ಜು. ೧ರಿಂದ ಪ್ರತಿಯೊಬ್ಬ ಕೂಲಿಕಾರರಿಗೂ ₹೩೮೨ ಕೂಲಿ ಮೊತ್ತ ಹಾಗೂ ೧೨೫ ದಿನಗಳ ಕೆಲಸ ಸಿಗಲಿದೆ
ಯಲಬುರ್ಗಾ: ಗ್ರಾಮೀಣ ಭಾಗದ ರೈತರ, ಕೂಲಿಕಾರರ ಮತ್ತು ಜೀವನೋಪಾಯ ಚಟುವಟಿಕೆ ಮೂಲಕ ಆರ್ಥಿಕ ಸದೃಢಕ್ಕಾಗಿ ಜಾರಿಯಾದ ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮದ ಕೂಲಿಕಾರರ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ ಎಂದು ಪಿಡಿಒ ಹನುಮಂತರಾಯ ಯಂಕಂಚಿ ಹೇಳಿದರು.
ತಾಲೂಕಿನ ವಜ್ರಬಂಡಿ ಗ್ರಾಪಂ ವ್ಯಾಪ್ತಿಯ ಜಿ. ಜರಕುಂಟಿ ಗ್ರಾಮದ ಕೂಲಿಕಾರರಿಗೆ ೨೦೨೬-೨೭ನೇ ಸಾಲಿನ ವಿಬಿ ಜಿರಾಮ್‌ಜಿ ಯೋಜನೆಯಡಿ ಕೈಗೊಂಡಿರುವ ತಲ್ಲೂರ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಜಾಬ್ ಕಾರ್ಡ್ ಮೇಳ ಹಾಗೂ ಐಇಸಿ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಬಿ ಜಿರಾಮ್‌ಜಿ ಯೋಜನೆಯಡಿ ನಿರ್ದಿಷ್ಟಪಡಿಸಿದ ೩೧೮ ಕಾಮಗಾರಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಜು. ೧ರಿಂದ ಪ್ರತಿಯೊಬ್ಬ ಕೂಲಿಕಾರರಿಗೂ ₹೩೮೨ ಕೂಲಿ ಮೊತ್ತ ಹಾಗೂ ೧೨೫ ದಿನಗಳ ಕೆಲಸ ಸಿಗಲಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಗ್ರಾಪಂಗಳಲ್ಲಿ ಯೋಜನೆಯಡಿ ನಿರಂತರ ಕೆಲಸ ನೀಡಲಾಗುವುದು. ಕಾಯಕ ಬಂಧುಗಳು ನಮೂನೆ-೬ ನೀಡಿ ಕೆಲಸ ಪಡೆಯಬೇಕು. ವೈಯಕ್ತಿಕ ಕಾಮಗಾರಿ ರೈತರು ತಮ್ಮ ಜಮಿನುಗಳಲ್ಲಿ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.
ತಾಲೂಕು ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಮಾತನಾಡಿ, ಆ. ೧೫ರಿಂದ ಸೆ. ೧೫ರವರೆಗೆ ನಡೆಯಲಿರುವ ಜಾಬ್ ಕಾರ್ಡ್ ಮೇಳ ಅಭಿಯಾನದಡಿ ತಾಲೂಕಿನ ಎಲ್ಲ ಗ್ರಾಪಂಳಲ್ಲಿ ಜಾಬ್ ಕಾರ್ಡ್ ವಿತರಿಸಲು ಈಗಾಗಲೇ ಪಿಡಿಒರವರಿಗೆ ತಿಳಿಸಲಾಗಿದೆ. ಅದರಂತೆ ಇಂದು ಜರಕುಂಟಿ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ, ಕಾಯಕ ಬಂಧು, ಕೂಲಿಕಾರರು ಹಾಜರಿದ್ದರು.