ರೈತನೆಂಬ ವಿಜ್ಞಾನಿ ಎಂದೂ ದಾರಿ ತಪ್ಪಿಸಲಾರ

KannadaprabhaNewsNetwork | Published : Sep 24, 2024 1:52 AM

ಸಾರಾಂಶ

ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಹೊಸದುರ್ಗ

ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಭಾನುವಾರ ಸರ್ವೋದಯ ಕೃಷಿ ಘಟಕ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಸಾಧಕ ರೈತರ ಸಮ್ಮಿಲನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅನೇಕರು ರಾಜಕೀಯವಾಗಿ ಮೇಲೆ ಹೋದಂತೆ ರೈತರ ಮಗ, ಒಕ್ಕಲಿಗನ ಮಗನೆಂದು ಹೇಳಿಕೊಳ್ಳುವರು. ಆದರೆ ಅವರ್ಯಾರು ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದನ್ನು ಇಂದು ಕಾಣುತ್ತಿದ್ದೇವೆ. ಸರ್ಕಾರ ರೈತರಿಗೆ ಬೇಕಾದ ವಿದ್ಯುತ್, ನೀರು, ಗೊಬ್ಬರದ ಸೌಲಭ್ಯಗಳನ್ನು ಒದಗಿಸುವುದರ ಕಡೆ ಗಮನಹರಿಸಬೇಕು. ಆಗ ರೈತನ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ತಿಳಿಸಿದರು.

ರೈತರು ಹೊಸ ಬೆಳಕನ್ನು ಕಾಣುವಂತಾಗಬೇಕು. ಈ ನಿಟ್ಟಿನಲ್ಲಿ ಈ ಬಾರಿ ನಡೆಯುವ ನಾಟಕೋತ್ಸವದಲ್ಲಿ ಕೃಷಿಗೆ ಹೆಚ್ಚು ಒತ್ತು ಕೊಡಬೇಕೆಂಬ ಚಿಂತನೆ ಇದೆ. ನಮ್ಮ ಸುತ್ತಮುತ್ತ ಅನೇಕ ರೈತ ಸಾಧಕರಿದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಾಡೋಜ ಗೊ.ರು ಚನ್ನಬಸಪ್ಪ ಮಾತನಾಡಿ, ಸೋಶಿಯಲಿಸಂ ಎನ್ನುವ ಸಂಘಟಿತ ಶಕ್ತಿಯಿಂದ ಕಮ್ಯುನಿಸಂ ಎನ್ನುವ ಸಿದ್ಧಾಂತ ಪ್ರಖ್ಯಾತಿಯಾಯಿತು. ಅದೇ ರೀತಿ ಎಲ್ಲ ರೈತರು ಸಂಘಟಿತ ರೈತರಾಗಬೇಕು. ಗ್ರಾಮೀಣರ ಬದುಕು ಬೆಡಗು ಬಿನ್ನಾಣವಲ್ಲ. ಅದು ಸಹಜ ಬದುಕು. ಸಣ್ಣ ಹಿಡುವಳಿದಾರರಿಗೆ ನೈಸರ್ಗಿಕ ಕೃಷಿ ತುಂಬ ಲಾಭಕಾರಿ. ಶಾಶ್ವತ ಮಣ್ಣಿನ ಸತ್ವವನ್ನು ಅಲಕ್ಷ್ಯತೆ ಮಾಡಿದ್ದೇವೆ. ಸಕಲಜೀವರಾಶಿಗೆ ಮಣ್ಣು ಮಹತ್ವ ಸ್ಥಾನ ಪಡೆದುಕೊಂಡಿದೆ. ಮಾನವನ ಬದುಕಿಗೆ ನೆಲ ಬಿಟ್ಟರೆ ಬೇರೆ ಆಶ್ರಯವಿಲ್ಲ ಎಂದು ತಿಳಿಸಿದರು.

