ಅಲ್ಪಸಂಖ್ಯಾತರ ಬಲದಿಂದಷ್ಟೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆ ಕಾಂಗ್ರೆಸನಲ್ಲಿದೆಯೇ: ವಿಜಯೇಂದ್ರ ಪ್ರಶ್ನೆ

KannadaprabhaNewsNetwork |  
Published : Oct 16, 2024, 12:35 AM IST
 ಕೇವಲ ಅಲ್ಪಸಂಖ್ಯಾತರ ಬಲದಿಂದ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆ ಕಾಂಗ್ರೇಸ್‌ನಲ್ಲಿದೆಯೇ.. - ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಬ್ರಹ್ಮರಕೂಟ್ಲುವಿನ ಬಂಟರಭವನದಲ್ಲಿ ಜಿಲ್ಲಾಮಟ್ಟದ ಚುನಾವಣಾ ಪ್ರಚಾರ ಸಭೆ | Kannada Prabha

ಸಾರಾಂಶ

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿ ಹಾಗೆಯೇ ಮುಂದುವರಿಯಬೇಕು. ಹಗರಣಗಳಲ್ಲಿ ಮುಳುಗಿದ ಸರ್ಕಾರದ ನೀತಿಗಳಿಂದ ಸರ್ಕಾರ ಪಾಪರ್ ಆಗಿದ್ದು, ಈ ಸರ್ಕಾರ ತೊಲಗಿದರೆ ಮಾತ್ರ ಅಭಿವೃದ್ಧಿಗೆ ಅನುದಾನ ಒದಗಲು ಸಾಧ್ಯ ಎಂದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಗಣಪತಿ ಪ್ರತಿಷ್ಠಾಪನೆಗೆ ಹತ್ತಾರು ಕಾನೂನುಗಳನ್ನು ಜಾರಿಗೆ ತಂದ ಕಾಂಗ್ರೆಸ್‌, ರಾಷ್ಟ್ರಭಕ್ತಿ ಸಂಘಟನೆ ಆರ್‌ಎಸ್‌ಎಸ್‌ ಹಾಗೂ ಬಜರಂಗಿಗಳನ್ನು ದೇಶದ್ರೋಹಿ ಸಂಘಟನೆ ಎನ್ನುತ್ತಿದೆ. ಕೇವಲ ಅಲ್ಪಸಂಖ್ಯಾತರ ಬಲದಿಂದ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆಯಲ್ಲಿ ಇವರಿದ್ದಾರೆಯೇ..? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ ಬ್ರಹ್ಮರಕೂಟ್ಲುವಿನ ಬಂಟರಭವನದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಪ್ರತಿ ನಡೆಯೂ ಜನವಿರೋಧಿಯಾಗುತ್ತಿದ್ದು, ವಿಪಕ್ಷ ಬಿಜೆಪಿ ಸರ್ಕಾರದ‌ ಕಿವಿ ಹಿಂಡುವ ಕೆಲಸ ಮಾಡುತ್ತಿದೆ ಎಂದರು.ಸಿದ್ದರಾಮಯ್ಯ ಪ್ರಾಮಾಣಿಕ ಮುಖ್ಯಮಂತ್ರಿ...!: ಸಿದ್ದರಾಮಯ್ಯರನ್ನು ವಿಪಕ್ಷ ನಾಯಕರು ಭ್ರಷ್ಟಾಚಾರಿ ಎಂದೆಲ್ಲಾ ಆರೋಪಿಸುತ್ತಾರೆ, ಆದರೆ ನನ್ನ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಓರ್ವ ಪ್ರಾಮಾಣಿಕ ಮುಖ್ಯಮಂತ್ರಿ ಎನ್ನುವ ಮೂಲಕ ಬಿ.ವೈ. ವಿಜಯೇಂದ್ರ ಸಭಿಕರನ್ನು ಅಚ್ಚರಿಗೆ ತಳ್ಳಿದರು. ಮಾತು ಮುಂದುವರಿಸಿದ ಅವರು, ರಾಜ್ಯಾಧ್ಯಕ್ಷರಿಗೆ ತಲೆ‌ಕೆಟ್ಟಿದೆಯಾ ಎಂದುಕೊಳ್ಳಬೇಡಿ, ನಮ್ಮ ಹೋರಾಟಕ್ಕೆ ಹೆದರಿ ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಹಗರಣವನ್ನು ಒಪ್ಪಿಕೊಂಡಿರುವುದು, ಪರಿಹಾರ ಕೇಳದೆ ಮುಡಾ ಸೈಟು ವಾಪಸ್‌ ಕೊಟ್ಟು ತಮ್ಮ ತಪ್ಪನ್ನು ಒಪ್ಪಿರುವುದು ಪ್ರಾಮಾಣಿಕತೆ ಅಲ್ಲವೇ ಎಂದು‌ ವ್ಯಂಗ್ಯವಾಡಿದರು.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿ ಹಾಗೆಯೇ ಮುಂದುವರಿಯಬೇಕು. ಹಗರಣಗಳಲ್ಲಿ ಮುಳುಗಿದ ಸರ್ಕಾರದ ನೀತಿಗಳಿಂದ ಸರ್ಕಾರ ಪಾಪರ್ ಆಗಿದ್ದು, ಈ ಸರ್ಕಾರ ತೊಲಗಿದರೆ ಮಾತ್ರ ಅಭಿವೃದ್ಧಿಗೆ ಅನುದಾನ ಒದಗಲು ಸಾಧ್ಯ ಎಂದರು.

