ಮನೆಮನೆಗಳಲ್ಲಿ ದಸರಾ ಗೊಂಬೆಗಳ ದರ್ಬಾರ್

KannadaprabhaNewsNetwork |  
Published : Sep 24, 2025, 01:00 AM IST
ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಮುಖ್ಯರಸ್ತೆಯ ಎಸ್.ನವೀನ್‌ ಅವರ ಮನೆಯಲ್ಲಿ ಒಪ್ಪ-ಓರಣವಾಗಿ ಸಿಂಗರಿಸಲ್ಪಟ್ಟ ಗೊಂಬೆಗಳ ಕಲರ್‌ಫುಲ್‌ ಲೋಕ. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ತನ್ನದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಕಲಾ ಪ್ರಜ್ಞೆಯನ್ನು ರೂಢಿಸಿಕೊಂಡು ಬಂದಿರುವ ದೊಡ್ಡಬಳ್ಳಾಪುರ ಸಂಸ್ಕೃತಿಯ ನಿರಂತರ ರಾಯಭಾರದ ಮಹತ್ವದ ಹೊಣೆಗಾರಿಕೆಯನ್ನು ತನ್ನೊಟ್ಟಿಗೆ ಬೆಳೆಸಿಕೊಂಡು ಬರುತ್ತಿದೆ.

ದೊಡ್ಡಬಳ್ಳಾಪುರ: ತನ್ನದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಕಲಾ ಪ್ರಜ್ಞೆಯನ್ನು ರೂಢಿಸಿಕೊಂಡು ಬಂದಿರುವ ದೊಡ್ಡಬಳ್ಳಾಪುರ ಸಂಸ್ಕೃತಿಯ ನಿರಂತರ ರಾಯಭಾರದ ಮಹತ್ವದ ಹೊಣೆಗಾರಿಕೆಯನ್ನು ತನ್ನೊಟ್ಟಿಗೆ ಬೆಳೆಸಿಕೊಂಡು ಬರುತ್ತಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ನವರಾತ್ರಿ ಸಂದರ್ಭದಲ್ಲಿ ಇಲ್ಲಿ ನಿರ್ಮಾಣವಾಗುವ ಗೊಂಬೆ ಮನೆಗಳು. ಸಾಂಪ್ರದಾಯಿಕ ಆಚರಣೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಸ್ಪರ್ಶದೊಂದಿಗೆ ಮತ್ತಷ್ಟು ಕಳೆಗಟ್ಟುತ್ತಾ ಪ್ರತಿವರ್ಷ ಹೊಸತನದ ಹಾದಿಯಲ್ಲಿ ಗಮನ ಸೆಳೆಯುವುದು ವಿಶೇಷ.

ಇದು ಗೊಂಬೆ ಹಬ್ಬ:

ಬಯಲುಸೀಮೆಯ ಜನಪದರಲ್ಲಿ ಗೊಂಬೆ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ದಸರಾ ಬಂತೆಂದರೆ ಈ ಜನಕ್ಕೆ ಎಲ್ಲಿಲ್ಲದ ಸಡಗರ. ಮನೆಮಂದಿಯೆಲ್ಲಾ ಸೇರಿ ತರಾವರಿ ಗೊಂಬೆಗಳನ್ನು ನಡುಮನೆಯಲ್ಲಿ ಅಲಂಕಾರಿಕವಾಗಿ ಕೂರಿಸಿ ಪೂಜಾದಿ ಕಾರ್ಯಕ್ರಮ ನಡೆಸುತ್ತಾರೆ. ನಾಡಹಬ್ಬ ದಸರಾ ಮನೆಮನೆಯ ಹಬ್ಬವಾಗಿ ಆಚರಿಸಲ್ಪಡುತ್ತದೆ.

