ಮಹಾ ಶಿವರಾತ್ರಿ ಹಿನ್ನೆಲೆ ಹಂಪಿಗೆ ಹರಿದು ಬಂದ ಭಕ್ತರ ದಂಡು

KannadaprabhaNewsNetwork |  
Published : Feb 27, 2025, 12:33 AM IST
26ಎಚ್‌ಪಿಟಿ4- ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಸಚಿವ ಜಮೀರ್‌ ಅಹಮದ್‌ ಖಾನ್‌, ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ದೇವರ ದರ್ಶನ ಪಡೆದರು. | Kannada Prabha

ಸಾರಾಂಶ

ವಿಶ್ವವಿಖ್ಯಾತ ಹಂಪಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಶಿವರಾತ್ರಿ ಮುನ್ನಾದಿನವೇ ಸ್ವಾಮಿಯ ದರ್ಶನಕ್ಕಾಗಿ ಹಂಪಿಗೆ ಜನಸಾಗರವೇ ಹರಿದು ಬಂದಿದ್ದು, ಭಾನುವಾರ ಬೆಳಗ್ಗೆ ಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಸ್ವಾಮಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತು ದರ್ಶನ ಪಡೆದರು. ವಿಶೇಷ ಪೂಜಾ ದಿನದಂದು ಸ್ವಾಮಿಗೆ ನವರತ್ನ ಖಚಿತ ಕಿರೀಟ ಧಾರಣೆ ಮಾಡಿ ವಿಶೇಷ ಅಲಂಕಾರ, ಪೂಜೆ ನಡೆಸಲಾಯಿತು.

ಸಂಭ್ರಮದ ಜಾಗರಣೆ:

ಶಿವರಾತ್ರಿ ದಿನ ಸಂಜೆ 6.30ರಿಂದ ಮಾರನೆ ದಿನ ಬೆಳಗಿನ ಜಾವ 4.30ರವರೆಗೆ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಗಂಟೆಗೊಮ್ಮೆ ಶ್ರೀವಿರೂಪಾಕ್ಷೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಸಲಾಯಿತು. ಭಕ್ತರು ಇಡೀ ರಾತ್ರಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ಜಾಗರಣೆ ಮಾಡಿದರು. ದೇವಸ್ಥಾನದಲ್ಲಿ ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದವು. ಕೆಲ ಭಕ್ತರು ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಸಿಕೊಟ್ಟರೆ, ಇನ್ನು ಕೆಲವರು ಹಣ್ಣು-ಹಂಪಲು ಸೇವೆ ನಡೆಸಿದರು. ದೂರದ ಊರುಗಳಿಂದ ಟ್ರ್ಯಾಕ್ಸ್, ಬಸ್, ಕಾರು ಹಾಗೂ ಮತ್ತಿತರ ವಾಹನಗಳಲ್ಲಿ ಭಕ್ತರು ಆಗಮಿಸಿ, ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಸಿ ಜಾಗರಣೆ ಮಾಡಿದರು.

ಸ್ಥಳೀಯ ಭಕ್ತರೊಂದಿಗೆ ವಿದೇಶಿ ಪ್ರವಾಸಿಗರು ಕೂಡ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನಕ್ಕೆಂದು ಸರತಿ ಸಾಲಿನಲ್ಲಿ ಶ್ರೀ ವಿರೂಪಾಕ್ಷ ಸ್ವಾಮಿಯ ದರ್ಶನ ಪಡೆದರು. ಸುಮಾರು 10 ಸಾವಿರಕ್ಕೂ ಅಧಿಕ ಜನರು ದರ್ಶನ ಪಡೆದರು.

ಹಂಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್‌. ಜಮೀರ್ ಅಹಮದ್‌ ಖಾನ್‌, ಶಾಸಕ ಎಚ್.ಆರ್. ಗವಿಯಪ್ಪ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಮಾಜಿ ಶಾಸಕ ಸಿರಾಜ್ ಶೇಖ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ದೇವರ ದರ್ಶನ ಪಡೆದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