ಪಂಚೆ ಧರಿಸಿ, ತಲೆಗೆ ಪೇಟ ಸುತ್ತಿಕೊಂಡು ಸಿನಿಮಾ ನೋಡಲು ಬಂದಿದ್ದ ರೈತ: ಮಾಲ್‌ ಪ್ರವೇಶ ನಿಷೇಧ!

KannadaprabhaNewsNetwork | Updated : Jul 18 2024, 07:43 AM IST

ಸಾರಾಂಶ

ಪಂಚೆ ಧರಿಸಿ, ತಲೆಗೆ ಪೇಟ ಸುತ್ತಿಕೊಂಡು ಸಿನಿಮಾ ನೋಡಲು ಬಂದಿದ್ದ ರೈತರೊಬ್ಬರನ್ನು ಮಾಲ್‌ ಒಳಗೆ ಬಿಡದೆ ದರ್ಪ ಮೆರೆದಿರುವ ಘಟನೆ ಮಂಗಳವಾರ ಮಾಗಡಿ ರಸ್ತೆಯ ಜಿ.ಟಿ.ವರ್ಲ್ಡ್‌ ಮಾಲ್‌ನಲ್ಲಿ ನಡೆದಿದೆ.

 ಬೆಂಗಳೂರು :  ಪಂಚೆ ಧರಿಸಿ, ತಲೆಗೆ ಪೇಟ ಸುತ್ತಿಕೊಂಡು ಸಿನಿಮಾ ನೋಡಲು ಬಂದಿದ್ದ ರೈತರೊಬ್ಬರನ್ನು ಒಳಗೆ ಬಿಡದೆ ದರ್ಪ ಮೆರೆದಿರುವ ಘಟನೆ ಮಂಗಳವಾರ ಮಾಗಡಿ ರಸ್ತೆಯ ಜಿ.ಟಿ.ವರ್ಲ್ಡ್‌ ಮಾಲ್‌ನಲ್ಲಿ ನಡೆದಿದೆ.

ಮಾಲ್‌ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಮಾಲ್‌ ಬಳಿ ಪ್ರತಿಭಟನೆ ನಡೆಸಿ ಮಾಲ್‌ ಸಿಬ್ಬಂದಿ ನಡವಳಿಕೆ ಬಗ್ಗೆ ಕಿಡಿಕಾರಿದ್ದಾರೆ. ಮಾಲ್‌ ಸಿಬ್ಬಂದಿ ರೈತನ ಕ್ಷಮೆಯಾಚಿಸಬೇಕು. ರೈತನನ್ನು ಅವಮಾನಿಸಿದ ಮಾಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ರೈತನ ಕ್ಷಮೆ ಕೇಳಿ, ಸನ್ಮಾನ:

ಇದರ ಬೆನ್ನಲ್ಲೇ ಮಾಲ್‌ ಸಿಬ್ಬಂದಿ ತಮ್ಮ ತಪ್ಪು ಅರಿತು ಬುಧವಾರ ರೈತ ಫಕೀರಪ್ಪ ಅವರ ಕ್ಷಮೆಯಾಚಿಸಿದ್ದಾರೆ. ಮಾಲ್‌ನ ಉಸ್ತುವಾರಿ ಸುರೇಶ್‌ ಅವರು ಖುದ್ದು ಕ್ಷಮೆಯಾಚಿಸಿ ಫಕೀರಪ್ಪ ಅವರನ್ನು ಮಾಲ್‌ಗೆ ಕರೆಸಿ ಬಳಿಕ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

