- ಕಡೂರು ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎನ್.ರಾಮ್ ಪ್ರಸಾದ್
---- ಬೇರೆಯವರಿಂದ ಬದಲಾವಣೆ ನಿರೀಕ್ಷಿಸುವುದಕ್ಕಿಂತ ಮೊದಲು ನಾವು ಬದಲಾವಣೆಗೆ ಯಾಗಬೇಕು
- ಕಡೂರಿನಲ್ಲಿ ಮರ ಗಿಡಗಳ ಸಂಖ್ಯೆ ಕಡಿಮೆ- ಪ್ರತಿಯೊಬ್ಬರು ನಾಲ್ಕಾರು ಗಿಡ ಗಳನ್ನು ನೆಟ್ಟು ಬೆಳೆಸಬೇಕು
- ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ಆವರಣದಲ್ಲಿ ಗಿಡ ನೆಡುತ್ತಿರುವುದು ಶ್ಲಾಘನೀಯಕನ್ನಡಪ್ರಭ ವಾರ್ತೆ, ಕಡೂರು
ಬೇರೆಯವರಿಂದ ಬದಲಾವಣೆ ನಿರೀಕ್ಷಿಸುವುದಕ್ಕಿಂತ ಮೊದಲು ನಾವು ಬದಲಾವಣೆಗೆ ಹೊಂದಿಕೊಂಡು ಮರ ಗಿಡಗಳನ್ನು ನೆಡುವ ಮೂಲಕ ಪ್ರಕೃತಿ ಉಳಿಸುವ ಕಾರ್ಯ ಮಾಡಬೇಕು ಎಂದು ಕಡೂರು ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಎನ್.ರಾಮ್ ಪ್ರಸಾದ್ ಕರೆ ನೀಡಿದರು.ಕಡೂರು ತಾಲೂಕಿನ ಸಿಂಗಟಗೆರೆ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಲೆನಾಡು ಪ್ರದೇಶವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಇದೇ ಜಿಲ್ಲೆಗೆ ಸೇರುವ ಕಡೂರಿನ ವಾತಾವರಣ ಭಿನ್ನವಾಗಿದೆ. ಕಡೂರಿನಲ್ಲಿ ಮರ ಗಿಡಗಳ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಪ್ರತಿಯೊಬ್ಬರು ನಾಲ್ಕಾರು ಗಿಡ ಗಳನ್ನು ನೆಟ್ಟು ಬೆಳೆಸಬೇಕು. ಸಿಂಗಟಗೆರೆ ಪೊಲೀಸ್ ಠಾಣೆ ಸಿಬ್ಬಂದಿ ತಮ್ಮ ವಸತಿ ಗೃಹಗಳ ಆವರಣದಲ್ಲಿ ಗಿಡಗಳನ್ನು ನೆಡುತ್ತಿರುವುದು ಶ್ಲಾಘನೀಯ ಎಂದರು.
