ಅಡಕೆ ವ್ಯಾಪಾರಿಯ ₹1 ಕೋಟಿ ದೋಚಿದ್ದು ಗೆಳೆಯ ಆ್ಯಂಡ್‌ ಗ್ಯಾಂಗ್!

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಇತ್ತೀಚೆಗೆ ನಡೆದಿದ್ದ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಅಡಕೆ ವ್ಯಾಪಾರಿ ಎಚ್‌.ಎಸ್‌.ಉಮೇಶ್ ಅವರಿಗೆ ಸೇರಿದ ₹1 ಕೋಟಿ ಕಳ್ಳತನ ಪ್ರಕರಣ ಸಂಬಂಧ ಅವರ ಕಾರು ಚಾಲಕ ಹಾಗೂ ಆತನ ಸ್ನೇಹಿತೆ ಸೇರಿದಂತೆ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದ ಪಿ.ಬಿ.ಸ್ವಾಮಿ, ಆತನ ಸ್ನೇಹಿತೆ ಬೆಂಗಳೂರಿನ ಮಹದೇವಪುರ ಸಮೀಪದ ಲಕ್ಷ್ಮೀಸಾಗರ ಬಡಾವಣೆಯ ಎನ್‌.ಎಂ.ಅನುಪಮಾ, ಚಿತ್ರದುರ್ಗ ಜಿಲ್ಲೆಯ ಕೆಳಗೋಟೆಯ ಎನ್‌.ಪವನ್ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಹೇಶ್ವರಿನಗರದ ಎಸ್.ಆರ್.ಕಾರ್ತಿಕ್ ಬಂಧಿತರು. ಆರೋಪಿಗಳಿಂದ ₹90.19 ಲಕ್ಷ ನಗದು, ₹6.49 ಲಕ್ಷ ಮೌಲ್ಯದ 2 ಐ–ಫೋನ್, 2 ವಾಚ್‌ಗಳು ಹಾಗೂ 61 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ನಡೆದಿದ್ದ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಅಡಕೆ ವ್ಯಾಪಾರಿ ಎಚ್‌.ಎಸ್‌.ಉಮೇಶ್ ಅವರಿಗೆ ಸೇರಿದ ₹1 ಕೋಟಿ ಕಳ್ಳತನ ಪ್ರಕರಣ ಸಂಬಂಧ ಅವರ ಕಾರು ಚಾಲಕ ಹಾಗೂ ಆತನ ಸ್ನೇಹಿತೆ ಸೇರಿದಂತೆ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದ ಪಿ.ಬಿ.ಸ್ವಾಮಿ, ಆತನ ಸ್ನೇಹಿತೆ ಬೆಂಗಳೂರಿನ ಮಹದೇವಪುರ ಸಮೀಪದ ಲಕ್ಷ್ಮೀಸಾಗರ ಬಡಾವಣೆಯ ಎನ್‌.ಎಂ.ಅನುಪಮಾ, ಚಿತ್ರದುರ್ಗ ಜಿಲ್ಲೆಯ ಕೆಳಗೋಟೆಯ ಎನ್‌.ಪವನ್ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಹೇಶ್ವರಿನಗರದ ಎಸ್.ಆರ್.ಕಾರ್ತಿಕ್ ಬಂಧಿತರು. ಆರೋಪಿಗಳಿಂದ ₹90.19 ಲಕ್ಷ ನಗದು, ₹6.49 ಲಕ್ಷ ಮೌಲ್ಯದ 2 ಐ–ಫೋನ್, 2 ವಾಚ್‌ಗಳು ಹಾಗೂ 61 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲ ದಿನಗಳ ಹಿಂದೆ ಕೆಲಸದ ನಿಮಿತ್ತ ನಗರಕ್ಕೆ ಉಮೇಶ್ ಬಂದಿದ್ದಾಗ ಅವರ ಕಾರಿನಲ್ಲಿ ₹1 ಕೋಟಿ ನಗದು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಮಾರುತಿ ನೇತೃತ್ವದ ತಂಡವು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಉಮೇಶ್‌ ಅವರ ಕಾರು ಚಾಲಕನೇ ಖದೀಮ ಎಂಬುದು ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳ್ಳತನ ಸಂಚಿನ ಮಾಸ್ಟರ್‌ ಮೈಂಡ್‌ ಅನುಪಮಾ:

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದಲ್ಲಿ ‘ಶ್ರೀ ಮರಳುಸಿದ್ದೇಶ್ವರ ಟ್ರೇಡರ್ಸ್‌’ ಹೆಸರಿನ ಅಡಕೆ ಮಾರಾಟ ಮಳಿಗೆಯನ್ನು ಉಮೇಶ್ ಹೊಂದಿದ್ದಾರೆ. ಅ.7 ರಂದು ಶನಿವಾರ ತುಮಕೂರು ಹಾಗೂ ಶಿರಾದಲ್ಲಿ ರೈತರಿಂದ ಅಡಕೆ ಖರೀದಿ ಸಲುವಾಗಿ ಸ್ನೇಹಿತ ಸ್ವಾಮಿ ಕಾರಿನಲ್ಲಿ ಉಮೇಶ್ ಬಂದಿದ್ದರು. ಕಾರಿನಲ್ಲಿ ₹1 ಕೋಟಿಯಿತ್ತು. ಇನ್ನು ಹಲವು ವರ್ಷಗಳಿಂದ ಸ್ವಾಮಿ ಹಾಗೂ ಉಮೇಶ್‌ ಆತ್ಮೀಯ ಒಡನಾಡಿಗಳಾಗಿದ್ದರು. ಹೀಗಾಗಿ ಗೆಳೆಯನ ಮೇಲೆ ಉಮೇಶ್‌ಗೆ ವಿಶ್ವಾಸವಿತ್ತು. ಆದರೆ ಕೊನೆಗೆ ಹಣದಾಸೆಗೆ ಅವರಿಗೆ ಸ್ನೇಹಿತನೇ ದ್ರೋಹ ಬಗೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಂದು ತಮ್ಮ ನಿರೀಕ್ಷೆ ತಕ್ಕಂತೆ ಶಿರಾ ಹಾಗೂ ತುಮಕೂರಿನಲ್ಲಿ ಅಡಕೆ ಸಿಗದೆ ಉಮೇಶ್ ನಿರಾಸೆಯಾಗಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತ ಚಂದ್ರಾಲೇಔಟ್‌ನ ಪಿಜಿಯಲ್ಲಿದ್ದ ಮಗಳ ಯೋಗಕ್ಷೇಮ ವಿಚಾರಿಸಿಕೊಂಡು ಬರಲು ನಗರಕ್ಕೆ ಉಮೇಶ್ ಬಂದಿದ್ದರು. ಆಗ ತನ್ನ ಗೆಳತಿ ಅನುಪಮಾಳಿಗೆ ಕರೆ ಮಾಡಿದ ಸ್ವಾಮಿ, ತಾನು ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದ. ಆ ವೇಳೆ ಕುಶಲೋಪರಿ ಬಳಿಕ ಬೆಂಗಳೂರಿಗೆ ಯಾಕೆ ಬಂದಿದ್ದು ಎಂದು ಗೆಳತಿಗೆ ಕೇಳಿದಾಗ ತಾನು ಸ್ನೇಹಿತನ ಜತೆ ಬಂದಿರುವುದಾಗಿಯೂ. ಕಾರಿನಲ್ಲಿ ಅಡಿಕೆ ಖರೀದಿಯ ₹1 ಕೋಟಿಯಿದೆ ಎಂದೂ ಸ್ವಾಮಿ ಹೇಳಿದ್ದ. ಕಾರಿನಲ್ಲಿ ದೊಡ್ಡ ಮೊತ್ತದ ಹಣವಿದೆ ಎಂದು ತಿಳಿದ ಕೂಡಲೇ ಅನುಪಮಾ, ಆ ಹಣ ದೋಚಲು ಸಂಚು ರೂಪಿಸಿದ್ದಾಳೆ. ಈ ಕೃತ್ಯಕ್ಕೆ ತನ್ನ ಮತ್ತಿಬ್ಬರು ಸ್ನೇಹಿತರಾದ ಪವನ್ ಹಾಗೂ ಕಾರ್ತಿಕ್‌ನನ್ನು ಬಳಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ದಾಬಸ್‌ಪೇಟೆಯಲ್ಲಿ ಹಣ ಕಳ್ಳತನ

ಗಾಂಧಿನಗರದ ಹೋಟೆಲ್‌ನಲ್ಲಿ ಊಟ ಮುಗಿಸಿಕೊಂಡು ಅಲ್ಲಿಂದ ಚಂದ್ರಾಲೇಔಟ್‌ಗೆ ತೆರಳಿ ಮಗಳನ್ನು ಭೇಟಿಯಾಗಿ ಚಿತ್ರದುರ್ಗಕ್ಕೆ ಉಮೇಶ್ ಮರಳುತ್ತಿದ್ದರು. ಪೂರ್ವನಿಯೋಜಿತ ಸಂಚಿನಂತೆ ಸ್ವಾಮಿ ಕಳುಹಿಸಿದ ಲೋಕೇಷನ್‌ಗೆ ಬೈಕ್‌ನಲ್ಲಿ ತೆರಳಿದ ಪವನ್ ಹಾಗೂ ಕಾರ್ತಿಕ್, ಬಳಿಕ ಉಮೇಶ್ ಅವರ ಕಾರನ್ನು ಹಿಂಬಾಲಿಸಿದರು. ಚಂದ್ರಾಲೇಔಟ್‌ ಬಳಿ ಜನರ ಓಡಾಟ ವಿರಳವಿರುವ ಪ್ರದೇಶದಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಫಲರಾದ ಆರೋಪಿಗಳು, ನಗರದಿಂದ ಚಿತ್ರದುರ್ಗ ಕಡೆಗೆ ಹೊರಟ ಕಾರನ್ನು ಬೆಂಬಿಡದೆ ಹಿಂಬಾಲಿಸಿದರು. ತುಮಕೂರು ರಸ್ತೆಗೆ ಬಂದು ಅಲ್ಲಿಂದ ಚಿತ್ರದುರ್ಗಕ್ಕೆ ಕಾರು ಚಲಾಯಿಸಿಕೊಂಡೇ ಸ್ವಾಮಿ, ತನ್ನ ಸಹವರ್ತಿಗಳಿಗೆ ಮಾಹಿತಿ ನೀಡುತ್ತಿದ್ದ. ಅಂತಿಮವಾಗಿ ದಾಬಸ್‌ಪೇಟೆ ಬಳಿ ಚಹಾ ಕುಡಿಯುವ ನೆಪದಲ್ಲಿ ಸ್ವಾಮಿ ಕಾರು ನಿಲ್ಲಿಸಿದ. ಆಗ ಕಾರಿನಿಂದಿಳಿದು ಹೋಟೆಲ್‌ಗೆ ಉಮೇಶ್ ಜತೆ ಸ್ವಾಮಿಯೂ ಹೋಗುತ್ತಿದ್ದ. ಆ ವೇಳೆ ಕಾರಿನ ನಕಲಿ ಕೀ ಬಳಸಿ ಹಣದ ಬ್ಯಾಗ್ ಅನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು.