ಏನಿದು ಘಟನೆ?ಹಾವೇರಿ ಮೂಲದ ನಾಗರಾಜ್‌ ಜು.16ರಂದು ತಮ್ಮ ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರನ್ನು ಮಾಗಡಿ ರಸ್ತೆಯ ಜಿ.ಟಿ.ಮಾಲ್‌ನ ಮಲ್ಟಿಫ್ಲೆಕ್ಸ್‌ನಲ್ಲಿ ಕಲ್ಕಿ ಸಿನಿಮಾ ತೋರಿಸಲು ಕರೆದುಕೊಂಡು ಬಂದಿದ್ದಾರೆ. ಈ ವೇಳೆ ನಾಗರಾಜ್‌ ಅವರ ತಂದೆ ಫಕೀರಪ್ಪ ಪಂಚೆ ಧರಿಸಿ, ತಲೆಗೆ ಪೇಟ ಕಟ್ಟಿದ್ದರಿಂದ ಮಾಲ್‌ ಭದ್ರತಾ ಸಿಬ್ಬಂದಿ ಫಕೀರಪ್ಪ ಅವರಿಗೆ ಮಾಲ್‌ ಪ್ರವೇಶಿಸಲು ನಿರಾಕರಿಸಿದ್ದಾರೆ.

ಈ ವೇಳೆ ನಾಗರಾಜ್‌ ತಂದೆಯನ್ನು ಒಳಗೆ ಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಭದ್ರತಾ ಸಿಬ್ಬಂದಿ ಮಾಲ್‌ ಪ್ರವೇಶಿಸಲು ಅವಕಾಶ ನಿರಾಕರಿಸಿದ್ದಾರೆ. ಪಂಚೆ ಧರಿಸಿ ಬರುವವರಿಗೆ ಮಾಲ್‌ ಒಳಗೆ ಬಿಡದಂತೆ ನಿಯಮ ಇದೆ. ಹೀಗಾಗಿ ಒಳಗೆ ಬಿಡುವುದಿಲ್ಲ ಎಂದು ದರ್ಪದ ಮಾತುಗಳನ್ನಾಡಿದ್ದಾರೆ. ಹೀಗೆ ಸುಮಾರು ಅರ್ಧ ತಾಸು ಫಕೀರಪ್ಪ ಅವರನ್ನು ಮಾಲ್‌ ಹೊರಗೆ ಕೂರಿಸಿ ಅವಮಾನ ಮಾಡಿದ್ದಾರೆ. ಮಾಲ್‌ ಸಿಬ್ಬಂದಿ ವರ್ತನೆಯಿಂದ ಬೇಸರಗೊಂಡ ನಾಗರಾಜ್‌, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಾಲ್ ಸಿಬ್ಬಂದಿಯ ದುರಂಹಕಾರದ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು

ಮಾಲ್‌ ವಿರುದ್ಧ ಪ್ರತಿಭಟನೆ: ಪಂಚೆಧಾರಿ ರೈತನಿಗೆ ಮಾಲ್‌ ಒಳಗೆ ಪ್ರವೇಶ ನೀಡದ ಜಿ.ಟಿ.ಮಾಲ್‌ ವಿರುದ್ಧ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಮಾಲ್‌ ಬಳಿ ಪ್ರತಿಭಟನೆ ನಡೆಸಿದರು. ಮಾಲ್‌ ಸಿಬ್ಬಂದಿ ವರ್ತನೆ ವಿರುದ್ಧ ವಿವಿಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ರೈತ ಮುಖಂಡ ಕೋಡಿಹೊಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕನ್ನಡ ಪರ ಹೋರಾಟಗಾರ ರೂಪೇಶ್‌ ರಾಜಣ್ಣ ನೇತೃತ್ವದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪಂಚೆ ಧರಿಸಿ ಮಾಲ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಮಾಲ್‌ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಮನುಷ್ಯರನ್ನು ಮನುಷ್ಯರಾಗಿ ನೋಡಬೇಕು: ಸಚಿವ ಕೃಷ್ಣ ಬೈರೇಗೌಡ

