ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಎಂದರೆ ಅದು ಕೆಂಪೇಗೌಡರಾಗಿದ್ದಾರೆ. ಇಡೀ ಪ್ರಪಂಚವೇ ಬೆಂಗಳೂರಿನ ಕಡೆ ತಿರುಗಿ ನೋಡುವಂತಹ ಕೆಲಸವನ್ನು ಕೆಂಪೇಗೌಡ ಅವರು ಮಾಡಿದ್ದಾರೆ. ಮಹಿಳೆಯರ ಸಬಲೀಕರಣ ಅತ್ಯಾಧುನಿಕ ನಗರ ನಿರ್ಮಾಣ, ಕೆರೆಕಟ್ಟೆಗಳ ಸಂರಕ್ಷಣೆ ಮಾಡಿದ್ದಾರೆ. ಅವರ ಮುಂದಾಲೋಚನೆಯಲ್ಲಿ ಇಂದು ನಾವು ಬೆಂಗಳೂರು ನಗರವನ್ನು ನಾವು ಅನುಭವಿಸುತ್ತಿದ್ದೇವೆ. ಆ ಎಲ್ಲಾ ವಿಷಯಗಳು ನಮಗೆ ಹೆಮ್ಮೆ ತರುತ್ತವೆ ಎಂದರು. ಪ್ರಸ್ತುತದಲ್ಲಿ ನಾಡಪ್ರಭು ಕೆಂಪೇಗೌಡ ಅವರು ಕೇವಲ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗದೆ. ಇಡೀ ದೇಶ ಇಡಿ ಪ್ರಪಂಚ ಕಂಡಂತಹ ಮಹಾನ್ ವ್ಯಕ್ತಿ ಆಗಿದ್ದಾರೆ. ದೀನದಲಿತರು ಬಡವರು ಹಿಂದುಳಿದ ವರ್ಗದವರು ಎಲ್ಲರೂ ಬೆಂಗಳೂರಿನಲ್ಲಿಂದು ಜೀವನ ಮಾಡುತ್ತಿದ್ದೇವೆ ಎಂದರೆ ಅದು ಅವರು ಹಾಕಿಕೊಟ್ಟಿರುವ ದಾರಿ ಮತ್ತು ಮಾರ್ಗದರ್ಶನದಿಂದ ಆಗಿದೆ ಎಂದರಲ್ಲದೆ ಶಾಸಕರು ಹಾಗೂ ಅಧ್ಯಕ್ಷರು ನಾವು ಸೇರಿ ಶ್ರೀ ಶಂಭುನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮುಂದಿನ ಬಾರಿಗೆ ಕೆಂಪೇಗೌಡ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡುತ್ತೇವೆ ಎಂದು ತಿಳಿಸಿದರು. ಗ್ರೇಟರ್ ಬೆಂಗಳೂರು ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ಕಾರಣಕರ್ತರು ಕೆಂಪೇಗೌಡರಾಗಿದ್ದಾರೆ ಅವರನ್ನು ನಾವೆಲ್ಲರೂ ಸ್ಮರಿಸೋಣ ಜೊತೆಗೆ ಅವರು ಹಾಕಿ ಕೊಟ್ಟಿರುವ ಮಾರ್ಗದರ್ಶನಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕೆಲಸವನ್ನು ಮಾಡೋಣ ಎಂದು ಕರೆ ನೀಡಿದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಜಯಂತಿಗಳ ಆಚರಣೆ ಮಾಡುವುದರ ಉದ್ದೇಶ ಆ ವ್ಯಕ್ತಿಗಳು ಮಾಡಿದಂತಹ ಕೆಲಸ, ಸಾಧನೆಗಳ ಸ್ಮರಿಸುವುದಾಗಿದೆ. ಕೆಂಪೇಗೌಡ ಅವರು ಪ್ರತಿಯೊಂದು ಜನಾಂಗಕ್ಕೆ ಆರ್ಥಿಕವಾಗಿ ವ್ಯವಹಾರಿಕವಾಗಿ ಕೃಷಿಗೆ ಸಂಬಂಧಪಟ್ಟಂತೆ ಅನೇಕ ರೀತಿಯ ಕೆಲಸಗಳನ್ನು ಮಾಡಿದ್ದಾರೆ. ಬೆಂಗಳೂರನ್ನು ವಿಶಾಲ ಮಟ್ಟದಲ್ಲಿ ಅಭಿವೃದ್ಧಿಪಡಿಸಿದವರು ಆಗಿದ್ದಾರೆ. ಕೆಂಪೇಗೌಡ ಅವರು ನಿರ್ಮಿಸಿರುವ ದೇವಾಲಯಗಳು ಕೆರೆಕಟ್ಟೆಗಳನ್ನು ಉಳಿಸಿಕೊಂಡು ಹೋಗುವಂತಹ ಜವಾಬ್ದಾರಿ ನಮ್ಮದಾಗಿದೆ. ನಾವು ಕೂಡ ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಹೇಳಿದರಲ್ಲದೆ ಈಗಾಗಲೇ ಸಂಸದರು ಹೇಳಿದ ರೀತಿಯಲ್ಲಿ ಶಂಭುನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಕಲೇಶಪುರದಲ್ಲಿ ಪುತ್ಥಳಿ ಮಾಡಿರುವ ಕಲಾವಿದರಿಗೆ ಮುಂಗಡ ಹಣವನ್ನು ನೀಡಿ ಬಂದಿದ್ದೇವೆ, ಮುಂದಿನ ಬಾರಿ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸುತ್ತೇವೆ ಎಂದು ಹೇಳಿದರು. ಪರರ ಹಿತಕ್ಕಾಗಿ ಸೇವೆ:
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶಂಭುನಾಥ ಸ್ವಾಮೀಜಿ ಮಾತನಾಡಿ, ಅರಮನೆ ಗುರುಮನೆ ಎಲ್ಲಿ ಹೇಗೆ ಸೇವೆ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟವರು, ತಿಳಿಸಿದವರು ಕೆಂಪೇಗೌಡರಾಗಿದ್ದಾರೆ. ತಂದೆ ತಾಯಿ ಸಂಸ್ಕಾರವನ್ನು ಹೇಳಿಕೊಟ್ಟರೆ ಮಕ್ಕಳು ಯಾವ ರೀತಿಯಲ್ಲಿ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಕೆಂಪೇಗೌಡ ಅವರು ಉದಾಹರಣೆಯಾಗಿದ್ದಾರೆ. ಇವರು ಪರರ ಹಿತಕ್ಕಾಗಿ ಸೇವೆ ಮಾಡಿದವರಾಗಿದ್ದಾರೆ. ಬೆಂಗಳೂರು ನಿರ್ಮಾತೃವಾಗಿ ಅನೇಕ ರೀತಿಯ ಕೆಲಸ ಕಾರ್ಯಗಳನ್ನು ಮಾಡಿ ಇಂದು ರಾಷ್ಟ್ರಗಳೇ ತಿರುಗಿ ನೋಡುವ ಹಾಗೆ ಕೆಲಸಗಳನ್ನು ಮಾಡಿದ್ದಾರೆ ಹಾಗಾಗಿ ಇಂತಹ ಜಯಂತಿಗಳಿಂದ ಉತ್ತಮವಾದ ಆದರ್ಶಗಳನ್ನು ನಮ್ಮ ಜೀವಿತಕ್ಕೆ ಅಳವಡಿಸಿಕೊಳ್ಳಬೇಕು. ಧಾರ್ಮಿಕ ವ್ಯಕ್ತಿಗಳ ಸಾಧನೆಗಳನ್ನು ನೆನೆಯುವಂತಹ ಕೆಲಸವನ್ನು ನಾವುಗಳೆಲ್ಲ ಮಾಡಬೇಕು ಎಂದು ತಿಳಿಸಿದರು.ಕನಸು ನಿರಂತರವಾಗಿರಬೇಕು: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ, ಕೆಂಪೇಗೌಡ ಅವರು ಸುಮಾರು ೭೯ ವರ್ಷಗಳ ಸುದೀರ್ಘ ಆಡಳಿತವನ್ನು ಮಾಡಿದವರಾಗಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದಾಗಲೇ ಹಂಪಿಯ ವೈಭವವನ್ನು ನೋಡಿ ನಾನು ಇದೇ ರೀತಿಯ ಸಾಮ್ರಾಜ್ಯವನ್ನು ಕಟ್ಟಬೇಕು ಎಂದು ಕನಸು ಕಂಡು ಅದನ್ನು ನನಸು ಮಾಡಿ ಬೃಹತ್ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದಾರೆ. ಇಂದು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಪರಿವರ್ತನೆಗೊಂಡಿದೆ. ಇಂದು ಬೆಳವಣಿಗೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವ ರೀತಿಯಲ್ಲಿ ಬೆಂಗಳೂರು ಬೆಳೆಯುತ್ತಿದೆ. ಆ ನಗರವನ್ನು ಮತ್ತಷ್ಟು ಸುವ್ಯವಸ್ಥಿತವಾಗಿ ಬೆಳೆಸುವಂತಹ ಜವಾಬ್ದಾರಿ ನಮಗಿದೆ. ಹಾಗಾಗಿ ಎಲ್ಲರೂ ಕನಸನ್ನು ಕಾಣುತ್ತಿರಬೇಕು, ಕನಸು ನಿರಂತರವಾಗಿರಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮಹಾ ಪೌರರಾದ ಎಂ. ಚಂದ್ರೇಗೌಡ ಅವರು ಮಾತನಾಡಿ, ವಿಶ್ವವಿಖ್ಯಾತ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದವರು ನಾಡಪ್ರಭು ಕೆಂಪೇಗೌಡರಾಗಿದ್ದಾರೆ. ವ್ಯಾಪಾರ, ವ್ಯವಹಾರ, ಕಟ್ಟಡಗಳ ನಿರ್ಮಾಣದ ಬಗೆಗೆ ಅಪಾರವಾದ ಜ್ಞಾನವನ್ನು ಹೊಂದಿದವರಾಗಿದ್ದರು. ಸರ್ವ ಜನಾಂಗಕ್ಕೆ ಶಾಂತಿಯ ತೋಟವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೆರೆಕಟ್ಟೆಯ ನೀರು ಒಂದೆಡೆ ಸೇರಲು ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಮಾಡಿದವರಾಗಿದ್ದಾರೆ. ಇವರು ನಡೆಸಿದ ಆಡಳಿತವನ್ನು ಅನುಸರಿಸಿ ಎಲ್ಲಾ ರಾಜಕಾರಣಿಗಳು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ. ಕೃಷ್ಣೇಗೌಡ ಅವರು ಮಾತನಾಡಿ, ಕೆಂಪೇಗೌಡ ಅವರು ಕಸುಬಿಗೆ ತಕ್ಕನಾದ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಆ ಮಾರುಕಟ್ಟೆಗಳಿಗೆಲ್ಲ ಕೋಟೆಯನ್ನು ನಿರ್ಮಾಣ ಮಾಡಿದ್ದರು. ರೈತರ ಬಗ್ಗೆ ಕಾಳಜಿಯನ್ನ ವಹಿಸಿ ಕೆರೆಕಟ್ಟೆ, ರಸ್ತೆಗಳನ್ನು ಅಭಿವೃದ್ಧಿಪಡಿಸಿ ಇಡೀ ಪ್ರಪಂಚದಲ್ಲಿ ಬೆಂಗಳೂರು ಎದ್ದು ಕಾಣುವ ಹಾಗೆ ಮಾಡಿದ್ದು ಕೆಂಪೇಗೌಡರಾಗಿದ್ದಾರೆ. ಅಂದು ಅವರು ಈ ನಗರವನ್ನ ನಿರ್ಮಾಣ ಮಾಡಲಿಲ್ಲ ಎಂದಿದ್ದರೆ ಇಂದು ಕರ್ನಾಟಕದಲ್ಲಿ ಇಂತಹ ವೈಭವಯುತವಾದ ನಗರ ಇರುತ್ತಿರಲಿಲ್ಲ ಎಂದು ಹೇಳಿದರು.ಮಹಾನ್ ವ್ಯಕ್ತಿ:
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುವಂತಹ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.