ಮಂತ್ರ ಮಾಂಗಲ್ಯ ಮಾದರಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

KannadaprabhaNewsNetwork |  
Published : Aug 26, 2026, 02:15 AM IST
ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದಲ್ಲಿ ನಡೆದ ಮಂತ್ರ ಮಾಂಗಲ್ಯ ಪರಿಕಲ್ಪನೆಯ ವಿವಾಹ ವೇಳೆ ಕವನ ಸಂಕಲನ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಕೆ.ಟಿ.ಲತಾ ಅವರು ರಚಿಸಿರುವ ನಿನ್ನನ್ನೇಕೆ ಆಯ್ದುಕೊಂಡೆ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಲೇಖಕಿ ಇಂದಿರಾ ಕೃಷ್ಣಪ್ಪ, ಕಾವ್ಯದ ಭಾಷೆ ಮತ್ತು ಭಾವವು ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಿರಬೇಕು. ಸಾಮಾನ್ಯ ಜನರ ನೋವು-ನಲಿವು, ಬದುಕು ಹಾಗೂ ಸಾಮಾಜಿಕ ಸ್ಪಂದನೆಗೆ ಕನ್ನಡಿಯಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ ಅತ್ಯಂತ ಸರಳ, ಕಡಿಮೆ ವೆಚ್ಚದ ಮತ್ತು ಮೂಢನಂಬಿಕೆ ರಹಿತ ವಿವಾಹ ಪದ್ಧತಿಯಾಗಿದೆ ಎಂದು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ತಿಳಿಸಿದರು. ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಡಿ ಬೆಟ್ಟದ ಸಮೀಪವಿರುವ ಮಾಡೇಶ್ವರ ಗ್ರಾಮದ ಹಳ್ಳಿ ಮಂಟಪದಲ್ಲಿ ನಡೆದ ಸಿ.ಎಚ್. ಭರತ್ ಕುಮಾರ್ ಮತ್ತು ಕೆ.ಟಿ.ಲತಾ ಅವರ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು- ವರರಿಗೆ ಮಂತ್ರ ಮಾಂಗಲ್ಯ ಬೋಧನೆ ಮಾಡಿ ಮಾತನಾಡಿದರು.

ಜಾತಿ, ಧರ್ಮ, ಅಡಂಬರ ಹಾಗೂ ಪುರೋಹಿತಶಾಹಿ ಆಚರಣೆಗಳನ್ನು ಮೀರಿ ನಿಂತ ಮಂತ್ರ ಮಾಂಗಲ್ಯ ಮದುವೆ ಪದ್ಧತಿಯು ಮಾನವೀಯ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ವಧು-ವರರು ಕನ್ನಡದಲ್ಲೇ ಪರಸ್ಪರ ಪ್ರೀತಿ, ಸಮಾನತೆ ಮತ್ತು ಜವಾಬ್ದಾರಿಗಳ ಪ್ರಮಾಣ ವಚನ ಸ್ವೀಕರಿಸುವುದು ಮಂತ್ರ ಮಾಂಗಲ್ಯದ ವಿಶೇಷವಾಗಿದೆ ಎಂದರು.

ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮನುಷ್ಯತ್ವವೇ ದೊಡ್ಡ ಧರ್ಮವೆಂಬ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕುವೆಂಪು ಅವರ ವಿಚಾರಗಳು ದಾರಿ ಮಾಡಿಕೊಡುತ್ತದೆ ಎಂದರು.

ಕೆ.ಟಿ.ಲತಾ ಅವರು ರಚಿಸಿರುವ ನಿನ್ನನ್ನೇಕೆ ಆಯ್ದುಕೊಂಡೆ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಲೇಖಕಿ ಇಂದಿರಾ ಕೃಷ್ಣಪ್ಪ, ಕಾವ್ಯದ ಭಾಷೆ ಮತ್ತು ಭಾವವು ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಿರಬೇಕು. ಸಾಮಾನ್ಯ ಜನರ ನೋವು-ನಲಿವು, ಬದುಕು ಹಾಗೂ ಸಾಮಾಜಿಕ ಸ್ಪಂದನೆಗೆ ಕನ್ನಡಿಯಾಗಬೇಕು ಎಂದರು.

ಬುದ್ಧ- ಬಸವ- ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ), ಲೇಖಕ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ವಧು ವರರ ಕುಟುಂಬದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದರಿಯಾದ ಪದವಿ ರೈತನ ಕೃಷಿ ಕಾಯಕ
ವೈಯಕ್ತಿಕ ಕಾಮಗಾರಿ ಸದುಪಯೋಗ ಪಡೆಯಿರಿ:ಯಂಕಂಚಿ