ಬ್ಯಾಡಗಿ: ಯುದ್ಧ ಪರಂಪರೆಯಿಂದ ನೆಮ್ಮದಿ ಸಾಧ್ಯವಿಲ್ಲವೆಂಬುದನ್ನು ಅರಿತು ಶಸ್ತ್ರಗಳನ್ನು ತ್ಯಜಿಸಿದ ಅದೆಷ್ಟೋ ರಾಜ ಮಹಾರಾಜರು ಬಳಿಕ ದಾರ್ಶನಿಕರಾಗಿ ಬದುಕನ್ನು ಮುಂದುವರೆಸುವ ಮೂಲಕ ವಿಶ್ವವೇ ಜ್ಞಾಪಿಸಿಕೊಳ್ಳುವಂತಹ ಸಾಧನೆ ಮಾಡಿದ್ದು ಅಂತಹವರಲ್ಲಿ ದಾಸಶ್ರೇಷ್ಠ ಕನಕದಾಸರು ಮುಂಚೂಣಿಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶಿಡೇನೂರ ರಸ್ತೆಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಕನಕಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಜಪ್ರಭುತ್ವದಲ್ಲಿ ಮೆರೆದಿದ್ದ ಅಶೋಕ ಜೈನ ಧರ್ಮ ಸ್ಥಾಪಿಸಿದರೇ, ಬಸವೇಶ್ವರರು ಲಿಂಗಾಯತ ಧರ್ಮ, ಗೌತಮ ಬುದ್ಧ ಕನಕದಾಸರು ಇಂತಹವರ ಸಂಖ್ಯೆ ಬೇಕಾದಷ್ಟಿದೆ. ಅರಸನಾಗಿದ್ದ ಕನಕದಾಸರು ಯುದ್ಧ ಪರಂಪರೆಯಿಂದ ಸಮಾಜವನ್ನು ತಿದ್ದಲು ಸಾಧ್ಯವಿಲ್ಲ ಎಂಬುದನ್ನು ಅರಿತು, ಹಿಂಸೆ ದಾರಿಯಿಂದ ಅಹಿಂಸೆ ಹಾದಿಯನ್ನು ತುಳಿದರು. ಜಗತ್ತಿನಲ್ಲಿ ಮಾನವ ಧರ್ಮವೊಂದೇ ಸಾರ್ವಕಾಲಿಕ ಸತ್ಯ ಎಂಬುದನ್ನು ಅರಿತು ವೈಭವೋಪೇತ ಜೀವನಕ್ಕೆ ಕೊನೆ ಹಾಡಿ ತಾವು ಬದಲಾಗುವ ಮೂಲಕ ಸಮಾಜದಲ್ಲಿದ್ದ ಮೌಢ್ಯಗಳನ್ನು ತೊಡೆದು ಹಾಕುವುದರಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರು. ಹಾಲುಮತ ಸಮುದಾಯ ಹಾಲಿನಷ್ಟೇ ಪವಿತ್ರವಾಗಿರುವ ಸಮುದಾಯ, ಈ ಸಮುದಾಯದ ಮಕ್ಕಳು ಶಿಕ್ಷಣ ಕಲಿಯಬೇಕು. ಕನಕದಾಸರದು ಅದ್ಭುತವಾದ ಜ್ಞಾನವಂತರು ಎಷ್ಟೇ ಪರೀಕ್ಷೆಯಾದರೂ ಅದರಲ್ಲಿ ಗೆದ್ದು ಬಂದವರು ಕನಕದಾಸರು. ಅಂತಹ ಪರಂಪರೆಗೆ ನಾವೆಲ್ಲಾ ಸೇರಿದ್ದೇವೆ ಎನ್ನುವುದು ಹೆಮ್ಮೆ ವಿಚಾರ, ಶಿಗ್ಗಾವಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅದರಲ್ಲಿ ಕನಕದಾಸರ ಕೆಲಸ ಮಾಡಿದ್ದು ನನಗೆ ಪುಣ್ಯ. ನಾನು ಕುರಿಗಾರರಿಗೆ 265 ಕೋಟಿ ರು. ವೆಚ್ಚದಲ್ಲಿ ಅಮೃತ ಕುರಿ ಗಾಹಿ ಯೋಜನೆ ಮಾಡಿದ್ದೇನೆ ಅದು ಮುಂದುವರೆಯಬೇಕು. ಕುಲಕಸುಬು