ಹಿಂದಿನ ಕಾಲದಿಂದಿಲೂ ಸಂಗ್ರಹಿಸಿ, ಸಂರಕ್ಷಿಸಿಕೊಂಡು ಬಂದ ಚೆಂದದ ಗೊಂಬೆಗಳನ್ನು ಕೂರಿಸಿ ಅಲಂಕರಿಸುವುದೇ ದೊಡ್ಡ ವೈಭವ. ಅದರಲ್ಲೂ ಮರದಿಂದ ಮಾಡಲ್ಪಟ್ಟ ಪಟ್ಟದ ಗೊಂಬೆಗಳಿಗೆ ರಾಜ-ರಾಣಿಯರ ಧಿರಿಸು ಹಾಕಿ ಪಟ್ಟಕ್ಕೆ ಕೂರಿಸುವ ಮೂಲಕ 9 ದಿನಗಳ ವೈಭವ ಆರಂಭವಾಗುತ್ತದೆ. ಕೆಲ ಮನೆಗಳಲ್ಲಿ ಕಳಶವನ್ನಿಟ್ಟು ಪೂಜಿಸುವ ಸಂಪ್ರದಾಯವೂ ಇದೆ. ಇದರೊಂದಿಗೆ ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ಅನೇಕ ಪುರಾಣಗಳ ಹಲವು ಸನ್ನಿವೇಶಗಳಿಗೂ ಇಲ್ಲಿ ಜೀವಂತಿಕೆ ಬರುವುದುಂಟು. ದೇವಾನು ದೇವತೆಗಳು, ಕಾಡು, ಉದ್ಯಾನ, ನದಿ, ಸರೋವರ, ಅರಮನೆ, ಕೈಲಾಸ, ವೈಕುಂಠ, ದೇವಲೋಕ, ಕ್ರಿಕೆಟ್ ಸ್ಟೇಡಿಯಂ, ಸರ್ಕಸ್ ಮತ್ತಿತರ ಮಾದರಿಗಳ ನಿರ್ಮಾಣ ಇಲ್ಲಿ ನೋಡಸಿಗುತ್ತದೆ.

ವಿಶೇಷವೇನು?:

ಈ ಗೊಂಬೆ ಹಬ್ಬ ವಿಶೇಷಗಳನ್ನು ತನ್ನೊಟ್ಟಿಗೇ ಮೈಗುಡಿಸಿಕೊಂಡಿರುತ್ತದೆ. ಕೆಲ ಮನೆಗಳಲ್ಲಿ ಪ್ರತಿವರ್ಷ ವಿಶೇಷವಾಗಿ ಪುರಾಣ ರೂಪಕಗಳನ್ನು ಗೊಂಬೆಗಳ ಚಿತ್ತಾರದಲ್ಲಿ ಪ್ರಸ್ತುತಪಡಿಸುವುದುಂಟು. ವೈಕುಂಠ ದರ್ಶನ, ಶ್ರೀಕೃಷ್ಣ ಪಾರಿಜಾತ ಪ್ರಸಂಗ, ಸೀತಾ ಸ್ವಯಂವರ, ರಾಮಾಂಜನೇಯ ಯುದ್ದ, ಅಷ್ಟ ಲಕ್ಷ್ಮಿ ವೈಭವ, ಬ್ರಹ್ಮೋತ್ಸವ, ಮೈಸೂರು ದಸರಾ, ವಿವಾಹ ವೈಭವ ಸೇರಿದಂತೆ ವಿಶೇಷ ಉತ್ಸವಗಳು, ದಸರಾ ವೈಶಿಷ್ಟ್ಯ ಬಿಂಬಿಸುವ ಮಾದರಿಗಳು, ಮದುವೆ ದಿಬ್ಬಣದ ಮಾದರಿಗಳು ರೂಪಗೊಂಡಿವೆ. ಮಹಾಲಯ ಅಮಾವಾಸ್ಯೆಯ ನಂತರದ ದಿನದಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪಟ್ಟದ ಗೊಂಬೆಗಳಿಗೆ ವಿಶೇಷ ಪೂಜೆ ಇರುತ್ತದೆ. ನಂತರ ಚರ್ಪು ಹಂಚುವುದು ಕಡ್ಡಾಯ. ಮಕ್ಕಳಿಗಂತೂ ಸಂಜೆಯಾದರೆ ಗೊಂಬೆ ಕೂರಿಸಿರುವ ಮನೆಗಳಿಗೆ ಭೇಟಿ ನೀಡುವುದೇ ಸಂಭ್ರಮ.

