ಘಾಟಿ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ

KannadaprabhaNewsNetwork |  
Published : Jan 17, 2024, 01:46 AM IST
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ವೈಭವದ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಮಧ್ಯಾಹ್ನ 12.15 ರಿಂದ 12.30ರ ಶುಭ ಮೇಷ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಸಿದ್ಧ ನಾಗದೇವತೆಯ ಆರಾಧನಾ ಕ್ಷೇತ್ರವಾಗಿರುವ ಘಾಟಿಯಲ್ಲಿ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ರಥೋತ್ಸವ ನಡೆಯುತ್ತದೆ. ಮುಜರಾಯಿ ಇಲಾಖೆ ಮತ್ತು ಭಕ್ತಾದಿಗಳ ಸಹಯೋಗದಲ್ಲಿ ನಡೆದ ಶ್ರೀಸ್ವಾಮಿಯ ಪೂಜಾ ವಿಧಿವಿಧಾನಗಳು ಮತ್ತು ವೈಭವದ ಉತ್ಸವಗಳು ಭಕ್ತಾದಿಗಳ ಮನಸೂರೆಗೊಂಡವು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ರಾಜ್ಯದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು. ನಾಡಿನ ವಿವಿಧೆಡೆಯಿಂದ ಮತ್ತು ಹೊರರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಶ್ರೀ ಸ್ವಾಮಿಗೆ ಹಣ್ಣು-ಧವನ ಅರ್ಪಿಸಿ ಭಕ್ತಿಭಾವ ಮೆರೆದರು.

ಮಧ್ಯಾಹ್ನ 12.15 ರಿಂದ 12.30ರ ಶುಭ ಮೇಷ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಸಿದ್ಧ ನಾಗದೇವತೆಯ ಆರಾಧನಾ ಕ್ಷೇತ್ರವಾಗಿರುವ ಘಾಟಿಯಲ್ಲಿ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ರಥೋತ್ಸವ ನಡೆಯುತ್ತದೆ. ಮುಜರಾಯಿ ಇಲಾಖೆ ಮತ್ತು ಭಕ್ತಾದಿಗಳ ಸಹಯೋಗದಲ್ಲಿ ನಡೆದ ಶ್ರೀಸ್ವಾಮಿಯ ಪೂಜಾ ವಿಧಿವಿಧಾನಗಳು ಮತ್ತು ವೈಭವದ ಉತ್ಸವಗಳು ಭಕ್ತಾದಿಗಳ ಮನಸೂರೆಗೊಂಡವು. ದೇವಾಲಯದಲ್ಲಿ ಈ ಬಾರಿ ವ್ಯವಸ್ಥಿತವಾಗಿ ದರ್ಶನ ಕಲ್ಪಿಸಲಾಗಿತ್ತು.

ದೇವಾಲಯದಲ್ಲಿ ಬೆಳಗಿನಜಾವ 3 ಗಂಟೆಯಿಂದಲೇ ಸಾವಿರಾರು ಭಕ್ತರು ದರ್ಶನಕ್ಕೆ ಸಾಲುಗಟ್ಟಿ ನಿಂತು ಗಂಟೆಗಟ್ಟಲೆ ಕಾದು ದರ್ಶನ ಪಡೆದರು. ಜನಸಂಧಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲ ವೇಳೆ ನೂಕುನುಗ್ಗಲು ಉಂಟಾಗಿತ್ತು. ಶ್ರೀ ಕ್ಷೇತ್ರದಲ್ಲಿ ಎಲ್ಲೆಡೆಯೂ ಜನಜಾತ್ರೆ ಕಂಡುಬರುತ್ತಿತ್ತು.

ಶ್ರೀಸ್ವಾಮಿಗೆ ವಿಶೇಷಾಲಂಕಾರ

ರಥೋತ್ಸವದ ಅಂಗವಾಗಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಸಹಿತ ಒಂದೇ ಶಿಲೆಯಲ್ಲಿ ಮೂಡಿರುವ ಅಪರೂಪದ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷಾಲಂಕಾರ ಮಾಡಲಾಗಿತ್ತು. ಮುಮ್ಮುಖವಾಗಿ ಶ್ರೀಸುಬ್ರಹ್ಮಣ್ಯನಾಗಿ ಅವತರಿಸಿರುವ ಶ್ರೀಸ್ವಾಮಿ ತನ್ನ ಬೆನ್ನ ಮೇಲೆ ನರಸಿಂಹಸ್ವಾಮಿಯನ್ನೂ ಹೊತ್ತಿರುವುದು ವಿಶೇಷ. ಪುಷ್ಪಾಲಂಕೃತ ಶ್ರೀಸ್ವಾಮಿಗೆ ಭಕ್ತಾದಿಗಳು ಭಕ್ತಿಭಾವದಿಂದ ಪೂಜಿಸಿ ಧನ್ಯತಾಭಾವ ಪ್ರದರ್ಶಿಸಿದರು.