ಅವುಗಳನ್ನು ಉಳಿಸಿ ಬೆಳೆಸುವ ಜವಬ್ದಾರಿಯನ್ನೂ ಇಲ್ಲಿನ ಸಿಬ್ಬಂದಿ ತೆಗೆದುಕೊಳ್ಳಬೇಕು. ಸಾಲು ಮರದ ತಿಮ್ಮಕ್ಕ ಸಾವಿರಾರು ಮರಗಳನ್ನು ಬೆಳೆಸಿರುವಾಗ ನಾವು ಕನಿಷ್ಠ ನಾಲ್ಕೈದು ಮರಗಳನ್ನು ಬೆಳೆಸದಿದ್ದರೆ ಬದುಕು ವ್ಯರ್ಥವಾಗುತ್ತದೆ ಎಂದರು. ಕೇವಲ ಗಿಡಗಳನ್ನು ನೆಡುವುದು ಮಾತ್ರವಲ್ಲ ಅವುಗಳನ್ನು ಪೋಷಿಸಿ ಬೆಳೆಸುವ ಜವಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.ಪಿಎಸ್ಐ ಸಿ.ಸಿ.ಪವನ್ ಕುಮಾರ್ ಮಾತನಾಡಿ, ಕಳೆದ ಎರಡು ಮೂರು ತಿಂಗಳು ನಾವು ಅತಿ ಹೆಚ್ಚಿನ ತಾಪಮಾನವನ್ನು ಅನುಭವಿಸಿದ್ದೇವೆ.ಇದು ಪ್ರಕೃತಿ ನಮಗೆ ನೀಡಿರುವ ಮೊದಲ ಎಚ್ಚರಿಕೆ ಗಂಟೆಯಾಗಿದೆ. ಹೀಗೆ ನಾವು ಪ್ರಕೃತಿಯನ್ನು ಹಾಳು ಮಾಡುತ್ತಾ ಹೋದರೆ ಮುಂದೊಂದು ದಿನ ಪ್ರಕೃತಿ ನಮಗೆ ತಕ್ಕ ಶಾಸ್ತಿ ಮಾಡುತ್ತದೆ. ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಜಲ ಮೂಲಗಳನ್ನು ನಾಶ ಮಾಡುವುದು ಮತ್ತು ಮಲಿನಗೊಳಿಸುವುದು ಮಾನವ ಕುಲದ ಅಂತ್ಯಕ್ಕೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು ಮರಗಳನ್ನು ಬೆಳೆಸುವುದೇ ಪರಿಹಾರ. ರೈತರು ಕೃಷಿ ಜಮೀನಿನ ಬದುಗಳಲ್ಲಿ ಮರಗಳನ್ನು ಬೆಳೆಸಬೇಕು. ಇಂಗು ಗುಂಡಿಗಳನ್ನು ಮಾಡಲು ಸರಕಾರ ಇಂತಹ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ, ಪರಿಸರ ಉಳಿದರೆ ಮಾತ್ರ ಭೂಮಿ ಮೇಲೆ ಮಾನವ ಸೇರಿದಂತೆ ಇತರೆ ಜೀವ ಸಂಕುಲಗಳು ಉಳಿಯಲು ಸಾಧ್ಯ. ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ನೆಡುತ್ತಿರುವ ಗಿಡಗಳಿಗೆ ಗ್ರಾಮ ಪಂಚಾಯಿತಿಯಿಂದ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು. ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ತಹ ಖಲೀಲ್, ಗ್ರಾಪಂ ಸದಸ್ಯ ಸಿ.ಗಿರೀಶ್ ಆರಾಧ್ಯ, ಎಎಸ್ಐ ಗಳಾದ ಟಿ.ಶೇಖರಪ್ಪ,ಬಿ.ಸುರೇಶ್ ನಾಯ್ಕ,ಗ್ರಾಮಸ್ಥರಾದ ಕೆ.ಕುಮಾರಪ್ಪ, ಎಚ್.ಎಸ್.ಉದಯ ಕುಮಾರ್, ಬಿ.ಪಿ.ದೇವಾನಂದ್, ಶ್ರೀನಿವಾಸ್, ಗಂಗಾಧರ ನಾಯ್ಕ, ಸಿಂಗಟಗೆರೆ ಪೊಲೀಸ್ ಸಿಬ್ಬಂದಿ ಗೋವಿಂದ ಸ್ವಾಮಿ, ಧನಪಾಲನಾಯ್ಕ, ಹರೀಶ್, ಪಿ.ಕೆ.ಕಲ್ಲೇಶ್ ಮತ್ತಿತರರು ಇದ್ದರು. 27ಕೆಕೆಡಿಯು2.
ಸಿಂಗಟಗೆರೆ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಕಡೂರು ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಎನ್.ರಾಮ್ ಪ್ರಸಾದ್ ಚಾಲನೆ ನೀಡಿದರು.