)
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರವಾಗಿ ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಬುರಡೆ ಚಿನ್ನಯ್ಯ ಎಂಬಾತ ಎಸ್‌ಐಟಿಗೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಹಣಕಾಸು ವ್ಯವಹಾರಗಳ ಉಲ್ಲೇಖವಿದೆ. ಕೆಲವರ ಹೆಸರಿನ ಜೊತೆಗೆ ನಟ ಪ್ರಕಾಶ್ ರಾಜ್ ಅವರ ಹೆಸರೂ ಬಂದಿದೆ ಎಂದು ಆರೋಪಿಸಿದರು.ಪ್ರಕಾಶ್ ರಾಜ್ ಒಬ್ಬ ಉತ್ತಮ ನಟ. ಆದರೆ, ಧರ್ಮಸ್ಥಳದ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಷಡ್ಯಂತ್ರದಲ್ಲಿ ಅವರ ಹೆಸರು ಕೇಳಿಬರುತ್ತಿರುವುದು ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಚಿನಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.ಚಿತ್ರರಂಗದಿಂದ ಪ್ರಕಾಶ್ ರಾಜ್ ಅವರನ್ನು ಬಹಿಷ್ಕರಿಸುವಂತೆ ಚಿತ್ರರಂಗ ಮಂಡಳಿಗೆ ದೂರು ನೀಡಲಾಗುವುದು. ಅಗತ್ಯವಿದ್ದರೆ ಚೆನ್ನೈಗೂ ತೆರಳಿ ಚಿತ್ರರಂಗದವರ ಮುಂದೆ ವಿಷಯ ಪ್ರಸ್ತಾಪಿಸಲಾಗುವುದು ಎಂದರು.ಸೌಜನ್ಯ ಪ್ರಕರಣದ ಕುರಿತು ಮಾತನಾಡಿದ ಮುತಾಲಿಕ್, ನಾನು ಸೌಜನ್ಯ ಪರವಾಗಿದ್ದೇನೆ. ನ್ಯಾಯಾಲಯದ ಹೇಳಿಕೆಗಳು ಮತ್ತು ತನಿಖಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಇದೇ ವೇಳೆ ಹರಿಹರದಲ್ಲಿ ಪ್ರೊ.ಭಗವಾನ್ ಅವರು ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಮುತಾಲಿಕ್, ಅವರ ವಿರುದ್ಧ ತಕ್ಷಣ ಸುಮೋಟೋ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.ಧಾರ್ಮಿಕ ಗ್ರಂಥಗಳು, ದೇವರುಗಳು ಮತ್ತು ನಂಬಿಕೆಗಳ ವಿರುದ್ಧ ನಿರಂತರವಾಗಿ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಿಂದೂ ಸಂಘಟನೆಗಳು ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.