ಕೆ.ಆರ್.ಪೇಟೆ : ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವರಾಹನಾಥ ಸುಕ್ಷೇತ್ರದಲ್ಲಿ ತಾಯಿ ಶ್ರೀಮಹಾಲಕ್ಷ್ಮೀ ಅಮ್ಮನವರ ದೇವಾಲಯ ನಿರ್ಮಾಣಕ್ಕೆ ಸುರಪುರ ಮಹಾ ಸಂಸ್ಥಾನದ ರಾಜ ವಂಶಸ್ಥ ರಾಜಾ ಕೃಷ್ಣಪ್ಪ ನಾಯಕ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸುರಪುರ ಮಹಾ ಸಂಸ್ಥಾನ ಹಾಗೂ ಮೈಸೂರು ಮಹಾ ಸಂಸ್ಥಾನಕ್ಕೆ ಸಾವಿರಾರು ವರ್ಷಗಳಿಂದಲೂ ಅವಿನಾಭಾವ ಸಂಬಂಧವಿದೆ. ಸುಕ್ಷೇತ್ರದಲ್ಲಿ ತಾಯಿ ಮಹಾಲಕ್ಷ್ಮೀ ಅಮ್ಮನವರ ನೂತನ ದೇವಾಲಯದ ನಿರ್ಮಾಣಕ್ಕೆ ಸಂತೋಷದಿಂದ ಭೂಮಿ ಪೂಜೆ ಮಾಡಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದರು. ಭೂವರಾಹನಾಥ ಕಲ್ಲಹಳ್ಳಿ ಕ್ಷೇತ್ರವು ತಿರುಮಲ ತಿರುಪತಿ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಯಾಗುತ್ತಿದೆ. ಈಗ ಮಹಾಲಕ್ಷ್ಮೀ ಅಮ್ಮನವರ ಭವ್ಯವಾದ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿಸಿದ್ದಾರೆ. ದೇಗುಲ ಆದಷ್ಟು ಬೇಗ ನಿರ್ಮಾಣವಾಗಲಿದೆ ಎಂದು ತಿಳಿಸಿದರು.