ರಾಜ್ಯ ಬಿಜೆಪಿಯ ಅಂಗಳದಲ್ಲಿ ಕತ್ತೆ ಸತ್ತು ಬಿದ್ದಿದೆ, ಅದನ್ನು ಸರಿಪಡಿಸಿಕೊಳ್ಳಲಿ : ತಂಗಡಗಿ

KannadaprabhaNewsNetwork | Updated : Jan 23 2025, 12:07 PM IST

ಸಾರಾಂಶ

ರಾಜ್ಯ ಬಿಜೆಪಿಯ ಅಂಗಳದಲ್ಲಿ ಕತ್ತೆ ಸತ್ತು ಬಿದ್ದಿದೆ. ಅದನ್ನು ಸರಿಪಡಿಸಿಕೊಳ್ಳಲಿ ಅದು ಬಿಟ್ಟು ಕಾಂಗ್ರೆಸ್‌ನ ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ತಲೆ ಹಾಕುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

  ಕಾರಟಗಿ : ರಾಜ್ಯ ಬಿಜೆಪಿಯ ಅಂಗಳದಲ್ಲಿ ಕತ್ತೆ ಸತ್ತು ಬಿದ್ದಿದೆ. ಅದನ್ನು ಸರಿಪಡಿಸಿಕೊಳ್ಳಲಿ ಅದು ಬಿಟ್ಟು ಕಾಂಗ್ರೆಸ್‌ನ ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ತಲೆ ಹಾಕುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಬಿಜೆಪಿ ಪಾಳೆಯದಲ್ಲಿ ಅಧ್ಯಕ್ಷರು ಯಾರು ಎನ್ನುವ ಗೊಂದಲ ಇದೆ. ಅಸಲಿ-ನಕಲಿ ರಾಜ್ಯಾಧ್ಯಕ್ಷರು ಯಾರು ಎನ್ನುವ ಪ್ರಶ್ನೆ ಬೇರೆ ಎದ್ದಿದೆ. ಇದನ್ನು ಹುಟ್ಟು ಹಾಕಿದ್ದು ಬಿಜೆಪಿಯವರೆ ಹೊರತು ಕಾಂಗ್ರೆಸ್‌ನವರಲ್ಲ. ಹೀಗಾಗಿ ಬಿಜೆಪಿಗರು ಮೊದಲು ತಮ್ಮ ಪಕ್ಷದ ಹೊಲಸನ್ನು ತೊಳೆದುಕೊಳ್ಳಲಿ ನಂತರ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಚರ್ಚಿಸಲಿ ಎಂದು ವ್ಯಂಗ್ಯವಾಡಿದರು.

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತ ಹಾಗೂ ಬಿರುಕಿಲ್ಲ. ಈಗಾಗಲೇ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಯಾರೂ ಮಾತನಾಡಬಾರದು ಎಂದು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಯಾರೂ ಮಾತನಾಡುವುದಿಲ್ಲ ಎಂದರು.

ಬಿಜೆಪಿಗರಿಗೆ ಗಾಂಧಿ, ಕಾಂಗ್ರೆಸ್ ಹಾಗೂ ಅಂಬೇಡ್ಕರ್ ಅವರ ಇತಿಹಾಸ, ಹೋರಾಟದ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಅನುಭವ, ಜ್ಞಾನವಾಗಲಿ ಇಲ್ಲ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ನಾವೇ ಎಂದು ವೀರ ಸಾವರ್ಕರ್ ಪತ್ರ ಬರೆದಿದ್ದನ್ನು ದಾಖಲೆ ಸಮೇತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೋರಿಸಿ ಬಿಜೆಪಿಯವರ ಇತಿಹಾಸವನ್ನು ಬಹಿರಂಗಪಡಿಸಿದ್ದಾರೆ.

 ಬಿಜೆಪಿಯ ಇನ್ನೋರ್ವ ಮಹಾನ್ ನಾಯಕರು ಸಂಸತ್ತಿನಲ್ಲಿ ಕಾಂಗ್ರೆಸ್‌ನವರು ಪದೇ ಪದೇ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವ ಬದಲು ದೇವರ ಬಗ್ಗೆ ಜಪ ಮಾಡಿದರೆ ಸ್ವರ್ಗಕ್ಕೆ ಹೋಗುವುದಾಗಿ ಹೇಳುವ ಮೂಲಕ ಅಂಬೇಡ್ಕರ್ ಕಂಡರೆ ಅವರಿಗೆಷ್ಟು ಗೌರವ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಂವಿಧಾನ, ಅಂಬೇಡ್ಕರ್, ಗಾಂಧಿ, ನೆಹರು ಪರಿವಾರದ ಬಗ್ಗೆ ಅವರು ಮಾತನಾಡಿದಷ್ಟು ಕಾಂಗ್ರೆಸ್ ಬಲಿಷ್ಠವಾಗುತ್ತೆ. ಕಾರ್ಯಕರ್ತರು ಬಲಿಷ್ಠವಾಗುತ್ತಾರೆ. ನಾವು ಯಾವತ್ತೂ ಈ ದೇಶದ ಅನೇಕತೆಗೆ ಕಾರಣವಾಗಿರುವ ಸಂವಿಧಾನ ರಕ್ಷಣೆಗೆ ಕಟಿಬದ್ಧರಾಗಿದ್ದೇವೆ ಎಂದರು.

ಮಿನಿವಿಧಾನಸೌಧಕ್ಕೆ ಜಾಗ:

ಕಾರಟಗಿ ತಾಲೂಕು ಆಡಳಿತ ಕೇಂದ್ರ ನಿರ್ಮಾಣ ಸ್ಥಳ ಹುಡುಕಾಟ ನಡೆಸುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದೆ. ಅದರಂತೆ ತಹಸೀಲ್ದಾರ್ ಸರ್ಕಾರಿ ಭೂಮಿ ಗುರುತಿಸಿದ್ದಾರೆ. ಕನಕಗಿರಿಯಲ್ಲಿ ಈಗಾಗಲೇ ಸ್ಥಳ ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಮಿನಿ ವಿಧಾನಸೌಧ ನಿರ್ಮಾಣ ಮಾಡಲಿದ್ದೇವೆ. ಕಾರಟಗಿ ಆಸ್ಪತ್ರೆ ನಿರ್ಮಾಣ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿದೆ. ಇದರ ಜೊತೆಗೆ ಕಾರಟಗಿ ಹಾಗೂ ಕನಕಗಿರಿ, ಕಾರಟಗಿ-ಚಳ್ಳೂರು, ಮುಸ್ಟೂರು, ಸಿದ್ದಾಪುರ, ಚಳ್ಳೂರು ರಸ್ತೆ ನಿರ್ಮಾಣಕ್ಕೆ ಸಂಬಂಧ ₹೭೦-೮೦ ಕೋಟಿ ಮೊತ್ತದ ಟೆಂಡರ್ ಆಗಿವೆ. ಶೀಘ್ರದಲ್ಲಿ ಅವುಗಳಿಗೆಲ್ಲ ಭೂಮಿ ಪೂಜೆ ನೆರವೇರಿಸಲಾಗುವುದು. ರೈಸ್ ಟೆಕ್ನಾಲಜಿ ಪಾರ್ಕ್ ಸಂಬಂಧ ಈ ಹಿಂದಿನ ಬಿಜೆಪಿ ಸರ್ಕಾರ ಗಮನಹರಿಸಲಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮವಹಿಸುತ್ತೇನೆ. ತೋಟಗಾರಿಕೆ ಪಾರ್ಕ್ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಲಾಗವುದು ಎಂದರು.

Share this article