ಕಾರವಾರ: ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಯ ಹರಿಕಾರರಾದ ಬ್ರಹ್ಮರ್ಷಿ ನಾರಾಯಣ ಗುರು ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರು ಸಮಾಜದಲ್ಲಿ ಮಾಡಿದ ಕ್ರಾಂತಿಕಾರಿ ಬದಲಾವಣೆಗಳು ಹಾಗೂ ಯೋಜನೆಗಳು, ಹಿಂದುಳಿದ ಮತ್ತು ಜನಸಾಮಾನ್ಯರ ಬದುಕಿಗೆ ಸದಾ ದಾರಿದೀಪವಾಗಿದ್ದು, ಅವರ ಬದುಕಿನಲ್ಲಿ ನೆಮ್ಮದಿ ಮೂಡಿಸಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಮಂಗಳವಾರ ಕುಮಟಾ ತಾಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಾಮಧಾರಿ ಸಂಘ ಕುಮಟಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣ ಗುರು ಹಾಗೂ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶೋಷಿತರು ಹಿಂದುಳಿದವರು ಮತ್ತು ಬಡಜನರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಅರಸು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯಗಳ ಸ್ಥಾಪನೆ ಹಾಗೂ ವಿದ್ಯಾರ್ಥಿವೇತನ ನೀಡುವ ಮೂಲಕ ಅವರ ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದರು. ಸಮಾನತೆಯ ಹರಿಕಾರ ಎಂದು ಕರೆಯಲ್ಪಡುವ ಅವರು, ಗೇಣಿ ಪದ್ಧತಿಯ ನಿರ್ಮೂಲನೆ ಮಾಡುವ ಮೂಲಕ ಉಳುವವನಿಗೂ ಭೂ ಒಡೆತನ ನೀಡುವ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದು, ವೃದ್ಧಾಪ್ಯವೇತನ, ವಿಧವಾ ವೇತನ ಮುಂತಾದ ಜನಹಿತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು ಎಂದರು.
ಬ್ರಹ್ಮರ್ಷಿ ನಾರಾಯಣ ಗುರುಗಳು ಜಾತಿ ಧರ್ಮದ ಭೇದ ತೊರೆದು ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ್ದು, ಎಲ್ಲರಿಗೂ ಸಮನತೆಯ ಹಕ್ಕು ದೊರೆಯಬೇಕು ಎಂಬ ಉದ್ದೇಶದಿಂದ 165ಕ್ಕೂ ಹೆಚ್ಚು ದೇವಾಲಯಗಳನ್ನು ಕಟ್ಟಿ ಎಲ್ಲ ಜಾತಿ ಧರ್ಮದವರಿಗೂ ದೇವಾಲಯ ಪ್ರವೇಶಕ್ಕೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿದ್ದ ಅವರು ಮಹಿಳೆಯರಿಗೆ ಹಕ್ಕು ಮತ್ತು ಸ್ವಾತಂತ್ರ್ಯ ದೊರಕಿಸಲು ಪ್ರಯತ್ನಿಸಿದ್ದರು. ಅವರು ತೋರಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು.ಶಾಸಕ ಭೀಮಣ್ಣ ನಾಯ್ಕ್, ಶಾಂತಾರಾಮ ಸಿದ್ದಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಹೆಚ್ಚುವರಿ ಪೊಲೀಸ್ ವರಿಷ್ಠ ಜಯಕುಮಾರ್ ಮತ್ತಿತರರು ಇದ್ದರು.ಜಿಲ್ಲಾ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸತೀಶ್ ಸ್ವಾಗತಿಸಿದರು. ವೀಣಾ ವಂದಿಸಿದರು.