದ್ದಾರೆ.