ಹರಪನಹಳ್ಳಿ: ಬಸ್ ವ್ಯವಸ್ಥೆ ಕಲ್ಪಿಸಿ, ಮದ್ಯ ಮಾರಾಟ ಬಂದ್ ಮಾಡಿಸಿ, ಜಾನುವಾರುಗಳಿಗೆ ತಕ್ಕಂತೆ ಗೋಮಾಳ ಕಾಯ್ದಿರಿಸಿ, ನೀರಿನ ಸಮಸ್ಯೆ ನೀಗಿಸಿ, ಸರ್ವೇ ಮಾಡಿಸಿ, ಜಮೀನು ಹದ್ದುಬಸ್ತ್ ಮಾಡಿಸಿ, ರಸ್ತೆ ಅಭಿವೃದ್ಧಿಗೊಳಿಸಿ, ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ, ಪಟ್ಟಾ ನೀಡಿ...
ಚಿಕ್ಕಬ್ಬಳ್ಳಿ, ಅರಸೀಕೆರೆ, ಬೂದಿಹಾಳ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಿಸಿ ಎಂದು ಬೂದಿಹಾಳ ಗ್ರಾಮದ ಡಿ.ಕೆ. ಮರಿಯಪ್ಪ ಅರ್ಜಿ ಸಲ್ಲಿಸಿದರೆ, ಯರಬಾಳು, ಮತ್ತೂರುಗಳಿಗೆ ಬಸ್ ವ್ಯವಸ್ಥೆ ಮಾಡಿ ಎಂದು ಆ ಭಾಗದ ಜನರು ಕೋರಿದರು.
ಚಿಗಟೇರಿ ಗ್ರಾಮದಲ್ಲಿ ಕೋರ್ಟ್‌ನಿಂದ ತಡೆಯಾಜ್ಞೆ ಇರುವ ಮನೆಗಳನ್ನು ಹೊರತುಪಡಿಸಿ ಉಳಿದಂತೆ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹಾಗೂ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಸಂಬಂಧಿಸಿದ ಎಂಜಿನಿಯರುಗಳಿಗೆ ಸೂಚಿಸಿದರು.ಚಿಕ್ಕಮೇಗಳಗೇರಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳು ಕುಡಿದು ಹಾಳಾಗುತ್ತಿದ್ದಾರೆ. ಮದ್ಯ ಬಂದ್ ಮಾಡಿಸಿ ಎಂದು ಮಹಿಳೆಯರ ಗುಂಪು ಮನವಿ ಮಾಡಿತು.
ಅಕ್ರಮ ಮದ್ಯ ಬಂದ್ ಮಾಡಿಸಿ ಎಂದು ಅಬಕಾರಿ ಇಲಾಖೆಯವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.ತಾಲೂಕಿನಲ್ಲಿ ಇರುವ ಜಾನುವಾರುಗಳಿಗೆ ತಕ್ಕಂತೆ ಗೋಮಾಳ ಕಾಯ್ದರಿಸಿ ಎಂಬ ಅರ್ಜಿ ಸಲ್ಲಿಕೆಯಾಯಿತು.
ವಿಚಿತ್ರ ಬೇಡಿಕೆ: ಬ್ರಿಟಿಷರ ಕಾಲದಲ್ಲಿ ಕಟ್ಟಿರುವ ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿ ಕಟ್ಟಡವನ್ನು ಹೋಟೆಲ್ ನಡೆಸಲು ಬಾಡಿಗೆ ಕೊಡಿ ಎಂಬ ಬೇಡಿಕೆಯನ್ನು ಕೋಡಿಹಳ್ಳಿ ಶೇಖಪ್ಪ ಎಂಬವರು ಸಲ್ಲಿಸಿದರು. ಅರ್ಜಿ ನೋಡಿ ಶಾಸಕರು, ಜಿಲ್ಲಾಧಿಕಾರಿ ದಂಗಾಗಿ ಹೋದರು. ಹಾಗೆ ಕೊಡಲು ಬರುವುದಿಲ್ಲ, ಹೋಗಿ ಎಂದು ಹೇಳಿ ಕಳುಹಿಸಿದರು.ದ್ಯಾಪನಾಯಕನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ನೀರಿನ ಬವಣೆ ತಪ್ಪಿಸಿ ಎಂದು ಗ್ರಾಮಸ್ಥ ಕೋರಿದಾಗ, ಜಿಲ್ಲಾಧಿಕಾರಿ ದಿವಾಕರ ಅವರು ಈ ಗ್ರಾಮ ಸೇರಿದಂತೆ ಯಾವ ಯಾವ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಇಲ್ಲವೊ ಅಂತಹ ಗ್ರಾಮಗಳಿಗೆ ಇಒಗೆ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದರು.
ಆಶ್ರಯ ಮನೆ ನೀಡಲು ಯಾರಾದರೂ ಹಣ ಕೇಳಿದರೆ ಪೊಲೀಸರಿಗೆ ದೂರು ಕೊಡಿ ಎಂದು ಜಿಲ್ಲಾಧಿಕಾರಿ ಹಾಗೂ ಶಾಸಕರು ಫಲಾನುಭವಿಗಳಿಗೆ ಸೂಚಿಸಿದರು. ಸಾಸ್ವಿಹಳ್ಳಿ ಬಳಿ ಇರುವ ಪುಣ್ಯನಗರಕ್ಕೆ ರಸ್ತೆ ಅಭಿವೃದ್ಧಿಗೆ ಜನರು ಮನವಿ ಸಲ್ಲಿಸಿದರು.ಸರ್ವೇ ಇಲಾಖೆ ಮೇಲೆ ಸಾಕಷ್ಟು ದೂರುಗಳಿವೆ, ಸರಿಯಾಗಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಸರ್ವೇ ಇಲಾಖೆಯವರಿಗೆ ಸೂಚಿಸಿದರು.
ಪೌರ ಕಾರ್ಮಿಕರು ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿದರು. ಕೆ. ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 400 ಮಕ್ಕಳಿದ್ದಾರೆ. ಶೌಚಾಲಯ ನಿರ್ಮಿಸಿ ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಾಗ, ಈಗಾಗಲೇ ಅರ್ಧ ಕಾಮಗಾರಿ ಪೂರ್ಣಗೊಂಡು ಗ್ರಾಪಂ ಸದಸ್ಯರ ಭಿನ್ನಾಭಿಪ್ರಾಯದಿಂದ ಸ್ಥಗಿತಗೊಂಡಿದೆ ಎಂದು ಗ್ರಾಪಂ ಅಧಿಕಾರಿಗಳು ತಿಳಿಸಿದರು.ಒಟ್ಟು 242 ಅರ್ಜಿಗಳು ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಸಲ್ಪಟ್ಟವು.
ಶಾಸಕಿ ಎಂ.ಪಿ. ಲತಾ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ, ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ಡಿವೈಎಸ್ಪಿ ವೆಂಕಟಪ್ಪ ನಾಯಕ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಮತ್ತೂರು ಬಸವರಾಜ, ಜಿಲ್ಲಾಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.