ಮೌನೇಶ ವಿಶ್ವಕರ್ಮಪುತ್ತೂರು: ಕಾಳು ಮೆಣಸು “ಮಸಾಲೆಗಳ ರಾಜ” ಎಂದೇ ಪ್ರಸಿದ್ಧಿ ಪಡೆದಿರುವ ಈ ಅಮೂಲ್ಯ ಕೃಷಿ ಉತ್ಪನ್ನವು ರೈತರ ಆದಾಯದ ಪ್ರಮುಖ ಆಧಾರ. ಆದರೆ ಸಂಸ್ಕರಣೆಯ ಕಾರಣಕ್ಕೆ ಕೈಯಿಂದಲೇ ಮಾಡುವ ಕಾಳು ಮೆಣಸು ಸ್ವಚ್ಛಗೊಳಿಸುವ ಪ್ರಕ್ರಿಯೆ ಕೃಷಿಕರಿಗೆ ಹೆಚ್ಚು ಶ್ರಮ, ಸಮಯ ಮತ್ತು ಖರ್ಚನ್ನು ಒಳಗೊಂಡಿದೆ.ಆದರೆ ಈ ಸಮಸ್ಯೆಗೆ ಪರಿಣಾಮಕಾರಿ ಹಾಗೂ ಆಧುನಿಕ ಪರಿಹಾರವನ್ನು ಪುತ್ತೂರಿನ ಎಸ್.ಆರ್.ಕೆ ಲ್ಯಾಡರ್ಸ್ ಸಂಸ್ಥೆಯ ಸಂಸ್ಥಾಪಕರಾದ ಕೇಶವ ಅಮೈ ಅವರು ಕಂಡುಕೊಂಡಿದ್ದಾರೆ. ಅವರು ರೂಪಿಸಿರುವ ಕಾಳು ಮೆಣಸು ಸ್ವಚ್ಛಗೊಳಿಸುವ ಯಂತ್ರ ಇಂದು ರೈತ ವಲಯದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.ಕೃಷಿ ಕ್ಷೇತ್ರದ ಅಗತ್ಯಗಳನ್ನು ಮನಗಂಡು ಹಲವು ಯಂತ್ರಗಳನ್ನು ವಿನ್ಯಾಸಗೊಳಿಸಿರುವ ಇವರು ಈ ಬಾರಿ ಸಿದ್ಧಪಡಿಸಿದ ಈ ಯಂತ್ರ, ಕಡಿಮೆ ಸಮಯದಲ್ಲಿ ಹೆಚ್ಚು ಪ್ರಮಾಣದ ಕಾಳು ಮೆಣಸನ್ನು ಶುದ್ಧವಾಗಿ ಗೊಳಿಸುವ ಸಾಮರ್ಥ್ಯ ಹೊಂದಿದೆ. ಒಂದು ಗಂಟೆಯ ಅವಧಿಯಲ್ಲಿ ಸುಮಾರು ನಾಲ್ಕು ಕ್ವಿಂಟಾಲ್ ತೂಕದ ಕಾಳು ಮೆಣಸನ್ನು ಸ್ವಚ್ಛಗೊಳಿಸುವ ಶಕ್ತಿ ಈ ಯಂತ್ರಕ್ಕಿದೆ. ಇದರಲ್ಲಿ ಕಾಳು ಮೆಣಸನ್ನು ಫಸ್ಟ್ ಕ್ವಾಲಿಟಿ ಮತ್ತು ಸೆಕೆಂಡ್ ಕ್ವಾಲಿಟಿ ಎಂದು ಪ್ರತ್ಯೇಕವಾಗಿ ವಿಂಗಡಿಸುವ ವ್ಯವಸ್ಥೆಯಿದ್ದು, ಯಂತ್ರದ ಒಂದು ಕಡೆಯಲ್ಲಿ ಕೇವಲ ಧೂಳು ಮಾತ್ರ ಹೊರಬರುವುದು ಇದರ ಪ್ರಮುಖ ವಿಶೇಷತೆ.
ಇದು ಕೇವಲ ಕಾಳು ಮೆಣಸಿಗೆ ಮಾತ್ರ ಸೀಮಿತವಾಗದೆ, ಬತ್ತ ಹಾಗೂ ಇತರ ಧಾನ್ಯಗಳನ್ನೂ ಶುದ್ಧಗೊಳಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕೇಶವ ಅಮೈ ಅವರು ತಿಳಿಸಿದ್ದಾರೆ.
ಕಾಳು ಮೆಣಸು ಹಾಕುವ ಸ್ಥಳದಲ್ಲಿ ಅಳವಡಿಸಲಾದ ರೋಟೇಟರ್ ವ್ಯವಸ್ಥೆಯಿಂದ ಒಬ್ಬ ವ್ಯಕ್ತಿಯೇ ಸಂಪೂರ್ಣ ಯಂತ್ರವನ್ನು ಸುಲಭವಾಗಿ ನಿರ್ವಹಿಸಬಹುದು.ಮನೆಯ ಸಾಮಾನ್ಯ ವಿದ್ಯುತ್ ಅಥವಾ ಇನ್ವಾರ್ಟರ್ ಬಳಸಿ ಈ ಯಂತ್ರವನ್ನು ಚಲಾಯಿಸಬಹುದಾಗಿದ್ದು, 1/4 ಹೆಚ್.ಪಿ ಚಾಲಿತ ಮೋಟಾರ್ ಅಳವಡಿಸಲಾಗಿದೆ. ಕಡಿಮೆ ವಿದ್ಯುತ್ ಬಳಕೆ, ಕಡಿಮೆ ಶ್ರಮ ಮತ್ತು ಹೆಚ್ಚಿನ ಉತ್ಪಾದಕತೆ ಈ ಮೂರು ಅಂಶಗಳ ಕಾರಣದಿಂದ ಈ ಯಂತ್ರ ಇಂದು ಸಣ್ಣ ಮತ್ತು ಮಧ್ಯಮ ರೈತರಿಗೆ ನಿಜವಾದ ವರದಾನವಾಗಿ ಪರಿಣಮಿಸಿದೆ.