ಹಿಡಿತ ಬಿಗಿಗೊಳಿಸಿದ ಕೈ, ಮುದುಡಿದ ಕಮಲ

KannadaprabhaNewsNetwork |  
Published : May 05, 2026, 03:00 AM IST
ಸುನಿಲ್ ಕುಮಾರ್ | Kannada Prabha

ಸಾರಾಂಶ

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಮೂಲಕ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಗೆ ಇನ್ನಿಲ್ಲದ ಮರ್ಮಾಘಾತ ನೀಡಿದೆ. ಆ ಮೂಲಕ ತನ್ನದೆ ವಶದಲ್ಲಿದ್ದ ಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದೆ ಕಾಂಗ್ರೆಸ್‌. ಹೀಗಾಗಿ ಎಚ್‌.ವೈ.ಮೇಟಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅವರ ಪುತ್ರ ಉಮೇಶ ಉಸ್ತುವಾರಿಯಾಗಿ ಮುಂದುವರಿದಿದ್ದಾರೆ.

ಈಶ್ವರ್ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಮೂಲಕ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಗೆ ಇನ್ನಿಲ್ಲದ ಮರ್ಮಾಘಾತ ನೀಡಿದೆ. ಆ ಮೂಲಕ ತನ್ನದೆ ವಶದಲ್ಲಿದ್ದ ಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದೆ ಕಾಂಗ್ರೆಸ್‌. ಹೀಗಾಗಿ ಎಚ್‌.ವೈ.ಮೇಟಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅವರ ಪುತ್ರ ಉಮೇಶ ಉಸ್ತುವಾರಿಯಾಗಿ ಮುಂದುವರಿದಿದ್ದಾರೆ.

ರಾಜ್ಯಾದ್ಯಂತ ಗಮನ ಸೆಳೆದಿದ್ದ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿ ಗೆದ್ದು ಬೀಗಿದ್ದು, ಈ ಪ್ರಮಾಣದ ಗೆಲುವನ್ನು ಕಾಂಗ್ರೆಸ್ ಪಕ್ಷ ಸಹ ಊಹಿಸಿರಲಿಲ್ಲ. ಅಂತಹ ಗೆಲುವನ್ನು ಬಾಗಲಕೋಟೆ ಮತದಾರರು ನೀಡುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಇನ್ನಿಲ್ಲದ ಬಲ ನೀಡಿದ್ದಾರೆ.

ಎಚ್.ವೈ.ಮೇಟಿ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಉಮೇಶ ಮೇಟಿ ಹಾಗೂ ಬಿಜೆಪಿಯ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನಡುವಿನ ಜಿದ್ದಾಜಿದ್ದಿನ ಪೈಪೋಟಿ ನಡೆದು ಅಂತಿಮವಾಗಿ ಕಾಂಗ್ರೆಸ್ಸಿಗೆ ಐತಿಹಾಸಿಕ ಗೆಲುವು ಲಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದ್ದ ಬಾಗಲಕೋಟೆ ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಪಕ್ಷಕ್ಕೆ ಹಾಗೂ ನಾಯಕತ್ವಕ್ಕೆ ಬೆಂಬಲವಾಗಿ ನಿಂತು ಕಾಂಗ್ರೆಸ್‌ನ್ನು ಗೆಲ್ಲಿಸಿಕೊಂಡು ಬರುವಲ್ಲಿ ಅವರ ಆಪ್ತ ಬಳಗ ಯಶಸ್ವಿಯಾಗಿದೆ.

ಕಾಂಗ್ರೆಸ್ ಗೆಲುವಿಗೆ ಕಾರಣವಾದ ಅಂಶಗಳು:

ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಪರ ಯೋಜನೆಗಳನ್ನು ಘೋಷಿಸುವ ಮೂಲಕ ಮತದಾರರ ಓಲೈಕೆಗೆ ಮುಂದಡಿ ಇಡುವ ಮೂಲಕ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಸುಸಜ್ಜಿತ ಮಾರುಕಟ್ಟೆ ನಿರ್ಮಾಣ, ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸುವ ಭರವಸೆಗಳು ಸಹ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾದವು. ಜತೆಗೆ ಮೇಟಿ ಕುಟುಂಬಕ್ಕೆ ಟಿಕೆಟ್‌ ಘೋಷಣೆ ಮಾಡಿದಾಗ ಕಾಂಗ್ರೆಸ್‌ನಲ್ಲಿಯೇ ಹೆಚ್ಚು ವಿರೋಧಗಳು ಕಾಣದಿರುವುದು ಕೂಡ ಆರಂಭದಲ್ಲಿಯೇ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯಿತು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿಗೆ ಬಹುದೊಡ್ಡ ಆಸರೆಗಳಾದವು. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳಾ ಮತದಾರರು ಗ್ಯಾರಂಟಿ ಯೋಜನೆಗಳ ಕುರಿತು ಹೊಂದಿದ್ದ ಉತ್ತಮ ಅಭಿಪ್ರಾಯಗಳು ಕೂಡ ಪಕ್ಷದ ಗೆಲವಿನ ಅಂತರ ಹೆಚ್ಚಿಸಿದವು.

