ಕನ್ನಡಪ್ರಭ ವಾರ್ತೆ ಯಾದಗಿರಿ
ಮಹಾರಾಷ್ಟ್ರ ಸೇರಿದಂತೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆಯಲ್ಲಿ ಭೀಮಾ ನದಿ ಪಾತ್ರದಲ್ಲಿ ಪ್ರವಾಹದಿಂದಾಗಿ ಜನಜೀವನ ತತ್ತರಿಸುವಂತೆ ಮಾಡಿದೆ. ಕಳೆದ ಆರು ದಿನಗಳಲ್ಲಿ ಭೀಮಾ ನದಿಗೆ ಸುಮಾರು 24 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಸೆ.28 ರಂದು 5.10 ಲಕ್ಷ ನೀರನ್ನು ಹರಿಬಿಡಲಾಗಿದೆ. ಅರ್ಭಟಿಸುತ್ತಿರುವ ಭೀಮೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.ಯಾದಗಿರಿಯ ಗುರುಸುಣಗಿ ಹಾಗೂ ಸನ್ನತಿಯ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಹೀಗಾಗಿ, ಯಾದಗಿರಿ ನಗರವೂ ಸೇರಿದಂತೆ, ವಡಗೇರಾ ಹಾಗೂ ಶಹಾಪುರ ತಾಲೂಕಿನ ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿರುವ ಪ್ರವಾಹ, ಜನರನ್ನು ಗ್ರಾಮಗಳಿಂದ ತೊರೆದು, ಸರ್ಕಾರದ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಅನಿವಾರ್ಯತೆಗೆ ನೂಕಿದೆ.
ಯಾದಗಿರಿ ನಗರ ಡಾನ್ ಬಾಸ್ಕೋ ಶಾಲೆಯ ಹತ್ತಿರದ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಸಂಪೂರ್ಣ ಮುಳುಗಿದೆ. ಯಾದಗಿರಿಯಿಂದ ಚಿತ್ತಾಪೂರ ಮಾರ್ಗವಾಗಿ ಕಲಬುರಗಿಗೆ ಸಂಪರ್ಕ ಕಲ್ಪಿಸುವ ಜೊತೆಗೆ, ಜಿಲ್ಲಾಡಳಿತ ಭವನ ಹಾಗೂ ಎಸ್ಪಿ ಕಚೇರಿ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಹಲವು ಪ್ರಮುಖ ಕಚೇರಿಗೆ ತೆರಳುವ ದಾರಿ ಇದಾಗಿದ್ದು, ಜಲಾವೃತಗೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆಯಿಂದಲೇ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಿವಿಧೆಡೆ ತೆರಳಲು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಯಾದಗಿರಿ ನಗರದ ಲುಂಬಿನಿ ವನದೆದುರಿನ ಚರಂಡಿಗಳಲ್ಲಿ ಹರಿದುಬಂದ ಸಾವಿರಾರು ಮೀನುಗಳ ಹಿಡಿಯಲು ಪೈಪೋಟಿ ನಡೆದಿತ್ತು.ಇನ್ನು, ಯಾದಗಿರಿ ಹೊರವಲಯದಲ್ಲಿ ಭೋರ್ಗರೆಯುತ್ತಿರುವ ಭೀಮಾನದಿ ಆರ್ಭಟ ನೋಡಲು ಜನಸಾಗರ ಕಿಕ್ಕಿರಿದು ಸಾಗಿದ್ದರು. ಇಲ್ಲಿನ ಕಂಗಳೇಶ್ವರ ಹಾಗೂ ಶ್ರೀವೀರಾಂಜನೇಯ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಹೈಟೆಕ್ ಮೀನು ಮಾರುಕಟ್ಟೆ ಸಹ ಭಾಗಶ: ಮುಳುಗಿದೆ. ಯಾದಗಿರಿ ನಗರದ ರೈಲ್ವೆ ಹಳಿಯನ್ನೂ ದಾಟಿದ ಪ್ರವಾಹದ ನೀರು, ಅಲ್ಲಿನ ನೂತನವಾಗಿ ನಿರ್ಮಾಣವಾದ ಬಡಾವಣೆಗಳಿಗೆ ನುಗ್ಗಿತ್ತು. ಕೆಲವು ಬಡಾವಣೆಗಳು ಕೆರೆಯಂಗಳದಂತೆ ಕಾಣಿಸುತ್ತಿದ್ದರೆ, ಅಲ್ಲಿನ ನಿವಾಸಿಗಳನ್ನು ಹೊರ ಕರೆತರಲು ಹರಸಾಹಸ ಪಡುತ್ತಿರುವುದು ಕಂಡುಬಂತು.