ದ್ರಾಕ್ಷಿ ಗೊಂಚಲುಗಳ ವಿಶೇಷಾಲಂಕಾರ

ದೇವಾಲಯದ ಆವರಣದಲ್ಲಿ ಈ ಬಾರಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಪೂರ್ಣ ಹೂವು ಮತ್ತು ದ್ರಾಕ್ಷಿ ಗೊಂಚಲುಗಳಿಂದ ಇಡೀ ಆವರಣವನ್ನು ಸಿಂಗರಿಸಲಾಗಿತ್ತು. ದ್ರಾಕ್ಷಿ ಗೊಂಚಲು ಮತ್ತು ಹೂಗಳ ನಡುವೆ ಮೂಡಿದ್ದ ಸುಬ್ರಹ್ಮಣ್ಯ ಸ್ವಾಮಿಯ ಬಗೆಬಗೆಯ ಚಿತ್ರಪಟಗಳನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ರಥದ ಮೇಲೆ ವಲ್ಲಿದೇವಸೇನಾ ಸಮೇತ ಸುಬ್ರಮಣ್ಯಸ್ವಾಮಿ ಹಾಗೂ ಸರ್ಪದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಉತ್ಸವ ನಡೆಸಲಾಯಿತು.

ನಾಗಶಿಲೆಗಳಿಗೆ ಪೂಜೆ

ಇನ್ನು ಶ್ರೀಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಸಾವಿರಾರು ನಾಗಶಿಲೆಗಳಿಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದ ದಶ್ಯ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಮದುವೆಯಾಗದವರು, ಮಕ್ಕಳಾಗದವರು ವಿಶೇಷ ಹರಕೆಗಳನ್ನು ಹೊತ್ತು ಹುತ್ತಗಳು ಮತ್ತು ನಾಗಶಿಲೆಗಳಿಗೆ ಹಾಲು-ತುಪ್ಪ ಸಮರ್ಪಣೆ ಮಾಡಿದರು. ಈ ರೀತಿಯ ನಾಗಪೂಜೆ ಶ್ರೀಕ್ಷೇತ್ರದ ವಿಶೇಷವಾಗಿದ್ದು, ಹರಕೆ ಹೊತ್ತು ನಾಗಶಿಲೆಗಳನ್ನು ಪ್ರತಿಷ್ಠಾಪಿಸುವುದೂ ಇಲ್ಲಿನ ಸಂಪ್ರದಾಯವಾಗಿದೆ. ಷಷ್ಠಿಯ ಬ್ರಹ್ಮರಥೋತ್ಸವದಂದು ಈ ಶಿಲೆಗಳಿಗೆ ಪೂಜಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬುದು ನಂಬಿಕೆ.

ತರಾವರಿ ಜಾತ್ರೆ

ಈ ಬಾರಿಯ ಜಾತ್ರೆಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ವಸ್ತುಪ್ರದರ್ಶನ ಮಳಿಗೆಗಳು ಗಮನ ಸೆಳೆದವು. ಇನ್ನು ತರಾವರಿ ಮಿಠಾಯಿ ಅಂಗಡಿಗಳು, ಬೆಂಡು-ಬತ್ತಾಸು, ಕಲ್ಯಾಣಸೇವೆ ಜಾತ್ರಾರ್ಥಿಗಳನ್ನು ಸೆಳೆದವು. ಬ್ರಹ್ಮರಥೋತ್ಸವಕ್ಕೆ ವಿಶೇಷ ಬಸ್‌ವ್ಯವಸ್ಥೆಯನ್ನು ಎಂದಿನಂತೆ ಕಲ್ಪಿಸಲಾಗಿತ್ತು.

6 ಶತಮಾನಗಳ ಪರಂಪರೆ:

ಸುಮಾರು 6 ಶತಮಾನಗಳ ಹಿಂದೆ ಸಂಡೂರು ಘೋರ್ಪಡೆ ಸಂಸ್ಥಾನದ ಮಹಾರಾಜರಿಂದ ಸ್ಥಾಪಿತವಾದ ಶ್ರೀ ಕ್ಷೇತ್ರದಲ್ಲಿ ಇಂದಿಗೂ ಭಕ್ತಿಪರಂಪರೆ ಉಳಿದುಕೊಂಡು ಬಂದಿದೆ. ಕಾಲ ಕಾಲಕ್ಕೆ ತಕ್ಕಂತೆ ಮಾರ್ಪಾಟುಗಳಾಗುತ್ತಿದ್ದರೂ ಭಕ್ತಿಭಾವಕ್ಕೆ ಮಾತ್ರ ಕೊರೆಯಿಲ್ಲ. ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ಹೊರರಾಜ್ಯಗಳಿಂದ ಕೂಡ ಇಲ್ಲಿಗೆ ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವಿಶೇಷ ಬಸ್‌ ವ್ಯವಸ್ಥೆ

ದೊಡ್ಡಬಳ್ಳಾಪುರ, ಬೆಂಗಳೂರಿನ ಕಾವೇರಿಭವನ, ಕೆಂಪೇಗೌಡ ಬಸ್‌ನಿಲ್ದಾಣ, ಮೈಸೂರು, ಚಿಕ್ಕಬಳ್ಳಾಪುರ, ವಿಜಯಪುರ, ಕೋಲಾರ, ಗೌರಿಬಿದನೂರು ಸೇರಿದಂತೆ ವಿವಿದೆಡೆಯಿಂದ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಇತ್ತು. ಜಾತ್ರಾ ವಿಶೇಷವಾಗಿ 84 ಬಸ್‌ಗಳು ಸಂಚರಿಸಿದವು.

ಇದೇ ಸಂದರ್ಭದಲ್ಲಿ ರಂಗಮಂಟಪ ಸೇವೆ, ರಾಜಬೀದಿ ಉತ್ಸವ, ರಾತ್ರಿಕಟ್ಟೆ ಉತ್ಸವಗಳು ನಡೆದವು. ಕುಮಾರಷಷ್ಠಿಯವರೆಗೆ ರಥೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