ಮುಖ್ಯಮಂತ್ರಿಗಳ ಅವಿರತ ಶ್ರಮ:

ದಿ.ಎಚ್.ವೈ. ಮೇಟಿ ಅವರ ಅಕಾಲಿಕ ಸಾವಿನ ನಂತರ ಎದುರಾದ ಉಪಚುನಾವಣೆಯಲ್ಲಿ ಗೆಲ್ಲಲೆಬೇಕೆಂಬ ಅನಿವಾರ್ಯತೆಯಲ್ಲಿದ್ದ ಸಿದ್ದರಾಮಯ್ಯ ಅವರು ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಮಾಡಿದ ಪ್ರಯತ್ನ ಫಲ ನೀಡಿತು. ನಾಮಪತ್ರದಿಂದ ಹಿಡಿದು ಅಂತಿಮ ಸುತ್ತಿನ ಪ್ರಚಾರದವರೆಗೂ ಬಾಗಲಕೋಟೆಯಲ್ಲಿ ಬೀಡು ಬಿಟ್ಟು ಅಹಿಂದ ವರ್ಗಗಳ ಮತ ಕ್ರೋಡೀಕರಣ ಜೊತೆಗೆ ಸುಶಿಕ್ಷಿತ ವರ್ಗವನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿಯಲ್ಲಿ ನಡೆದ ಸಂವಾದಗಳು ಸಹ ಮತದಾರರಲ್ಲಿ ವಿಶ್ವಾಸ ಮೂಡಿಸಲು ಯಶಸ್ವಿಯಾದವು. ಒಳಮೀಸಲಾತಿ ಅನುಷ್ಠಾನದಲ್ಲಿನ ಗೊಂದಲ ಸಹಜವಾಗಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪ ಹಿನ್ನಡೆ ತರುತ್ತದೆ ಎಂಬ ಮಾತುಗಳ ನಡುವೆಯೂ ಆ ಸಮುದಾಯಗಳು ಹೆಚ್ಚಿರುವ ತಾಂಡಾಗಳಿಗೆ, ಕೇರಿಗಳಿಗೆ ತೆರಳಿ ಅವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳು:

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಬ್ಬರದ ಪ್ರಚಾರ ಹಾಗೂ ಮುಖ್ಯಮಂತ್ರಿ ಆದಿಯಾಗಿ ಸಚಿವರ ದಂಡೇ ಕ್ಷೇತ್ರದಲ್ಲಿ ಬೀಡು ಬಿಟ್ಟು ನಡೆಸಿದ ಸಂಘಟಿತ ಪ್ರಯತ್ನ ಎದುರಿಸುವಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು. ಸರ್ಕಾರದ ಭರವಸೆಗಳು, ಹೇರಳವಾದ ಸಂಪನ್ಮೂಲ ಬಳಕೆ, ಕಾಂಗ್ರೆಸ್ಸಿನ ಪಾರಂಪರಿಕ ಮತದಾರರು ಬೇರೆಡೆಗೆ ಹೋಗದ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ, ಜೊತೆಗೆ ಸಣ್ಣ ಪುಟ್ಟ ಸಮುದಾಯಗಳಿಗೆ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದರಿಂದ ಬಿಜೆಪಿ ಪರ ಇದ್ದ ಕೆಲವು ಸಮುದಾಯಗಳ ಮತ ವಿಭಜನೆ ಬಿಜೆಪಿ ಬಹುದೊಡ್ಡ ಅಂತರದಲ್ಲಿ ಸೋಲಲು ಕಾರಣವಾಯಿತು. ನಗರ ಪ್ರದೇಶದಲ್ಲಿ ಗಟ್ಟಿ ನೆಲೆ ಹೊಂದಿದ್ದ ಬಿಜೆಪಿಗೆ ಉಪಚುನಾವಣೆಯಲ್ಲಿ ನಿರೀಕ್ಷಿತ ಮತಗಳು ಬಾರದೆ ಹೋಗಿದ್ದು ಒಂದೆಡೆಯಾದರೆ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಬಾರಿಗಿಂತಲೂ ಹೆಚ್ಚಿನ ಮತ ತರುವಲ್ಲಿ ಯಶ ಕಂಡಿದ್ದು ಸಹ ಬಿಜೆಪಿ ಹಿನ್ನಡೆಗೆ ಕಾರಣವಾಯಿತು. ಕೈ ಗೆಲುವಿಗೆ ಶ್ರಮವಹಿಸಿದವರು:

