ಕನ್ನಡಪ್ರಭ ವಾರ್ತೆ ಮೈಸೂರು
ಶರನ್ನವರಾತ್ರಿಯ ಆರಂಭದ ದಿನವಾದ ಗುರುವಾರ ರಾಜವಂಶಸ್ಥರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಯದುವೀರ್ಅವರು ಕಂಕಣ ಧರಿಸಿ ಖಾಸಗಿ ದರ್ಬಾರ್ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು.
ಸಂಪ್ರದಾಯದಂತೆ ಮೊದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಎಣ್ಣೆಶಾಸ್ತ್ರ ನೆರವೇರಿಸಲಾಯಿತು. ಬೆಳಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಿಸಲಾಯಿತು. ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ಅವರಿಗೆ ಬೆಳಗ್ಗೆ 7.45ರ ಸುಮಾರಿನಲ್ಲಿ ಕಂಕಣ ಧಾರಣೆ ನೆರವೇರಿಸಲಾಯಿತು.ಖಾಸಗಿ ದರ್ಬಾರ್ ಆರಂಭದ ಹಿನ್ನೆಲೆಯಲ್ಲಿ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಆಸು ಆಗಮಿಸಿತು. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಿಸಿದ ಯದುವೀರ್ಅವರು 11.35 ರಿಂದ 12.05ರ ಒಳಗೆ ಅವರು ಸಿಂಹಾಸನಾರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ಆರಂಭಿಸಿದರು. ಇದಕ್ಕೂ ಮುನ್ನ ವೇದಘೋಷದ ನಡುವೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು.
ಬಳಿಕ ಸಾರ್ವಜನಿಕರಿಗೆ ಗೌರವ ಸಲ್ಲಿಸಿ, ಸಿಂಹಾಸನದ ಮೇಲೆಯೇ ಎದ್ದು ನಿಂತು ಕಾಯೋ ಶ್ರೀಗೌರಿ ಹಾಡಿಗೆ ಗೌರವ ಸೂಚಿಸಿದರು.
ದರ್ಬಾರ್ ಹಾಲ್ಗೆ ಪ್ರವೇಶಿಸಿದ ಯದುವೀರ್ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸೇವಕರು ಸವಾಲ್ಬೀಸುತ್ತ ಸ್ವಾಗತಿಸಿದರೆ, ಹೊಗಳು ಭಟ್ಟರು ಜಯಘೋಷ ಕೂಗಿದರು.