ಚಹಾ ಸೇವನೆ ಬಳಿಕ ಸೀದಾ ಮನೆಗೆ ಉಮೇಶ್ ಹೋಗಿದ್ದಾರೆ. ಅಲ್ಲಿ ಕಾರಿನ ಡಿಕ್ಕಿ ತೆಗೆದಾಗ ಹಣದ ಬ್ಯಾಗ್ ಕಾಣದೆ ಅವರು ಕಂಗಲಾಗಿದ್ದಾರೆ. ಈ ಬಗ್ಗೆ ಗೆಳೆಯನನ್ನು ವಿಚಾರಿಸಿದಾಗ ತನಗೇನು ಗೊತ್ತಿಲ್ಲವೆಂದು ಸ್ವಾಮಿ ಹೇಳಿದ್ದಾನೆ. ಈ ಮಾತು ನಂಬದ ಉಮೇಶ್‌, ಹಣದ ಕಳ್ಳತನದಲ್ಲಿ ಸ್ವಾಮಿ ಪಾತ್ರವಿದೆ ಎಂದು ಶಂಕಿಸಿ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದರು. ಕೊನೆಗೆ ಶಂಕೆ ಮೇರೆಗೆ ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.--------------------

ವರ್ಷದ ಹೊಂಚು ಹಾಕಿದ್ದ ಖದೀಮರು

ಅಡಿಕೆ ಖರೀದಿಗೆ ಸ್ವಾಮಿಯನ್ನು ಜೊತೆಗೆ ಉಮೇಶ್ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಉಮೇಶ್‌ ಹಣಕಾಸಿನ ಬಗ್ಗೆ ತಿಳಿದಿದ್ದ ಸ್ವಾಮಿ, ಈ ವಿಚಾರವನ್ನು ತನ್ನ ಗೆಳತಿ ಅನುಪಮಾ ಹಾಗೂ ಪವನ್ ಜತೆ ಹಂಚಿಕೊಂಡಿದ್ದ. ಈ ವಿಷಯ ತಿಳಿದ ಬಳಿಕ ಆರೋಪಿಗಳು, ಹಣ ದೋಚಲು ಒಂದು ವರ್ಷದಿಂದ ಹೊಂಚು ಹಾಕಿದ್ದರು. ಕೊನೆಗೂ ತಮ್ಮ ಸಂಚು ಕಾರ್ಯರೂಪಕ್ಕಿಳಿಸಿ ಸಂಪಾದಿಸಿದ ಹಣವನ್ನು ಎಲ್ಲರು ಹಂಚಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಬ್ಯುಟಿ ಪಾರ್ಲರ್‌ ಒಡತಿ ಅನುಪಮಾ

ಮಹದೇವಪುರದಲ್ಲಿ ಬ್ಯುಟಿ ಪಾರ್ಲರ್ ನಡೆಸುತ್ತಿದ್ದ ಅನುಪಮಾ, ಚಿತ್ರದುರ್ಗ ಜಿಲ್ಲೆ ಹೊಳಕ್ಕೆರೆ ತಾಲೂಕಿನವಳು. ಮೊದಲಿನಿಂದಲೂ ತನ್ನೂರಿನ ಪವನ್ ಹಾಗೂ ಸ್ವಾಮಿ ಜತೆ ಆಕೆಗೆ ‘ಆಪ್ತ’ ಗೆಳೆತನವಿತ್ತು. ಇನ್ನು ಪವನ್ ಮೂಲಕ ಕಾರ್ತಿಕ್ ಗೆ ಆಕೆಯ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Share this article