ಮುಂದುವರೆಯಬೇಕು, ಶಿಕ್ಷಣವನ್ನೂ ಪಡೆಯಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದರು. ವರ್ತಮಾನದಲ್ಲಿ ಅತ್ಯಂತ ಅವಶ್ಯ: ಶಾಸಕ ಬಸವರಾಜ ಶಿವಣ್ಣವನರ ಮಾತನಾಡಿ, ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ, ಮಾನವನಲ್ಲಿ ಮನುಷ್ಯತ್ವವೇ ಮೂಲ ಧರ್ಮ ಎಂದು ಪ್ರತಿಪಾದಿಸಿದ ಅವರು, ಸಮಾಜದಲ್ಲಿ ಸಮಾನತೆ ತರಲು ಹಾಗೂ ಜಾತಿ, ಮತ ಹಾಗೂ ಪಂಥಗಳನ್ನು ಹಾಗೂ ಮೌಢ್ಯಗಳನ್ನು ಮೆಟ್ಟಿ ನಿಂತಲ್ಲಿ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನ ಕನಕದಾಸರು ತಮ್ಮ ಸಾಹಿತ್ಯ ಮೂಲಕ ಚಾಟಿ ಬೀಸಿ ಬದಲಾವಣೆ ತರಲು ಶ್ರಮಿಸಿದರು. ಅವರ ಚಿಂತನೆಗಳು ತತ್ವಗಳು ವರ್ತಮಾನದಲ್ಲಿ ಅತ್ಯಂತ ಅತ್ಯವಶ್ಯವಾಗಿವೆ ಎಂದರು.ಸಾಮಾಜಿಕ ನ್ಯಾಯದ ಸಮೀಕರಣ: ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಭಕ್ತಶ್ರೇಷ್ಠ ಕನಕದಾಸರ ಸಾಮಾಜಿಕ ನ್ಯಾಯದ ಸಮೀಕರಣ ಸರ್ವಕಾಲಕ್ಕೂ ಅನ್ವಯವಾಗಲಿದೆ. ಅವರ ನುಡಿಗಳಲ್ಲಿ ಮಾನವೀಯ ಸಂದೇಶಗಳು ಸಮಾಜದ ಮೇಲೆ ಹೆಚ್ಚು ಬೆಳಕನ್ನು ಚೆಲ್ಲಿದ್ದು, ಇದರಿಂದ ದಾರ್ಶನಿಕರ ಸನ್ಮಾರ್ಗಗಳು ಪ್ರಸ್ತುತ ಸಮಾಜಕ್ಕೆ ಅವಶ್ಯವಿದೆ, ಇತ್ತಿಚೆಗೆ ಕೇವಲ ಅಧಿಕಾರದಲ್ಲಿದ್ದವರನ್ನು ನೆನೆಸಿಕೊಳ್ಳಲಾಗುತ್ತಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ದಾರ್ಶನಿಕರ ಮಾತುಗಳನ್ನು ಮರೆಯುತ್ತಿದ್ದಾರೆ, ಸಾಮಾಜಿಕ ನ್ಯಾಯದಡಿ ಶೋಷಿತರ ವರ್ಗದ ಜನರಿಗೆ ಅವರ ಸಂದೇಶಗಳು ಅವಶ್ಯವಿದೆ ಎಂದರು. ವೇದಿಕೆಯಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಚಿಕ್ಕಪ್ಪ ಹಾದೀಮನಿ ಉಪಾಧ್ಯಕ್ಷ ಗುಡ್ಡಪ್ಪ ಆಡಿನವರ ಮುಖಂಡರಾದ ಶಂಕ್ರಣ್ಣ ಮಾತನವರ, ದಾನಪ್ಪ ಚೂರಿ, ನಾಗರಾಜ ಆನ್ವೇರಿ, ಬಿ.ಎಂ.ಜಗಾಪೂರ, ಸೋಮಶೇಖರ ಭರಡಿ, ವಸಂತ ಮಾಸಣಗಿ, ಮಲ್ಲಿಕಾರ್ಜುನ ಕರಲಿಂಗಪ್ಪನವರ, ಖಾದರಸಾಬ್ ದೊಡ್ಡಮನಿ, ಗಿರಿಶ ಇಂಡಿಮಠ, ಡಿ.ಎಚ್. ಬುಡ್ಡನಗೌಡ್ರ ಉಪಸ್ಥಿತರಿದ್ದರು.