ಒಬ್ಬ ವ್ಯಕ್ತಿಯನ್ನು ಮುಖ ನೋಡಿ, ಬಟ್ಟೆ ನೋಡಿ ಅಳೆಯಬಾರದು. ಇದು ನಮ್ಮನ್ನು ಆಳಿದ ಬ್ರಿಟಿಷರ‌ ಮನಸ್ಥಿತಿ. ಜಿ.ಟಿ.ಮಾಲ್​ ಅಷ್ಟೇ ಅಲ್ಲ, ಬೇರೆ ಕಡೆಯೂ ಇಂತಹ ರೀತಿ ನಡೆದಿವೆ. ಮಾಲ್‌ ಸಿಬ್ಬಂದಿಗೆ ಅರಿವಿನ ಕೊರತೆ ಇದೆಯೋ ಅಥವಾ ದುರಹಂಕಾರದಿಂದ ಮಾಡುತ್ತಿದ್ದಾರೋ ಗೊತ್ತಿಲ್ಲ. ಜಿ.ಟಿ.ಮಾಲ್​ನವರು ಹಾಗೇ ನಡೆದುಕೊಂಡಿದ್ದು ತಪ್ಪು. ಇದು ಖಂಡನೀಯ. ಮನುಷ್ಯರನ್ನು ಮನುಷ್ಯರಾಗಿ ನೋಡಬೇಕು. ಯಾವುದೇ ವ್ಯಕ್ತಿಗೆ ಮುಖ ನೋಡಿ ಗೌರವ ಕೊಡುವುದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

 ಇಂದು ರೈತ ಸಂಘದಿಂದ ಪ್ರತಿಭಟನೆ:

ಪಂಚೆ ಹಾಕಿಕೊಂಡು ಬಂದಿದ್ದ ರೈತನಿಗೆ ಮಾಗಡಿ ರಸ್ತೆಯ ಜಿ.ಟಿ.ಮಾಲ್‌ ಒಳಗೆ ಪ್ರವೇಶ ನಿರಾಕರಿಸಿ ಅವಮಾನ ಮಾಡಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ(ರೈತ ಬಣ) ಖಂಡಿಸಿದೆ. ಈ ಘಟನೆಯನ್ನು ಖಂಡಿಸಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಜಿ.ಟಿ.ಮಾಲ್‌ ಬಳಿ ಪ್ರತಿಭಟನೆ ನಡೆಸುವುದಾಗಿ ಸಂಘದ ರಾಜ್ಯಾಧ್ಯಕ್ಷ ಇ.ಎನ್‌.ಕೃಷ್ಣೇಗೌಡ ತಿಳಿಸಿದ್ದಾರೆ. 

ಮಾಲ್‌ ಬಳಿ ವ್ಯಕ್ತಿಯ ರಂಪಾಟ:

ಪಂಚೆ ಧರಿಸಿ ಬಂದಿದ್ದ ರೈತನಿಗೆ ಮಾಲ್ ಒಳಗೆ ಪ್ರವೇಶ ನಿರಾಕರಿಸಿದ ಸುದ್ದಿ ತಿಳಿದು ಪಂಚೆಧಾರಿ ವ್ಯಕ್ತಿಯೊಬ್ಬರು ಬುಧವಾರ ಜಿ.ಟಿ.ಮಾಲ್‌ ಬಳಿ ಕೆಲ ಕಾಲ ರಂಪಾಟ ಮಾಡಿದರು. ಪಂಚೆ ಧರಿಸಿದ್ದವರನ್ನು ಏಕೆ ಒಳಗೆ ಬಿಡುವುದಿಲ್ಲ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ಈ ವೇಳೆ ಪೊಲೀಸರು ಆ ವ್ಯಕ್ತಿ ಮಾಲ್‌ ಪ್ರವೇಶಿಸದಂತೆ ಹಿಡಿದುಕೊಂಡರು. ಆದರೂ ಆ ವ್ಯಕ್ತಿ ರಂಪಾಟ ಮುಂದುವರೆಸಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು. ಆತ ಪಾನಮತ್ತನಾಗಿ ಮಾಲ್‌ ಬಳಿ ಬಂದಿದ್ದ ಎನ್ನಲಾಗಿದೆ.ಯಾವ ಮೆಲ್‌ನಲ್ಲಿ ಪಂಚೆ ಹಾಕಿದ್ದ ರೈತನಿಗೆ ಒಳಗೆ ಬಿಡಲಿಲ್ಲವೂ ಆ ರೈತನಿಗೆ ನ್ಯಾಯ ಕೊಡಿಸಲಾಗಿದೆ. ಮಾಲ್‌ ಸಿಬ್ಬಂದಿಯಿಂದಲೇ ಸನ್ಮಾನ ಮಾಡಿಸಲಾಗಿದೆ. ಮಾಲ್‌ನ ಆಡಳಿತ ಮಂಡಳಿ ರೈತನಿಗೆ ಕ್ಷಮೆ ಕೇಳಿದೆ. ಇನ್ನು ಮುಂದೆ ಯಾವುದೇ ಮಾಲ್‌ ಅಥವಾ ಎಲ್ಲಿಯೇ ಆಗಲಿ ಯಾರಿಗೂ ಅವಮಾನ ಮಾಡಬಾರದು. ರೈತರಿಗೆ ಜಯವಾಗಲಿ

