ಹುಬ್ಬಳ್ಳಿ:
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಈಗಾಗಲೇ ಈ ಕುರಿತಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಹಾಗೂ ಸುರ್ಜೆವಾಲ್ ಅವರು ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲವಿದೆ. ಆದರೆ, ಕೆಲವು ನಾಯಕರು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು ಎಂದರು.
ಬರೀ ಭವಿಷ್ಯ ನುಡಿಯುತ್ತಾರೆ:ಬಿಜೆಪಿಯವರಿಗೆ ಭವಿಷ್ಯ ಹೇಳುವುದೇ ಕಾಯಕವಾಗಿದೆ. ಈಗ ದೀಪಾವಳಿ ಒಳಗೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ. ನಮ್ಮ ಬಳಿ 136 ಶಾಸಕರಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ತೊಂದರೆಯಾಗುವುದಿಲ್ಲ. ಹಾಗೇನಾದರೂ ಆದರೆ ಕೇಂದ್ರ ಸರ್ಕಾರಕ್ಕೆ ತೊಂದರೆ ಆಗಬಹುದು. ಏಕೆಂದರೆ ಅವರ ಹತ್ತಿರ ಸಂಪೂರ್ಣ ಬಹುಮತವಿಲ್ಲ ಎಂದು ಲಾಡ್ ಟಾಂಗ್ ನೀಡಿದರು.
ಜಮ್ಮು-ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಸೋಲುವ ಸಾಧ್ಯತೆ ಇದೆ. ಬಿಹಾರ ಕೂಡಾ ಸೋಲಾಗಬಹುದು. ಮುಂದೆ ನಾಲ್ಕು ರಾಜ್ಯಗಳ ಚುನಾವಣೆಯಾದರೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುತ್ತಾ? ಎಂಬ ಪ್ರಶ್ನೆಯನ್ನು ಅವರ ನಾಯಕರನ್ನು ಕೇಳಬೇಕು ಎಂದು ಕುಟುಕಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪೋಟೊಗಳು ವೈರಲ್ ಆದ ವಿಚಾರದಲ್ಲಿ ಆರೋಪ ಮಾಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರದೇ ಕೈವಾಡ ಇರಬಹುದು. ಇಷ್ಟು ನಿಖರವಾಗಿ ಯಾರು ಪೋಟೋ ಬಿಟ್ಟಿದ್ದಾರೆ ಎಂದು ಹೇಳುತ್ತಾರೆ, ಅಂದರೆ, ಅವರಿಗೆ ಸಂಪೂರ್ಣ ಮಾಹಿತಿ ಇರಬೇಕು ಶಂಕೆ ವ್ಯಕ್ತಪಡಿಸಿದರು.
ಏಕೆ ಪರವಾನಗಿ ಕೊಡಿಸಿಲ್ಲ:
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ಅಯೋಧ್ಯೆ ರಾಮಮಂದಿರ ಸೇರಿದಂತೆ ಎಲ್ಲ ಕಟ್ಟಡಗಳು ಸೋರುತ್ತಿವೆ. ಅದರ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುತ್ತಿಲ್ಲ? ದೇಶದಲ್ಲಿ ಆಹಾರ ಭದ್ರತೆ ಬಿಲ್ ಜಾರಿಗೆ ತಂದವರು ಯಾರು? ಈಗ ಮೋದಿ ಅಕ್ಕಿ ಎಂದು ಹೇಳುವ ನಾಯಕರು, ಮೊದಲು ಏಕೆ ಅಕ್ಕಿ ನೀಡಲಿಲ್ಲ? ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅಕ್ಕಿ ಸಂಗ್ರಹವಿದೆ, ರಾಜ್ಯ ಸರ್ಕಾರ ಖರೀದಿಸಲಿ ಎಂದು ಹೇಳುತ್ತಿದ್ದಾರೆ. ಅಕ್ಕಿ ಸಂಗ್ರಹವಿರುವ ಬಗ್ಗೆ ಜೋಶಿ ಅವರು ಲಿಖಿತವಾಗಿ ನೀಡಲಿ ಎಂದು ಸಚಿವ ಸಂತೋಷ ಲಾಡ್ ಸವಾಲು ಹಾಕಿದರು.