ಬೆಂಗಳೂರು : ರಸ್ತೆಯಲ್ಲಿ ಆಟವಾಡುತ್ತಿದ್ದ 3.5 ವರ್ಷದ ಬಾಲಕಿಯ ಮೇಲೆ ಐದಾರು ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ಸಹಕಾರ ನಗರದ ಸಿಕ್ಯುಎಎಲ್ ಲೇಔಟ್‌ನಲ್ಲಿ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಯಾದಗಿರಿ ಮೂಲದ ಕೂಲಿ ಕಾರ್ಮಿಕ ಹನುಮಂತಪ್ಪ ಎಂಬುವರ ಪುತ್ರಿ ಸಂಗೀತಾ ಗಾಯಗೊಂಡಿದ್ದು, ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಟ್ಟಡ ನಿರ್ಮಾಣ ಕೆಲಸಕ್ಕೆಂದು ನಗರಕ್ಕೆ ಬಂದಿರುವ ಹನುಮಂತಪ್ಪ ಕುಟುಂಬದವರು ಸಿಕ್ಯುಎಎಲ್ ಲೇಔಟ್‌ನಲ್ಲಿ ಶೆಡ್ ಹಾಕಿಕೊಂಡು ನೆಲೆಸಿದ್ದಾರೆ. ಭಾನುವಾರ ಎಂದಿನಂತೆ ಮನೆ ಪಕ್ಕದ ರಸ್ತೆಯಲ್ಲಿ ಬಾಲಕಿ ಒಬ್ಬಳೇ ಆಟವಾಡುತ್ತಿದ್ದಳು. ಈ ವೇಳೆ ಐದಾರು ನಾಯಿಗಳ ಹಿಂಡು ಒಂದರ ನಂತರ ಒಂದರಂತೆ ಬಾಲಕಿಯ ಮೇಲೆ ಎರಗಿ ಕಚ್ಚಿ ಎಳೆದಾಡಿವೆ. ಎರಡು ಕಾಲುಗಳು, ಕೈಗಳು ಹಾಗೂ ತೋಳಿನ ಮೇಲೆ ಕಚ್ಚಿ ಗಾಯಗೊಳಿಸಿವೆ. ಕಿರುಚಾಟ ಕೇಳಿದ ಕೂಡಲೇ ತಾಯಿ ಹಾಗೂ ಕುಟುಂಬ ಸದಸ್ಯರು ಓಡಿ ಬಂದು ನಾಯಿಗಳನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಾಯಗೊಂಡ ಬಾಲಕಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇವೆ. ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ. ಆ ಪ್ರದೇಶದಲ್ಲಿ ನಾಯಿಗಳನ್ನು ಹಿಡಿಯಲು ಮಂಗಳವಾರ ಕಾರ್ಯಾಚರಣೆ ನಡೆಸಲಾಗುತ್ತದೆ. ನಿಯಮಿತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಜಿಬಿಎ ಪಶು ವೈದ್ಯಾಧಿಕಾರಿ ಗಂಗಾಧರಯ್ಯ ತಿಳಿಸಿದರು.
ಬೀದಿನಾಯಿಗಳಿಂದ ನಗರದ ರಸ್ತೆಗಳನ್ನು ಮುಕ್ತಗೊಳಿಸಲು ಇನ್ನು ಎಷ್ಟು ವರ್ಷಗಳು ಬೇಕು? ಇನ್ನು ಎಷ್ಟು ಮಕ್ಕಳು ರೀತಿ ದಾಳಿಗೆ ಒಳಗಾಗಬೇಕು ಎಂದು ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.