- ರೂಪೇಶ್‌ ರಾಜಣ್ಣ, ಕನ್ನಡಪರ ಹೋರಾಟಗಾರ

ಜಿ.ಟಿ.ಮಾಲ್‌ನಲ್ಲಿ ಪಂಚ ಧರಿಸಿದ್ದ ರೈತನಿಗೆ ಪ್ರವೇಶ ನೀಡದಿರುವುದು ಇಡೀ ದೇಶದ ರೈತರಿಗೆ ಮಾಡಿದ ಅಪಮಾನ. ಇದು ಒಂದು ಮಾಲ್‌ನ ಕಥೆಯಲ್ಲ. ಹಲವು ಕಡೆ ರೈತರಿಗೆ ಅಪಮಾನ ನಡೆಯುತ್ತಿದೆ. ರೈತರನ್ನು ಮಾಲ್‌ ಒಳಗೆ ಬಿಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆಯೇ? ಮಾಲ್‌ನೊಳಗೆ ಇರುವವರು ರೈತರ ಮಕ್ಕಳೇ. ಇಂತಹ ಘಟನೆಗಳು ನಡೆಯಬಾರದು. ಈ ರೀತಿಯ ಮಾಲ್‌ಗಳಿಗೆ ಸರ್ಕಾರ ಎಚ್ಚರಿಕೆ ನೀಡಬೇಕು

ಕೋಡಿಹಳ್ಳಿ ಚಂದ್ರಶೇಖರ್‌, ರೈತ ಮುಖಂಡ

ಪಂಚೆ ಧರಿಸಿಕೊಂಡೇ ಏಳು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ರಾಜ್ಯದ ಆಡಳಿತ ಮಾಡುತ್ತಿದ್ದಾರೆ. ಇದರಿಂದ ಮಾಲ್‌ನವರು ಪಾಠ ಕಲಿಯಬೇಕು. ಆ ಮಾಲ್ ನಡೆಸುತ್ತಿರುವವರಿಗೆ ಬುದ್ಧಿ ಕಡಿಮೆ ಇರಬೇಕು. ಕಾರ್ಮಿಕ ಇಲಾಖೆ ಅಥವಾ ಪೊಲೀಸ್ ಇಲಾಖೆಗೆ ಈ ಬಗ್ಗೆ ಪತ್ರ ಬರೆದು ವಿವರಣೆ ಕೇಳುತ್ತೇವೆ

ಸಂತೋಷ್‌ ಲಾಡ್‌, ಕಾರ್ಮಿಕ ಸಚಿವ

ನಮ್ಮ ಮಾಲ್‌ಗೆ ಯಾವುದೇ ಡ್ರೆಸ್‌ ಕೋಡ್‌ ಇಲ್ಲ. ಈ ಸಂಬಂಧ ಯಾವುದೇ ನಿಯಮವೂ ಇಲ್ಲ. ಘಟನೆ ಸಂಬಂಧ ಎಲ್ಲರ ಕ್ಷಮೆ ಕೇಳುತ್ತೇನೆ. ಈಗಾಗಲೇ ಆ ಸೆಕ್ಯೂರಿಟಿ ಗಾರ್ಡ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಈ ಸಂಬಂಧ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ

ಸುರೇಶ್‌, ಜಿ.ಟಿ.ಮಾಲ್‌, ಮೇಲ್ವಿಚಾರಕರು

Share this article