ಮೈಸೂರಿನಲ್ಲಿ ರಾಜದರ್ಬಾರು ನಡೆಯುತ್ತಿದ್ದರೆ ನಮ್ಮನೆಯಲ್ಲಿ ಗೊಂಬೆ ದರ್ಬಾರು ನಡೆಯುತ್ತಿತ್ತು. ಊರು ಸುಭೀಕ್ಷವಾಗಿರಲಿ, ಮನೆಮನೆಗಳೂ ನೆಮ್ಮದಿಯಿಂದಿರಲಿ ಎಂಬ ಆಕಾಂಕ್ಷೆಯಲ್ಲಿ ಇದು ನಡೆಯುತ್ತದೆ.

ಇಲ್ಲಿನ ನೇಯ್ಗೆಬೀದಿ, ಬ್ರಾಹ್ಮಣರಬೀದಿ, ಸೋಮೇಶ್ವರ ಬಡಾವಣೆ, ಶಾಂತಿನಗರ, ಮಾರುತಿ ನಗರ, ನಗರ್ತರಪೇಟೆ, ಟ್ಯಾಂಕ್‌ರಸ್ತೆ, ಕೊಂಗಾಡಿಯಪ್ಪ ಮುಖ್ಯರಸ್ತೆ ಸೇರಿದಂತೆ ಹಲವು ಬಡಾವಣೆಗಳ ಹತ್ತಾರು ಮನೆಗಳಲ್ಲಿ ಗೊಂಬೆ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

ಸಾಂಪ್ರದಾಯಿಕ ಮಣ್ಣಿನ ಗೊಂಬೆಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗೊಂಬೆಗಳು, ಪ್ಲಾಸ್ಟಿಕ್ ಗೊಂಬೆಗಳ ಆರ್ಭಟ ಹೆಚ್ಚಿದೆ. ಇದರೊಟ್ಟಿಗೆ ವಿದೇಶಗಳಿಂದ ಆಮದಾಗುತ್ತಿರುವ ಗೊಂಬೆಗಳೂ ರಾರಾಜಿಸುತ್ತಿರುವುದು ಕಂಡು ಬರುತ್ತಿದೆ. ಅದೇನೇ ಇರಲಿ ಇಂದಿನ ಫ್ಯಾಷನ್ ಭರಾಟೆಯ ಕಾಲದಲ್ಲೂ ಹಿಂದಿನವರು ನಡೆಸಿಕೊಂಡು ಬಂದ ಆಚರಣೆಗಳು ಭಿನ್ನ ಆಲೋಚನೆಗಳ ಜೊತೆಗೂಡಿ ಮುಂದುವರೆಯುತ್ತಿರುವುದು ಮುಖ್ಯ. ಸೋಮವಾರದಿಂದ ಆರಂಭವಾಗಿರುವ ಗೊಂಬೆ ಹಬ್ಬ ವಿಜಯದಶಮಿವರೆಗೆ ಮುಂದುವರಿಯಲಿದೆ.

22ಕೆಡಿಬಿಪಿ4-

ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಮುಖ್ಯರಸ್ತೆಯ ಎಸ್.ನವೀನ್‌ ಮನೆಯಲ್ಲಿ ಒಪ್ಪ-ಓರಣವಾಗಿ ಸಿಂಗರಿಸಲ್ಪಟ್ಟ ಗೊಂಬೆಗಳ ಕಲರ್‌ಫುಲ್‌ ಲೋಕ.

--

22ಕೆಡಿಬಿಪಿ5- ದೊಡ್ಡಬಳ್ಳಾಪುರದ ಶಾಂತಿನಗರದ ಕೆ.ವಿ.ರಾಮಕೃಷ್ಣ ಅವರ ಮನೆಯಲ್ಲಿನ ಗೊಂಬೆ ಹಬ್ಬದ ಸಂಭ್ರಮ.

--

22ಕೆಡಿಬಿಪಿ6- ದೊಡ್ಡಬಳ್ಳಾಪುರದ ಮನೆಗಳಲ್ಲಿ ಗೊಂಬೆ ಹಬ್ಬದ ಝಲಕ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಪುಸ್ತಕಗಳನ್ನು ಕೊಂಡು ಕೊಂಡಾಡಿ : ಹರಿಕೃಷ್ಣ ಪುನರೂರು
ಸಹಕಾರ ತತ್ವದಡಿ ಸಮಾಜಮುಖಿಯಾಗಿರುವ ಮಹಿಳೆ