ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನದ ಗುರಿ ಹೊಂದಿರುವ ಜಿಲ್ಲಾ ಸ್ವೀಪ್ ಸಮಿತಿ, ಇದಕ್ಕಾಗಿ ನಾನಾ ಪ್ರಯತ್ನ ಮಾಡುತ್ತಿದ್ದು, ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಸಿದ್ಧಪಡಿಸಿರುವ ಚುನಾವಣಾ ಮಾಡೆಲ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.ಮತದಾನ ಜಾಗೃತಿ ಹಿನ್ನೆಲೆ ಶಿವಮೊಗ್ಗ ಮತದಾನ ಜಾಗೃತಿ ವೇದಿಕೆ ಸಹಯೋಗದಲ್ಲಿ ಈ ಮಾಡೆಲ್ ಸ್ಥಾಪಿಸಲಾಗಿದ್ದು, ಕಲಾವಿದರಾದ ಸತೀಶ ಪುರಪ್ಪೆಮನೆ ಹಾಗೂ ತಂಡದವರು ಈ ಚುನಾವಣಾ ಮಾಡೆಲ್ ಸಿದ್ಧಪಡಿಸಿದ್ದಾರೆ.
ಸೋಮವಾರ ಸಿಟಿ ಸೆಂಟರ್ ಮಾಲ್ನಲ್ಲಿ ಸಿದ್ಧಪಡಿಸಿರುವ ಚುನಾವಣಾ ಮಾಡೆಲ್ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡುವ ಮೂಲಕ ಶೇ.100ರಷ್ಟು ಮತದಾನ ಆಗುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಶಿವಮೊಗ್ಗ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ. ಮತದಾನ ಪ್ರಮಾಣ ಹೆಚ್ಚಬೇಕು. ಬೆಂಗಳೂರಿನಲ್ಲಿ ಶೇಕಡ 50ಕ್ಕಿಂತ ಕಡಿಮೆ ಮತದಾನ ನಡೆದಿದ್ದು, ಆ ರೀತಿ ನಮ್ಮ ಶಿವಮೊಗ್ಗದಲ್ಲಿ ಆಗಬಾರದು. ಮತ ಚಲಾಯಿಸುವ ಮುಖಾಂತರ ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.76ರಷ್ಟು ಮತದಾನ ನಡೆಡಿದ್ದು, ನಗರ ಪ್ರದೇಶದಲ್ಲಿ ಶೇ.60ರಷ್ಟು ಮಾತ್ರ ಮತದಾನ ನಡೆದಿದೆ. ನಗರ ಪ್ರದೇಶದ ಜನರು ಮತದಾನ ಮಾಡುವಲ್ಲಿ ಆಸಕ್ತಿ ಕಡಿಮೆ ತೋರುತ್ತಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಜನರ ಜೀವನ ರೂಪಿಸುವುದಕ್ಕೆ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತನ ಕರ್ತವ್ಯವಾಗಿದ್ದು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೀಜ್ ಮಾತನಾಡಿ, ಮೇ.7ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದು. ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತ ಹಾಕುವ ಅವಕಾಶ ಈ ಬಾರಿ ನೀಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ತಮ್ಮ ಮೊಬೈಲ್‍ನಲ್ಲಿ ಸಿವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆ ಮೂಲಕ ದೂರು ಸಲ್ಲಿಸಬಹುದು. 1950ಗೆ ಕರೆ ಮಾಡಿ ಸಹ ದೂರು ನೀಡಬಹುದು ಎಂದು ತಿಳಿಸಿದರು.
ಸ್ವೀಪ್ ಐಕಾನ್ ನಿವೇದನ್ ನೆಂಪೆ ಮಾತನಾಡಿ, ಶಿವಮೊಗ್ಗದ ಜನರು ಪ್ರಜ್ಞಾವಂತರೆಂದು ತೋರಿಸಿಕೊಳ್ಳಲು ಒಳ್ಳೆಯ ಅವಕಾಶ ದೊರಕಿದೆ. ಬುದ್ಧಿವಂತರು ಮತದಾನ ಮಾಡುವ ಮೂಲಕ ಪ್ರಜ್ಞಾವಂತರಾಗುತ್ತಾರೆ ಎಂದ ಅವರು, ಮೇ.7ಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕೋರಿದರು.ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಅಧಿಕಾರಿ ಸುಪ್ರಿಯ, ಸಿಟಿ ಸೆಂಟರ್ ಮಾಲ್ ನ ದರ್ಶನ್, ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಹಾಜರಿದ್ದರು.