ಕನ್ನಡಪ್ರಭ ವಾರ್ತೆ ದಾವಣಗೆರೆ
ಅಕಾಡೆಮಿ ಪ್ರಶಸ್ತಿ ನೀಡುವಲ್ಲಿ, ಪ್ರಶಸ್ತಿಗೆ ಮಹಿಳಾ ಕಲಾವಿದರನ್ನು ಪರಿಗಣಿಸದಿರುವುದೂ ಸೇರಿದಂತೆ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರಿಗೆ ಆಗುತ್ತಿರುವ ಅನ್ಯಾಯ, ತಾರತಮ್ಯದ ಬಗ್ಗೆ ಚರ್ಚಿಸಲು, ಕಲಾವಿದರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಆ.12ರಂದು ನಗರದಲ್ಲಿ ರಾಜ್ಯದ ವೃತ್ತಿ ರಂಗಭೂಮಿ ಕಲಾವಿದರ ರಾಜ್ಯಮಟ್ಟದ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಎ.ಭದ್ರಪ್ಪ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೃತ್ತಿ ರಂಗಭೂಮಿಯಲ್ಲಿ ಬದುಕು ಕಟ್ಟಿಕೊಂಡ ಅಸಂಖ್ಯಾತ ಕಲಾವಿದರು ನಿರಂತರ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತ, ಜನಮನ ರಂಜಿಸುತ್ತ ಬಂದಿದ್ದರೂ ಹಲವಾರು ಸಂಕಷ್ಟ, ಸಮಸ್ಯೆಗಳ ಮಧ್ಯೆಯೂ ರಂಗ ಕಾಳಜಿಯನ್ನು ಮೈಗೂಡಿಸಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ವೃತ್ತಿ ರಂಗಭೂಮಿ ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿಗಳಿಗೆ ನಿರ್ದೇಶಕರು, ಅಧ್ಯಕ್ಷರು, ಸದಸ್ಯರ ನೇಮಕ ಮಾಡುವಾಗ ರಂಗಭೂಮಿಯ ಬಗ್ಗೆ ಅರಿತ, ನುರಿತ, ಅರ್ಹ ಕಲಾವಿದರನ್ನೇ ಆಯ್ಕೆ ಮಾಡಬೇಕು. ಕರ್ನಾಟಕ ವೃತ್ತಿ ರಂಗಭೂಮಿ ನಾಟಕ ಅಕಾಡೆಮಿಯನ್ನು ಪ್ರತ್ಯೇಕವಾಗಿ ಸ್ಥಾಪಿಸಬೇಕು ಎಂದರು.ನಾಟಕ ಅಕಾಡೆಮಿಗೆ ನೇಮಿಸುವ ಅಧ್ಯಕ್ಷರು ಬಹುತೇಕರು ವೃತ್ತಿ ರಂಗಭೂಮಿಗೆ ವಿರೋಧಿ ಮನೋಭಾವದವರೆಂಬುದು ಅರ್ಥವಾಗುತ್ತಿದೆ. ಕಲಾವಿದರಿಗೆ ನೀಡುವ ಮಾಸಾಶನ ಕನಿಷ್ಠ 5 ಸಾವಿರ ರು.ಗೆ ಹೆಚ್ಚಿಸಬೇಕು. ಕಲಾವಿದರ ಮಾಸಾಶನ ವಯೋಮಿತಿ 58 ವರ್ಷದಿಂದ 50 ವರ್ಷಕ್ಕೆ ಇಳಿಸಬೇಕು. ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ ಪ್ರಯೋಜನದ ಕಾರ್ಯಕ್ರಮಗಳ ಸಹಾಯಧನವನ್ನು ಕನಿಷ್ಠ 50 ಸಾವಿರ ರು.ಗೆ ಹೆಚ್ಚಿಸಬೇಕು. ಎಲ್ಲಾ ವೃತ್ತಿ ಕಲಾವಿದರನ್ನು ಅಸಂಘಟಿತರೆಂದು ಪರಿಗಣಿಸಿ, ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ವೃತ್ತಿ ರಂಗಭೂಮಿ ಕಲಾವಿದರಿಗೆ ಸಾರಿಗೆ, ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ವಸತಿ ರಹಿತ ಕಲಾವಿದರಿಗೆ ವಸತಿ ಸೌಲಭ್ಯ ಒಧಗಿಸಬೇಕು. ಅಕಾಡೆಮಿ ಪ್ರಶಸ್ತಿಯನ್ನು ಈಚೆಗೆ ವೃತ್ತಿಯೂ ಅಲ್ಲ, ಹವ್ಯಾಸಿಯೂ ಅಲ್ಲದ ಬಹುತೇಕರಿಗೆ ನೀಡಲಾಗಿದೆ ಎಂದು ದೂರಿದರು.ಮಹಿಳಾ ಕಲಾವಿದರಿಗೆ ಶೇ.50 ಮೀಸಲಾತಿ ನೀಡಬೇಕು. ಕಲಾವಿದರಿಗೆ ಸಾರಿಗೆ ವೈದ್ಯಕೀಯ ಸೌಲಭ್ಯ ದೊರಕಬೇಕು. ವಸತಿ ರಹಿತ ಕಲಾವಿದರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕಲಾವಿದರು ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಮಹೇಶ್ವರಪ್ಪ ದೊಡ್ಮನಿ, ತಿಪ್ಪೇಶರಾವ್ ಚೌಹಾಣ್, ಕೆಂಚಪ್ಪ, ಕೆ.ಸರೋಜಮ್ಮ, ಜಿ.ನಾಗವೇಣಿ ಇತರರು ಇದ್ದರು.ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ವೃತ್ತಿ ರಂಗಭೂಮಿ ಕಲಾವಿದರಿಗೆ, ವಿಶೇಷವಾಗಿ ಮಹಿಳೆಯರಿಗೆ ಅನ್ಯಾಯವಾಗಿದೆ. ದಾವಣಗೆರೆ ಆರ್.ಟಿ.ಅರುಣಕುಮಾರಂತಹ ಪ್ರತಿಭೆಗಳಿಗೆ ಪ್ರಶಸ್ತಿ ಸಿಕ್ಕಿದ್ದು ಅರ್ಹರಿಗೆ ಸಿಕ್ಕಿದೆ. ಅದಕ್ಕೆ ಅಭಿನಂದಿಸುತ್ತೇವೆ. ಆದರೆ, ವೃತ್ತಿ ರಂಗಭೂಮಿ ಕಲಾವಿದ, ಕಲಾವಿದೆಯರಿಗೆ ಕಡೆಗಣಿಸಿರುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಘೋಷಿತ ಪ್ರಶಸ್ತಿ ರದ್ಧುಪಡಿಸುವಂತೆ ನ್ಯಾಯಾಲಯದ ಮೊರೆ ಹೋಗಲಿದ್ದೇವೆ.
ಎ.ಭದ್ರಪ್ಪ, ರಾಜ್ಯಾಧ್ಯಕ್ಷ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ.