ಸಾಹಿತಿಗಳು, ಬೌದ್ಧಿಕರು ಪರಸ್ಪರ ಗೌರವಿಸುವ ಪರಂಪರೆ ಕಡಿಮೆಯಾಗುತ್ತಿದೆ. ಆದ್ದರಿಂದ ಕವಿಗೆ ಕವಿ ಮುನಿವ ಬದಲು ಮಣಿವ ಸಂಸ್ಕೃತಿ ಬೆಳೆಯಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಬಿ. ಎ. ವಿವೇಕ ರೈ ಹೇಳಿದರು.
ಉಡುಪಿ: ಸಾಹಿತಿಗಳು, ಬೌದ್ಧಿಕರು ಪರಸ್ಪರ ಗೌರವಿಸುವ ಪರಂಪರೆ ಕಡಿಮೆಯಾಗುತ್ತಿದೆ. ಆದ್ದರಿಂದ ಕವಿಗೆ ಕವಿ ಮುನಿವ ಬದಲು ಮಣಿವ ಸಂಸ್ಕೃತಿ ಬೆಳೆಯಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಬಿ. ಎ. ವಿವೇಕ ರೈ ಹೇಳಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಂಗಳೂರಿನ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸಮಿತಿ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ಪ್ರೊ.ಎಸ್. ವಿ.ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.ಮೌಲ್ಯಗಳು, ಕೌಟುಂಬಿಕ ಸಂಬಂಧಗಳು ಉಳಿಯಬೇಕು, ಬೆಳೆಯಬೇಕು. ಪ್ರೀತಿ ಸಂಸ್ಕೃತಿಯಿಂದ ಮಾತ್ರ ನಾಡು ಕಟ್ಟಲು ಸಾಧ್ಯ. ಚಟವಾಗಿರುವ ಆಧುನಿಕತೆಯ ಸೌಕರ್ಯಗಳಿಂದ ವಿಮುಕ್ತಿ ಹೊಂದಲು ಕಲೆ, ಸಾಹಿತ್ಯ ಸಹಾಯ ಮಾಡುತ್ತದೆ ಎಂದವರು ಹೇಳಿದರು.
ಏಕಾಂಗಿತನ, ಅವಮಾನದ ಬಿಡುಗಡೆಗಾಗಿ ಬರವಣಿಗೆ: ಪ್ರಶಸ್ತಿ ಸ್ವೀಕರಿಸಿದ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಕೆಲಸದ ಒತ್ತಡ, ಏಕಾಂಗಿತನ, ನಿರಾಶೆ, ಅವಮಾನಗಳ ಬಂಧನದ ಬಿಡುಗಡೆಗಾಗಿ ನಾನು ಕಂಡುಕೊಂಡ ದಾರಿಯೇ ಬರವಣಿಗೆ. ಅಡಿಗರ ಪ್ರಭಾವ ನನ್ನ ಸಾಹಿತ್ಯದ ದಾರಿ ಗಟ್ಟಿ ಮಾಡಿತು. ಪ್ರಶಸ್ತಿಗಾಗಿ ಬರೆದಿಲ್ಲ. ನನ್ನೊಳಗಿನ ತಳಮಳ ಬೆರಗು, ಬೆಡಗು, ತಲ್ಲಣ ಹೊರಹಾಕಲು ಬರೆದೆ, ತೃಪ್ತಿ ಪಡೆದೆ ಎಂದರು.ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್. ಎಸ್.ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಯುವಜನತೆ ದಾರಿತಪ್ಪದಿರಲು, ವಿದ್ಯಾರ್ಥಿ ಜೀವನದಲ್ಲಿಯೇ ಕಲೆ, ಸಾಹಿತ್ಯದ ಆಸಕ್ತಿ ಮೂಡಿಸಬೇಕು ಎಂದು ಸಲಹೆ ಮಾಡಿದರು ಹಿರಿಯ ಸಾಹಿತಿ ಡಾ. ನಾ.ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ, ಎಸ್.ಪಿ. ರಾಮಚಂದ್ರ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ನರಸಿಂಹ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಆರ್.ಆರ್.ಸಿ.ಸಹ ಸಂಶೋಧಕ ಡಾ.ಅರುಣ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹಿರಿಯ ಸಂಗೀತ ವಿದ್ವಾಂಸ ಕೆ.ಆರ್.ರಾಘವೇಂದ್ರ ಆಚಾರ್ಯ ಮತ್ತು ಬಳಗವು ಎಸ್.ವಿ. ಪಿ. ಹಾಗೂ ಸುಬ್ರಾಯ ಚೊಕ್ಕಾಡಿ ರಚಿತ ಕವನಗಳ ಗಾಯನ ನಡೆಸಿಕೊಟ್ಟಿತು. ಎಸ್.ವಿ. ಪಿ. ಬಿ. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಮಲ್ಲಿಗೆ ಹಾರ ಮಡದಿಗೆ: ತಮಗೆ ಪ್ರಶಸ್ತಿ ಪ್ರದಾನದ ವೇಳೆ ತೊಡಿಸಿದ ಮಲ್ಲಿಗೆ ಹಾರವನ್ನು ಕವಿ ಸುಬ್ರಾಯ ಚೊಕ್ಕಾಡಿ ಅವರು ತಮ್ಮ ಮಡದಿ ಲಕ್ಷ್ಮೀ ಕೊರಳಿಗೆ ಹಾಕಿ, ಪ್ರಶಸ್ತಿ ಮೊತ್ತವನ್ನು ಅವರ ಕೈಗೆ ನೀಡಿದ್ದು, ಪ್ರೇಕ್ಷಕರಿಗೆ ಮುದ ನೀಡಿತು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.