ನಿವೃತ್ತ ಯೋಧ ರವೀಂದ್ರರಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Feb 04, 2025, 12:30 AM IST
ಚಿತ್ರ 3ಬಿಡಿಆರ್‌1ಔರಾದ್‌ ತಾಲೂಕಿನ ಜೀರ್ಗಾ (ಬಿ) ಗ್ರಾಮಕ್ಕೆ ವಾಪಸ್ಸಾದ ಸಂದರ್ಭಧಲ್ಲಿ ಯೋಧ ರವೀಂದ್ರ ಅವರನ್ನು ಅದ್ಧೂರಿಯ ಮೆರವಣಿಗೆ ಮೂಲಕ ಕರೆ ತರಲಾಯಿತು. | Kannada Prabha

ಸಾರಾಂಶ

ಬೀದರ್‌ ಔರಾದ್‌ ಹೆದ್ದಾರಿಯಲ್ಲಿರುವ ಧರಿ ಹನುಮಾನ ಕ್ಷೇತ್ರದಿಂದ ತೆರೆದ ವಾಹನದಲ್ಲಿ ಯೋಧ ರವೀಂದ್ರ ಅವರನ್ನು ಪತ್ನಿ ಅಶ್ವಿನಿ ಜೊತೆ ಸಂತಪೂರ ಮಾರ್ಗವಾಗಿ ಜೀರ್ಗಾ (ಬಿ) ಗ್ರಾಮದವರೆಗೆ ಮೆರವಣಿಗೆ ಮಾಡಿ ಬರ ಮಾಡಿಕೊಳ್ಳಲಾಯಿತು. ಗ್ರಾಮದ ಯುವಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು, ಜಯ ಘೋಷಗಳ ಮೂಲಕ ಬೈಕ್‌ ರ‍್ಯಾಲಿ ನಡೆಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ದೇಶದ ವಿವಿಧೆಡೆ 21 ವರ್ಷಗಳ ಕಾಲ ಸಿಆರ್‌ಪಿಎಫ್‌ ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಹುಟ್ಟೂರಿಗೆ ಮರಳಿದ ಔರಾದ್‌ ತಾಲೂಕಿನ ಜೀರ್ಗಾ (ಬಿ) ಗ್ರಾಮದ ಯೋಧ ರವೀಂದ್ರ ಕೊಡುಗೆ ಅವರನ್ನು ಗ್ರಾಮಸ್ಥರು ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡರು.ಬೀದರ್‌ ಔರಾದ್‌ ಹೆದ್ದಾರಿಯಲ್ಲಿರುವ ಧರಿ ಹನುಮಾನ ಕ್ಷೇತ್ರದಿಂದ ತೆರೆದ ವಾಹನದಲ್ಲಿ ಯೋಧ ರವೀಂದ್ರ ಅವರನ್ನು ಪತ್ನಿ ಅಶ್ವಿನಿ ಜೊತೆ ಸಂತಪೂರ ಮಾರ್ಗವಾಗಿ ಜೀರ್ಗಾ (ಬಿ) ಗ್ರಾಮದವರೆಗೆ ಮೆರವಣಿಗೆ ಮಾಡಿ ಬರ ಮಾಡಿಕೊಳ್ಳಲಾಯಿತು. ಗ್ರಾಮದ ಯುವಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು, ಜಯ ಘೋಷಗಳ ಮೂಲಕ ಬೈಕ್‌ ರ‍್ಯಾಲಿ ನಡೆಸಿದರು.ಬಳಿಕ ನಿವೃತ್ತ ಯೋಧ ಗ್ರಾಮದೊಳಗೆ ಕಾಲಿಡುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ, ಪುಷ್ಪಗಳನ್ನು ಚೆಲ್ಲಿ ವೇದಿಕೆಗೆ ಕರೆ ತಂದರು. ಈ ವೇಳೆ ಯೋಧ ತನ್ನ ಹೆತ್ತವರಿಗೆ ಸೆಲ್ಯೂಟ್‌ ಹೊಡೆದು, ತಲೆ ಮೇಲಿನ ಕ್ಯಾಪ್‌ನ್ನು ತೊಡಿಸಿ ಗೌರವ ಸಲ್ಲಿಸಿರುವುದು ಎಲ್ಲರನ್ನು ಭಾವುಕರನ್ನಾಗಿಸಿತು.ಗ್ರಾಮದ ಪರವಾಗಿ ರವೀಂದ್ರ ಜೊತೆಗೆ ಇತ್ತೀಚೆಗೆ ಭಾರತೀಯ ಸೇನೆಯಿಂದ ನಿವೃತ್ತಿಯಾದ ಮಹಾದೇವ ಕೋಟೆ ಅವರನ್ನು ಸಹ ಸನ್ಮಾನಿಸಲಾಯಿತು. ಜಿಲ್ಲೆಯ ನಿವೃತ್ತ ಯೋಧರು ಮತ್ತು ಕರ್ತವ್ಯ ನಿರತ ಸೈನಿಕರು, ಜೊತೆಗೆ ಸರ್ಕಾರಿ ಹುದ್ದೆಯಿಂದ ನಿವೃತ್ತರಾದ ಗ್ರಾಮದ ಹಿರಿಯ ಜೀವಿಗಳನ್ನು ಗೌರವಿಸಲಾಯಿತು.ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ಮನೆ, ಬಂಧು-ಬಳಗ ಮತ್ತು ಸಂತೋಷಗಳನ್ನು ತ್ಯಾಗ ಮಾಡಿ ಗಡಿಯಲ್ಲಿ ದೇಶ ಕಾಯುವ ಯೋಧರ ತ್ಯಾಗ, ದೇಶಪ್ರೇಮ ಸದಾ ಸ್ಮರಣೀಯ. ಯೋಧರು ನಮಗಾಗಿ ಬಾಹ್ಯ ದುಷ್ಟ ಶಕ್ತಿಗಳಿಂದ ರಾಷ್ಟ್ರವನ್ನು ರಕ್ಷಿಸುತ್ತಾರೆ. ಸೇವೆಯಿಂದ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ರವೀಂದ್ರ ಅವರನ್ನು ಹೃದಯ ಸ್ಪರ್ಶಿಯಾಗಿ ಬರಮಾಡಿಕೊಂಡು ಗೌರವಿಸಿರುವುದು ಹೆಮ್ಮೆಯ ವಿಷಯ ಎಂದರು.ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ರೂಪಗೊಳ್ಳುವಲ್ಲಿ ಯೋಧರ ಪರಿಶ್ರಮವಿದೆ. ಯುವ ಜನರು ದುಶ್ಚಟಗಳ ದಾಸರಾಗದೇ ದೇಶ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ಯೋಧರು ಯುವ ಪೀಳಿಗೆಗೆ ಸ್ಪೂರ್ತಿಯಾಗಬೇಕು. ಈ ಗ್ರಾಮದಂತೆ ಎಲ್ಲರಲ್ಲಿ ಸಾಮರಸ್ಯ ಮೂಡಿದಾಗಲೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಹೇಳಿದರು.ಹೆಡಗಾಪುರದ ಕೇದಾರನಾಥ ಶಿವಾಚಾರ್ಯರು ಮಾತನಾಡಿ, ದೇಶದ ರಕ್ಷಣೆಗಾಗಿ ತನ್ನ ಕುಡಿಯನ್ನು ಕೊಟ್ಟ ಯೋಧನ ಹೆತ್ತವರು ಮತ್ತು ಮಡದಿಯ ತ್ಯಾಗ ದೊಡ್ಡದು. ನಮ್ಮ ನೆಮ್ಮದಿಯ ಬದುಕಿಗಾಗಿ ಯೋಧರು ಗಡಿಯಲ್ಲಿ ಹೋರಾಡುತ್ತಾರೆ ಎಂದು ಬಣ್ಣಿಸಿದರು.ಸಿಪಿಐ ರಘವೀರಸಿಂಗ್‌ ಠಾಕೂರ್‌ ಉದ್ಘಾಟಿಸಿದರು. ಹಿರಿಯ ಸಂಗಪ್ಪ ದೇಗಲ್ವಾಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದಿ, ಪಿಕೆಪಿಎಸ್‌ ಅಧ್ಯಕ್ಷ ಬಸಯ್ಯ ಸ್ವಾಮಿ, ಬಸವ ಬಳಗದ ಜಿಲ್ಲಾಧ್ಯಕ್ಷ ಸಂಜುಕುಮಾರ ಜುಮ್ಮಾ, ಶಿವಾನಂದ ಶಿವು ಮುಕ್ತೇದಾರ್‌, ವೀರನಾರಿ ಸುಮನ್‌ ಜಾಧವ್‌ ಮತ್ತಿತರರಿದ್ದರು.ದೇಶದ ದೆಹಲಿ, ಜಮ್ಮು ಕಾಶ್ಮೀರ, ಬಿಹಾರ, ಹೈದ್ರಾಬಾದ್‌, ಬಾನಾಘಾಟ, ಛತ್ತಿಸಘಡ, ಜಾರ್ಖಂಡ್‌ನಲ್ಲಿ ಕಾನ್‌ಸ್ಟೇಬಲ್‌, ಹವಾಲ್ದಾರ್‌ ಆಗಿ ಕೆಲಸ ಮಾಡಿದ್ದು, ಕೊನೆಗೆ ಕ್ಲಿಷ್ಟ ಸೇವೆಯಾಗಿರುವ ಜಂಗಲ್‌ ಕೋಬ್ರಾ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದಿದ್ದೇನೆ. ಬಂಧು- ಬಳಗವನ್ನು ಬಿಟ್ಟು ಎರಡು ದಶಕಗಳ ಕಾಲ ದೇಶದ ಸೇವೆ ಮಾಡಿದ್ದಕ್ಕೆ ಈ ದಿನ ತಾವು ನೀಡಿದ ಗೌರವಕ್ಕೆ ಚಿರ ಋಣಿಯಾಗಿದ್ದೇನೆ. ನಾನೀಗ ಸ್ವಯಂ ನಿವೃತ್ತಿ ಪಡೆದಿದ್ದರೂ ದೇಶಕ್ಕಾಗಿ ಅಗತ್ಯ ಎನಿಸಿದರೆ ಯಾವುದೇ ಕ್ಷಣದಲ್ಲೂ ದುಡಿಯಲು ಸಿದ್ಧನಿದ್ದೇನೆ. ಈ ರೀತಿ ಭವ್ಯ ಸ್ವಾಗತ ನೀಡಿರುವುದು ಸಂತೋಷ ತಂದಿದೆ ಎಂದು ನಿವೃತ್ತ ಯೋಧ ರವೀಂದ್ರ ಕೊಡಗೆ ಹರ್ಷ ವ್ಯಕ್ತಪಡಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