ಯಾದಗಿರಿ ನಗರದ ಗ್ರೀನ್ ಸಿಟಿ, ವಿಶ್ವಾರಾಧ್ಯ ಬಡಾವಣೆಗೆ ನೀರು ನುಗ್ಗಿತ್ತು. ಜಿಲ್ಲಾ ಕ್ರೀಡಾಂಗಣ ಹಾಗೂ ಬಿಜೆಪಿ ಕಚೇರಿ ಸೇರಿದಂತೆ ಹಲವು ಕಟ್ಟಡಗಳು ಮುಳುಗಡೆಯಾಗಿದ್ದವು. ನೀರು ನುಗ್ಗಿರುವುದರಿಂದ ಮನೆಯೊಳಗೆ ಸಿಲುಕಿದ ನಗರದ ನಿವಾಸಿಗಳು ಆತಂಕಗೊಂಡು, ಸ್ಥಳೀಯರು ಹಾಗೂ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳ ನೆರವಿನೊಂದಿಗೆ ಸುರಕ್ಷತಾ ಸ್ಥಳಕ್ಕೆ ದೌಡಾಯಿಸಿದರು.ಜಿಲ್ಲೆಯಲ್ಲಿ ಕಳೆದ ತಿಂಗಳು ಕಾಡಿದ್ದ ಮಳೆಯಿಂದಾದ ಹಾನಿಯ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಆರಂಭಿಸಿದ ಬೆನ್ನಲ್ಲೇ, ಮತ್ತೇ ವಾರಕಾಲ ಬಿಟ್ಟೂ ಬಿಡದೆ ಸುರಿದ ಮಳೆ ಇಡೀ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಆಗಿನ ಅಂದಾಜು ಪ್ರಕಾರ ಸುಮಾರು 26 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬೆಳೆಹಾನಿ ಕಂಡಿದ್ದರೆ, ಕಳೆದ ಮೂರು ದಿನಗಳಲ್ಲಿ ಸುರಿದ ಮಳೆ ಹಾಗೂ ಭೀಮಾ ಪ್ರವಾಹಕ್ಕೆ 1 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿನ ಬೆಳೆ ನೀರುಪಾಲಾಗಿದೆ. ಭತ್ತ, ಹತ್ತಿ, ತೊಗರಿ, ಹೆಸರು ಬೆಳೆಗಳು ಹೇಳ ಹೆಸರಿಲ್ಲದಂತಾಗಿವೆ. ಇಷ್ಟೊಂದು ಪ್ರಮಾಣದಲ್ಲಿನ ರೈತಾಪಿ ವರ್ಗಕ್ಕೆ ಭಾರಿ ಆಘಾತ ಮೂಡಿಸಿದೆ.
ಜಿಲ್ಲೆಯಲ್ಲಿ ಸೆ.22 ರಿಂದ ಸೆ.28ರವರೆಗೆ 93 ಮಿ.ಮೀ. ಮಳೆ ಸುರಿದಿದೆ. ವಾಡಿಕೆಗಿಂತ ಇದು 51ಮಿ.ಮೀ. ಹೆಚ್ಚಾಗಿದೆ. "ಆರೆಂಜ್ ಅಲರ್ಟ್ " ನೀಡಲಾಗಿದ್ದು, ಮಳೆ ಸುರಿಯುವ ಲಕ್ಷಣಗಳು ಮುಂದುವರೆದಿದೆ. ಭಾನುವಾರದಿಂದ ಮುಂದಿನ 48 ಗಂಟೆಗಳ ಕಾಲ ಭೀಮಾನದಿಯಲ್ಲಿ ಪ್ರವಾಹ ಹೆಚ್ಚುವ ಎಚ್ಚರಿಕೆ ನೀಡಲಾಗಿದೆ.ಜಿಲ್ಲೆಯ ಶಹಾಪುರ ಹಾಗೂ ವಡಗೇರಾ ತಾಲೂಕುಗಳಲ್ಲಿ ನಿರ್ಮಾಣಗೊಂಡ 5 ಕಾಳಜಿ ಕೇಂದ್ರಗಳಲ್ಲಿ 460 ಸಂತ್ರಸ್ತರಿಗೆ ರಕ್ಷಣೆ ನೀಡಲಾಗಿದೆ. 150 ಕುಟುಂಬಗಳ ಸ್ಥಳಾಂತರಿಸಲಾಗಿದೆ. ಈವರೆಗೆ (ಸೆ.28) 104 ಮನೆಗಳಿಗೆ ಹಾನಿಯಾಗಿದ್ದು, 22 ಪ್ರಾಣಿಗಳು ಸಾವನ್ನಪ್ಪಿವೆ. 1.40 ಹೆಕ್ಟೇರ್‌ನಷ್ಟು ಬೆಳೆಹಾನಿ ಅಂದಾಜಿಸಲಾಗಿದೆ. ಯಾದಗಿರಿ - ಶಹಾಪುರ ನಡುವಿನ ರಾಜ್ಯ ಹೆದ್ದಾರಿಯಲ್ಲಿ ನೀರು ಹರಿದುಬಂದಿದೆ. ನಾಯ್ಕಲ್ ಗ್ರಾಮ ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.