ಎಂಇಎಸ್‌ಗೆ ಕರಾಳ ಮುಖಭಂಗ!

KannadaprabhaNewsNetwork | Published : Oct 16, 2024 12:35 AM

ಸಾರಾಂಶ

ಬೆಳಗಾವಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಅನುಮತಿ ನೀಡಲಿ, ಬಿಡಲಿ ನವೆಂಬರ್‌ 1ರಂದು ಕರಾಳ ದಿನಾಚರಣೆ ಮಾಡಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರಿಗೆ ತೀವ್ರ ಮುಖಭಂಗ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಅನುಮತಿ ನೀಡಲಿ, ಬಿಡಲಿ ನವೆಂಬರ್‌ 1ರಂದು ಕರಾಳ ದಿನಾಚರಣೆ ಮಾಡಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರಿಗೆ ತೀವ್ರ ಮುಖಭಂಗ ಉಂಟಾಗಿದೆ. ಕರಾಳ ದಿನಾಚರಣೆಗೆ ಅನುಮತಿ ನೀಡುವಂತೆ ಕೋರಿ ಮಂಗಳವಾರ ಮನವಿ ಸಲ್ಲಿಸಲು ತೆರಳಿದ್ದ ಎಂಇಎಸ್‌ ಮುಖಂಡರ ನಿಯೋಗಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಯಾವುದೇ ಕಾರಣಕ್ಕೂ ಕರಾಳ ದಿನಾಚಣೆಗೆ ಅನುಮತಿ ನೀಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುವ ಮೂಲಕ ಎಂಇಎಸ್‌ಗೆ ಖಡಕ್‌ ಸಂದೇಶ ನೀಡಿದರು.ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್‌ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡುತ್ತ ಬಂದಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ ಎನ್ನುತ್ತಿದ್ದಂತೆಯೇ ಎಂಇಎಸ್‌ ಮುಖಂಡರು, ಕರ್ನಾಟಕ ಸರ್ಕಾರದ ವಿರುದ್ಧ ನಮ್ಮ ಹೋರಾಟವಲ್ಲ. ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ಎಂದು ಸಬೂಬು ನೀಡಲು ಮುಂದಾದರು.

ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಡಿಸಿ ರೋಷನ್‌ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಕಾನೂನಿನ ಚೌಕ್ಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ. ಆದರೆ, ನವೆಂಬರ್‌ 1ರ ಬದಲಾಗಿ ಬೇರೆ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡಲಾಗುವುದು. ಆದರೆ, ಕರ್ನಾಟಕದ ಐಕ್ಯತೆಗೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಬೆಳಗಾವಿಯಲ್ಲಿ ಗಣೋಶೋತ್ಸವ, ಈದ್‌ ಮಿಲಾದ್‌ ಹಬ್ಬವನ್ನು ಸಾಮರಸ್ಯದಿಂದ ಆಚರಿಸಿದ್ದೇವೆ. ನೀವು ಕೂಡ ರಾಜ್ಯೋತ್ಸವ ದಿನ ಹೊರತುಪಡಿಸಿ ಬೇರೆ ದಿನ ಹೋರಾಟ ಮಾಡುವಂತೆ ಎಂಇಎಸ್ ಮುಖಂಡರಿಗೆ ಬುದ್ಧಿವಾದ ಹೇಳಿದರು.

ಜಿಲ್ಲಾಧಿಕಾರಿ ನಡೆಗೆ ಎಂಇಎಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದಾಗ ಗರಂ ಆದ ಜಿಲ್ಲಾಧಿಕಾರಿ ಭಾಷಾ ಸಾಮರಸ್ಯ ಕಾಪಾಡುವುದು ಮುಖ್ಯ. ಪ್ರತಿ ರಾಜ್ಯೋತ್ಸವ ಸೇರಿದಂತೆ ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರ ಪ್ರಕರಣ ದಾಖಲಾಗಿವೆ. ನನಗೆ ಜಿಲ್ಲಾಧಿಕಾರಿ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಿದೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಬೇಕು. ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಕಾನೂನು ಸುವ್ಯವಸ್ಥೆ ಹಾಳಾದರೆ ಸುಪ್ರೀಂಕೋರ್ಟ್‌ ನನ್ನನ್ನು ಕರೆಸುತ್ತದೆ. ಹಾಗಾಗಿ, ನಿರ್ಧಾರ ಒಪ್ಪಿಕೊಳ್ಳಬೇಕು ಎಂದು ಎಂಇಎಸ್‌ ಮುಖಂಡರಿಗೆ ಪಾಠ ಮಾಡಿದರು. ಇದರಿಂದಾಗಿ ತೀವ್ರ ಮುಖಭಂಗ ಅನುಭವಿಸಿದ ಎಂಇಎಸ್‌ ಮುಖಂಡರು ಬಂದದಾರಿಗೆ ಸುಂಕ ಇಲ್ಲ ಎಂಬಂತೆ ಅಲ್ಲಿಂದ ಕಾಲ್ಕಿತ್ತರು.

Share this article