ಉಡುಪಿ ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯ ತಳಪಾಯದ ಒಂದೊಂದೇ ಕಲ್ಲುಗಳನ್ನು ತೆಗೆಯುತ್ತಾ ಇದೆ. ಗ್ರಾ.ಪಂ. ಸದಸ್ಯರಿಗೆ ಗೌರವಧನ ಕೊಟ್ಟದ್ದು ಯಡಿಯೂರಪ್ಪ ಸರ್ಕಾರ ಎಂಬುದನ್ನು ನೆನಪಿಲ್ಲಿರಬೇಕು ಎಂದರು.

ಸಹಪ್ರಭಾರಿ ಸುಧಾಕರ ರೆಡ್ಡಿ ಮಾತನಾಡಿದರು. ಸಂಸದ ಬ್ರಿಜೇಶ್‌ ಚೌಟ ಮಾತನಾಡಿ, ಅಭ್ಯರ್ಥಿ ಕಿಶೋರ್ ಅವರನ್ನು ಗೆಲ್ಲಿಸುವ ಮೂಲಕ ಪಂಚಾಯಿತಿ ಸದಸ್ಯರ, ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡಲು ಮತದಾರರು ಅವಕಾಶ ಕೊಡಬೇಕು ಎಂದರು.

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಪಾಪದವರ ದುಡ್ಡಿನಲ್ಲಿ‌ ಬದುಕುತ್ತಿರುವ ಪಾಪಿಗಳ ಸರ್ಕಾರ ವಾಗಿದ್ದು, ಶೀಘ್ರ ಪತನವಾಗಲಿದೆ ಎಂದರು.

ಮಾಜಿ ಮುಖ್ಯಮಂತ್ರಿ‌ಡಿ.ವಿ.ಸದಾನಂದ ಗೌಡ ಮಾತನಾಡಿ, ಪುತ್ತೂರಿನಲ್ಲಿ ಗೂಂಡಾಗಿರಿಯ ರಾಜಕಾರಣ ನಡೆಯುತ್ತಿದ್ದ ಕಾಲದಲ್ಲಿಯೂ ಜನಸಂಘಕ್ಕೆ ಶಕ್ತಿಯಾಗಿದ್ದ ರಾಮಣ್ಣ ಭಂಡಾರಿಯವರ ಕುಟುಂಬದಲ್ಲಿ ಬೆಳೆದ ಕಿಶೋರ್‌ಗೆ ಅವಕಾಶ ಕೊಟ್ಟಿರುವುದು ಸಂತೋಷದ ಸಂಗತಿ ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಘೋಷಣೆಯಾದಾಗಲೇ ನಾವು ಈ ಕ್ಷೇತ್ರವನ್ನು ಗೆದ್ದಿದ್ದೇವೆ, ಈ ಬಾರಿ 2 ಸಾವಿರಕ್ಕೂ ಅಧಿಕ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.

ಅಭ್ಯರ್ಥಿ ಕಿಶೋರ್ ಕುಮಾರ್ ಮಾತನಾಡಿದರು. ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಉಸ್ತುವಾರಿ ಪ್ರತಾಪ ಸಿಂಹ ನಾಯಕ್, ಶಾಸಕರಾದ ರಾಜೇಶ್ ನಾಯ್ಕ್‌ ಉಳಿಪ್ಪಾಡಿಗುತ್ತು, ವಿ. ಸುನಿಲ್‌ ಕುಮಾರ್, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಜನತಾ ದಳದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಮಂಗಳೂರು ಮೇಯರ್ ಮನೋಜ್‌ ಕುಮಾರ್, ಉಪಮೇಯರ್ ಭಾನುಮತಿ, ಮಾಜಿ‌ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಇದೇ ವೇಳೆ ನೆಲ್ಯಾಡಿ ಗ್ರಾ.ಪಂ. ಸದಸ್ಯರಾದ ಜಯಾನಂದ ಬಂಟ್ರಿಯಾಲ್‌ ದಂಪತಿ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ದೇವದಾಸ ಶೆಟ್ಟಿ, ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ‌ ನಿರ್ವಹಿಸಿದರು. ಚುನಾವಣಾ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್‌ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!