ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಚಿವ ಸಂಪುಟದಲ್ಲಿ ಮರಾಠ ಸಮುದಾಯದ ಒಬ್ಬರಿಗಾದರೂ ಸಚಿವ ಸ್ಥಾನ ನಿಶ್ಚಿತವಾಗಿ ದೊರೆಯುವ ವಿಶ್ವಾಸವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಚಿವ ಸಂಪುಟದಲ್ಲಿ ಮರಾಠ ಸಮುದಾಯದ ಒಬ್ಬರಿಗಾದರೂ ಸಚಿವ ಸ್ಥಾನ ನಿಶ್ಚಿತವಾಗಿ ದೊರೆಯುವ ವಿಶ್ವಾಸವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಕೆ.ಕೆ.ಎಂ.ಪಿ ಸಮುದಾಯ ಭವನದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮರಾಠ ಸಮುದಾಯದ ಸಮಾವೇಶ ಹಾಗೂ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸ್ವಾಭಿಮಾನಿಗಳಾದ ಮರಾಠ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಶ್ರೀನಿವಾಸ ಮಾನೆ ಅಥವಾ ಸಂತೋಷ ಲಾಡ ಅವರಿಗೆ ದೊರೆಯುವುದರಲ್ಲಿ ಎರಡು ಮಾತಿಲ್ಲ. ವಿಜಯಪುರ ಜಿಲ್ಲೆಯ ರಾಜಕಾರಣಕ್ಕೆ ಮರಾಠ ಸಮುದಾಯದ ಮುಖಂಡರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಮಾಜಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ತಂದೆ, ತಾಯಿ, ಸಮಾಜ, ದೇಶಕ್ಕೆ ಆದರ್ಶಪ್ರಾಯರಾಗಿದ್ದರು. ಅವರ ನಡೆ ನುಡಿ ಅತ್ಯಂತ ಸರಳವಾಗಿತ್ತು. ಮಹಿಳೆಯರಿಗೆ ಕೊಡುವ ಗೌರವ ಅವರಿಂದ ನಾವು ಕಲಿಯಬೇಕು. ಮಹಾರಾಜರಾಗಿದ್ದರೂ ಕೂಡ ಅವರಲ್ಲಿ ತಾನು ಮಹಾರಾಜ ಎಂಬ ಅಹಂ ಇರಲಿಲ್ಲ. ಬದಲಾಗಿ ತಾನೊಬ್ಬ ಸಾಮಾನ್ಯ ವ್ಯಕ್ತಿ ಎಂಬ ಸರಳತೆ ಇತ್ತು ಎಂದು ಹೇಳಿದರು.

ಸಾನ್ನಿದ್ಯ ವಹಿಸಿದ್ದ ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀನಿವಾಸ ಮಾನೆ ಹಾಗೂ ಸಂತೋಷ ಲಾಡ್ ಇಬ್ಬರಿಗೂ ಸಚಿವ ಸ್ಥಾನ ದೊರೆಯಬೇಕು. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠ ಸಮುದಾಯದ ನಿರ್ಣಾಯಕ ಪಾತ್ರವಿದೆ ಎಂದು ಹೇಳಿದರು.

ಪ್ರಾಚಾರ್ಯ ಮಂಜುನಾಥ ಜನಗೊಂಡ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹೆಚ್ಚು ಅಂಕ ಪಡೆದು ಮರಾಠ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನಿಂದ ಶಿಷ್ಯವೇತನ ನೀಡಿ ಗೌರವಿಸಲಾಯಿತು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ರಾಜ್ಯಾಧ್ಯಕ್ಷ ಸುರೇಶರಾವ ಸಾಠೆ ಅಧ್ಯಕ್ಷತೆ ವಹಿಸಿದ್ದರು. ಎಸ್.ಆರ್.ಸಿಂಧ್ಯಾ, ಟಿ.ಆರ್. ಸುನೀಲ ಚವ್ಹಾಣ, ಟಿ.ಆರ್. ವೆಂಕಟರಾವ ಚವ್ಹಾಣ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಉಮೇಶ ಕಾರಜೋಳ, ವಿಜಯಕುಮಾರ ಘಾಟಗೆ, ವಿಜಯಕುಮಾರ ಚವ್ಹಾಣ, ಶಂಕರ ಕನಸೆ, ಬಾಬುರಾವ ತರಸೆ, ಜ್ಯೋತಿಬಾ ಚವ್ಹಾಣ, ಸುಧಾಕರ ಘಾಟಗೆ, ಜ್ಯೋತಿರಾಮ ಪವಾರ, ಜಿಲ್ಲಾಧ್ಯಕ್ಷ ಭೀಮಾಶಂಕರ ಶಿವಾಳ್ಕರ, ರಾಮು ಜಾಧವ, ರಾಮು ಜಗತಾಪ, ರಮೇಶ ಗಾಯಕವಾಡ, ಬಾಳಾಸಾಹೇಬ ಚಿನಕೇಕರ, ರಾಮಣ್ಣ ಭೋಸಲೆ ಇತರರು ಇದ್ದರು.