ಕಾಲೇಜು ಹಂತ ವಿದ್ಯಾರ್ಥಿ ಜೀವನದಲ್ಲಿ ಸುವರ್ಣ ಯುಗ: ವಿಧಾನ ಪರಿಷತ್ ಸದಸ್ಯ ಎಸ್.ರವಿ

KannadaprabhaNewsNetwork |  
Published : Jun 25, 2024, 12:39 AM IST

ಸಾರಾಂಶ

ಕಾರ್ಯಕ್ರಮದಲ್ಲಿ ಜನಪದ ಗೀತೆ, ಭಾವಗೀತೆ, ಚಲನಚಿತ್ರ ಗೀತೆ, ಚರ್ಚಾ ಸ್ಪರ್ಧೆ , ಆಶುಭಾಷಣ ಸ್ಪರ್ಧೆ ಸೇರಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕನಕಪುರ

ವಿದ್ಯಾರ್ಥಿಗಳಿಗೆ ಕಾಲೇಜು ಹಂತ ಸುವರ್ಣ ಯುಗವಿದ್ದಂತೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಈಗಲೇ ಬುನಾದಿ ಹಾಕಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೆಡ್ ಕ್ರಾಸ್ ಹಾಗೂ ರೇಂಜರ್ಸ್‌ ಮತ್ತು ರೋವರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವು ಓದುವಾಗ ಅವಕಾಶಗಳು ಬಹಳ ಕಡಿಮೆ ಇದ್ದವು, ಈಗ ಸಾಕಷ್ಟು ಅವಕಾಶಗಳಿವೆ. ಎಲ್ಲರೂ ಡಾಕ್ಟರ್, ಇಂಜಿನಿಯರ್ ಗಳೇ ಆಗಬೇಕೆಂದೇನಿಲ್ಲ, ನಿಮ್ಮ ಅವಕಾಶಗಳಿಗೆ ನೀವು ಅಂಕುಶ ಹಾಕಿಕೊಳ್ಳಬೇಡಿ. ನೂರಾರು ಅವಕಾಶಗಳಿವೆ, ಸಾಧಿಸಬೇಕು ಎಂಬ ಛಲ ನಿಮ್ಮಲ್ಲಿರಬೇಕು. ಪ್ರಯತ್ನ ಪಡದೇ ಯಾವುದೂ ಸುಲಭವಾಗಿ ಸಿಗುವುದಿಲ್ಲ, ಸಮಾಜದಲ್ಲಿರುವ ಸಂಸ್ಕಾರವಂತರು. ಜವಾಬ್ದಾರಿಯುತ ನಾಗರಿಕರು ನಿಮ್ಮನ್ನು ಗೌರವದಿಂದ ಕಾಣುವ ನಾಗರಿಕರಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ನಿಮ್ಮ ಜೀವನದಲ್ಲಿ ಕಾಲೇಜು ಹಂತವು ಸುವರ್ಣಯುಗವಿದ್ದಂತೆ, ಸುಮ್ಮನೆ ಕಾಲಹರಣ ಮಾಡಿದರೆ ಏನೂ ಪ್ರಯೋಜನ ಆಗುವುದಿಲ್ಲ, ಏನಾದರೂ ಸಾಧನೆ ಮಾಡಬೇಕು, ಮುಂದಿನ ನಿಮ್ಮ ಭವಿಷ್ಯಕ್ಕೆ ಇಂದೇ ಅಡಿಪಾಯ ಹಾಕಬೇಕು ಎಂದು ಹೇಳಿದರು.

ದೇಶದಲ್ಲಿ ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಇವೆಲ್ಲ ಹಿಂದುಳಿದ ರಾಜ್ಯಗಳು. ಇಲ್ಲಿನ ಜನರಿಗೆ ಶಿಕ್ಷಣ ಪಡೆಯಲು ಸರಿಯಾದ ಮೂಲಸೌಕರ್ಯಗಳೇ ಇಲ್ಲ, ಅವಕಾಶಗಳಿಲ್ಲ. ಆದರೂ ಆ ರಾಜ್ಯದ ಬಹಳಷ್ಟು ಜನರು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲು ಕಷ್ಟವಾದರೆ ಹೋರಾಟ ಆರಂಭವಾಗುತ್ತದೆ. ಹಾಗಾಗಿ ನಮಗೆ ಹಪಹಪಿ ಇರಬೇಕು, ಹೋರಾಟದಿಂದಲೇ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಮಾಜಿ ಸಂಸದ ಡಿ.ಕೆ. ಸುರೇಶ್ ರವರ ಪರಿಶ್ರಮದಿಂದ ಕಾಲೇಜಿನ ಅಭಿವೃದ್ಧಿ ಸಾಧ್ಯವಾಗಿದೆ. ಕಾಲೇಜಿಗೆ ಸ್ಥಳ ಗುರುತಿಸಿ ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕೆ ಡಿ.ಕೆ. ಶಿವಕುಮಾರ್ ನೆರವಿನೊಂದಿಗೆ ಡಿ.ಕೆ. ಸುರೇಶ್ ಹೆಚ್ಚಿನ ಶ್ರಮ ಪಟ್ಟಿದ್ದಾರೆ. ಇದಲ್ಲದೆ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ದುರದೃಷ್ಟವಶಾತ್ ಅಭಿವೃದ್ಧಿ ಹರಿಕಾರರಿಗೆ ಜನರ ಆಶೀರ್ವಾದ ಸಿಗಲಿಲ್ಲ, ಕಾಲೇಜಿನ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡುವುದಾಗಿ ಎಸ್. ರವಿ ತಿಳಿಸಿದರು.

ಆರೋಗ್ಯ ಇಲಾಖೆ ಹೆಚ್ಚುವರಿ ನಿವೃತ್ತ ನಿರ್ದೇಶಕ ರಘುನಂದನ್ ಮಾತನಾಡಿ, ಮನುಷ್ಯನಿಗೆ ಆರೋಗ್ಯವಿದ್ದರೆ ಆತ ಸಿರಿವಂತನಿದ್ದಂತೆ, ಆರೋಗ್ಯ ಬೆಲೆಕಟ್ಟಲಾಗದ ಸಂಪತ್ತು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ, ಯುವ ಸಮೂಹ ದೇಶದ ಸಂಪತ್ತು, ಆದರೆ ಪ್ರಸ್ತುತ ಸಮಾಜದಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜನಪದ ಗೀತೆ, ಭಾವಗೀತೆ, ಚಲನಚಿತ್ರ ಗೀತೆ, ಚರ್ಚಾ ಸ್ಪರ್ಧೆ , ಆಶುಭಾಷಣ ಸ್ಪರ್ಧೆ ಸೇರಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರು ಬಿ. ಶ್ಯಾಮಲ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಭಿವೃದ್ಧಿ ಸಮಿತಿ ನಾಗೇಶ್, ಐಕ್ಯೂಎಸಿ ಸಂಚಾಲಕಿ ಅಕ್ಷತಾ ಪರಂಜ್ಯೋತಿ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ವಿಶ್ವರಾದ್ಯ , ಎನ್‌ಎಸ್‌ಎಸ್ ಸಂಚಾಲಕ ಮುಜೀಬ್ ಖಾನ್, ರೆಡ್ ಕ್ರಾಸ್ ಸಮಿತಿ ಸಂಚಾಲಕಿ ಸಾವಿತ್ರಿ, ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟಾಚಲಪತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!