ಬಾಗಲಕೋಟೆ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಹುದೊಡ್ಡ ಅಂತರದಲ್ಲಿ ಗೆಲುವು ತಂದುಕೊಡಲು ಹಲವರ ನಿರಂತರ ಪ್ರಯತ್ನಕ್ಕೆ ಮತದಾರ ಪ್ರಭು ಕೈಹಿಡಿದು ಬೆಂಬಲಿಸಿದ್ದಾನೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ ಒಂದು ತಿಂಗಳ ಕಾಲ ಕ್ಷೇತ್ರದಲ್ಲಿ ಬೀಡು ಬಿಟ್ಟು ಎಲ್ಲ ಸಮುದಾಯಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರೆ, ಉಸ್ತುವಾರಿ ವಹಿಸಿದ್ದ ಸಚಿವ ಸತೀಶ ಜಾರಕಿಹೊಳಿ ಅವರ ಚುನಾವಣೆಯ ಕಾರ್ಯತಂತ್ರ, ಗ್ರಾಮೀಣ ಭಾಗದಲ್ಲಿ ನಡೆಸಿದ ಸಭೆಗಳು ಕಾಂಗ್ರೆಸ್ ಗೆಲುವಿಗೆ ಸಹಕಾರ ನೀಡಿದವು.

ಮತಕ್ಷೇತ್ರದಲ್ಲಿ ಅಹಿಂದ ಮತಗಳ ವಿಭಜನೆಯಾಗದ ರೀತಿಯಲ್ಲಿ ಸಂಘಟಿತ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷದ ಎಲ್ಲ ಮುಂಚೂಣಿ ನಾಯಕರು ಶ್ರಮವಹಿಸಿ ಪಕ್ಷದ ಗೆಲುವಿಗೆ ನಿಂತಿದ್ದರಿಂದ ಸಹಜವಾಗಿ ಹೆಚ್ಚಿನ ಅಂತರದ ಗೆಲುವಿಗೆ ಪೂರಕವಾಯಿತು. ಒಟ್ಟಾರೆ ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಹುಮ್ಮಸ್ಸಿಗೆ ಮುನ್ನಡೆ ಬರೆದಿದ್ದರೆ, ಬಿಜೆಪಿ ಸೋಲಿನಿಂದ ಪಾಠ ಕಲಿತು ತಿದ್ದಿಕೊಂಡು ಮತ್ತೆ ತನ್ನ ಗತವೈಭ ಪಡೆದುಕೊಳ್ಳಲು ಮುಂದಾಗಬೇಕಿದೆ.

ನಾನು ಮೊದಲೇ ಹೇಳಿದ್ದೆ, ಬಾಗಲಕೋಟೆಯಲ್ಲಿ ಕಮಲ‌ ಹಾಗೂ ಜೆಸಿಬಿ ಎರಡೂ ಮನೆಗೆ ಹೋಗುತ್ತವೆ ಎಂದು. ಯತ್ನಾಳ ಹಾಗೂ ವಿಜಯೇಂದ್ರ ಮನೆಗೆ ಹೋಗುತ್ತಾರೆ ಎಂದಿದ್ದೆ. ಇಂದಿನ ಫಲಿತಾಂಶ ಹಾಗೆಯೇ ಆಗಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಜನರು ಕಾಂಗ್ರೆಸ್‌ ಕೈ ಹಿಡಿದಿದ್ದಾರೆ.

- ಎಂ.ಬಿ. ಪಾಟೀಲ ಕೈಗಾರಿಕೆ ಸಚಿವ

ಬಾಗಲಕೋಟೆ ಉಪಚುನಾವಣೆ ಗೆಲುವು ರಾಜ್ಯ ಸರ್ಕಾರದ ಸಾಧನೆಗೆ ಮತದಾರರು ನೀಡಿರುವ ಮನ್ನಣೆ. ವಿಜಯಪುರದ ಶಾಸಕರೊಬ್ಬರು ನನ್ನ ಹಾಗೂ ನನ್ನ ಪುತ್ರಿಯ ವಿರುದ್ಧ ಹಗುರ ಪದ ಬಳಸಿ, ಅಪಪ್ರಚಾರ ಮಾಡುವ ಮೂಲಕ ಬಿಜೆಪಿ ಸೋಲಿಸುವ ಗುರಿ ಈಡೇರಿಸಿಕೊಂಡಿದ್ದು, ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಲು ನೆರವಾಗಿದ್ದಾರೆ. ಬಿಜೆಪಿ ಸೋಲಿಸುವ ಆಂತರಿಕ ಉದ್ದೇಶದಿಂದ ವಿಜಯಪುರದ ಶಾಸಕ ಹಾವೇರಿ ಜಿಲ್ಲೆಯ ಉಪ ಚುನಾವಣೆಯಲ್ಲೂ ಪ್ರಚಾರ ಮಾಡಿದ್ದಕ್ಕೆ ಬಿಜೆಪಿ ಸೋತಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಈ ಶಾಸಕ ಪ್ರಚಾರ ಮಾಡಿದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸೋತಿದ್ದು, ಕಾಂಗ್ರೆಸ್ ವಿಜಯ ಸಾಧಿಸಿದೆ.

- ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರು ವಿಜಯಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದೇಶ್ವರ ಶ್ರೀ ಮಹದಾಸೆ ಈಡೇರಿಸಿದ್ದೇವೆ
ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ ಉಮೇಶ