ಕೃಷಿ ಲಾಭಕರವಲ್ಲ ಎನ್ನುವ ಧೋರಣೆ ಸರ್ಕಾರದ್ದಾಗಿದೆ. ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಸರ್ಕಾರ ಮಾಡಿಕೊಂಡಿರುವುದು ಕೃಷಿಕರಿಗೆ ಮಾಡಿದ ಅವಮಾನ. ಆಧುನಿಕ ಕೃಷಿ, ಕೃಷಿ ನೀತಿಯ ಬಗ್ಗೆ ಸರ್ಕಾರ ಪುನರ್ ಚಿಂತನೆ ಮಾಡಬೇಕು. ರೈತರು ಬೆಳೆದ ಬೆಲೆಗೆ ಸೂಕ್ತ ಬೆಲೆಯನ್ನು ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ರೈತರ ಬದುಕು ಸ್ವಾಭಿಮಾನದ ಬದುಕಾಗಬೇಕು. ರೈತರ ಭವಿಷ್ಯವನ್ನು ರೈತರೇ ರೂಪಿಸಿಕೊಳ್ಳಬೇಕು. ರೈತರಲ್ಲಿರುವ ಅರಿವಿನ ಕೊರತೆ ಮತ್ತು ಬದ್ಧತೆ ಮೂಡಿಸುವ ಕಾರ್ಯಕ್ರಮಗಳನ್ನು ತುರ್ತಾಗಿ ಹಮ್ಮಿಕೊಳ್ಳಬೇಕು. ಸಂಸ್ಕೃತಿ, ಸಂಸ್ಕಾರ, ಬದ್ಧತೆಯ ಕೆಲಸವನ್ನು ಮಾಡುವಂಥವರು ನಮ್ಮ ರೈತರೇ ಆಗಿದ್ದಾರೆ ಎಂದರು.

ಮಾಜಿ ಶಾಸಕ ಮಹಿಮಾ ಜೆ. ಪಾಟೀಲ್ ಮಾತನಾಡಿ, ಹಿಂದೆ ಹಾಗಿತ್ತು, ಹೀಗಿತ್ತು. ಈಗ ಎಲ್ಲವೂ ಕೆಟ್ಟೋಗಿದೆ ಎಂದು ಬಹಳ ಆಕ್ರೋಶವಾಗಿ ಮಾತನಾಡುತ್ತೇವೆ. ಆದರೆ ಮುಂದೆ ಏನಾಗಬೇಕೆಂದು ಮಾತನಾಡುವವರ ಸಂಖ್ಯೆ ತುಂಬಾ ವಿರಳ. ಹೊಸ ಪರಿವರ್ತನೆ ಪ್ರಾರಂಭವಾಗುವುದು ಕೆಲವೇ ಕೆಲವು ಜನಗಳಿಂದ. ಸಮೂಹದ ಮೂಲಕ ಹೋದಾಗ ಹುಮ್ಮಸ್ಸು ಹೆಚ್ಚುತ್ತೆ ಎಂದರು.

ನಮ್ಮ ಹಿರಿಯರ ಏನು ಬೆಳೆಯುತ್ತಿದ್ದರೋ ಅದನ್ನು ಊಟ ಮಾಡ್ತಾ ಇದ್ದರು. ಏನು ಊಟ ಮಾಡುತ್ತಿದ್ದರೋ ಅದನು ಬೆಳೆಯುತ್ತಿದ್ದರು. ಈಗ ಹಣದ ಭೂತದ ಹಿಂದೆ ಓಡಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸರ್ಕಾರದಿಂದ ಕೃಷಿ ಮೇಳಕ್ಕೆ ಲಕ್ಷಗಟ್ಟಲೆ ಹಣ ಖರ್ಚು ಮಾಡುವರು. ಯಾವ್ಯಾವುದಕ್ಕೆ ಖರ್ಚು ಮಾಡುತ್ತಾರೆ ಎನ್ನುವುದು ಅರಿಯದಾಗಿದೆ. ಯಾವುದೇ ಮೇಳ ಮಾಡಿದರೂ ಅದು ಸಾರ್ಥಕ ಮೇಳವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಾಧಕರಾದ ಚಂದ್ರಶೇಖರ್ ನಾರಾಯಣಪುರ, ಶಿವಪ್ರಸಾದ್, ಮಂಜುನಾಥ, ವಿಶ್ವೇಶ್ವರ ಸಜ್ಜನ್, ಹೊಯ್ಸಳ ಅಪ್ಪಾಜಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಡಾ. ಗಿರೀಶ್ ಮಾತನಾಡಿದರು. ಡಾ. ಸೋಮಶೇಖರ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನಾಗರಾಜ್ ಎಚ್ಎಸ್. ತಬಲಾ ಸಾಥಿ ಶರಣ್ ವಚನಗೀತೆ ಹಾಗೂ ರೈತ ಗೀತೆಗಳನ್ನು ಹಾಡಿದರು.

Share this article