ಗುರು ಪೂರ್ಣಿಮೆ ಅಂಗವಾಗಿ ರೋಟರಿ ಸಂಸ್ಥೆಯಿಂದ ನಿವೃತ್ತ ಕನ್ನಡ ಪಂಡಿತರಿಗೆ ಗುರು ವಂದನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗುರು ಶಿಷ್ಯರ ಪರಂಪರೆ, ಸಂಬಂಧದ ಬಗ್ಗೆ ಮಹಾ ಭಾರತದಲ್ಲಿ ಚೆನ್ನಾಗಿ ವರ್ಣನೆ ಮಾಡಲಾಗಿದೆ ಎಂದು ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣಭಟ್ ತಿಳಿಸಿದರು.
ಭಾನುವಾರ ಅಗ್ರಹಾರದಲ್ಲಿ ರೋಟರಿ ಸಂಸ್ಥೆಯಿಂಂದ ಗುರು ಪೂರ್ಣಿಮೆ ಅಂಗವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಂದೆ, ತಾಯಿ ಮಕ್ಕಳಿಗೆ ಜನ್ಮ ನೀಡಿದರೆ ಗುರುವಾದವರು ಜ್ಞಾನ ಬೋಧಿಸುತ್ತಾರೆ. ವ್ಯಾಸರು ಹುಟ್ಟಿದ ದಿನದಂದು ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ದ್ರೋಣಾಚಾರ್ಯರಂತಹ ಗುರು, ಏಕಲವ್ಯನಂತಹ ಶಿಷ್ಯರಿದ್ದರು ಎಮದ ಅವರು, ಶಿಷ್ಯರಿಗೆ ಒಳಿತಾಗಲಿ ಎಂದು ಗುರುವಾದವರು ಹಾರೈಸುತ್ತಾರೆ ಎಂದರು.ನನ್ನ ಶಿಕ್ಷಣ ವೃತ್ತಿಯಲ್ಲಿ ನನಗೆ ಆತ್ಮ ತೃಪ್ತಿ ಸಿಕ್ಕಿದೆ. ರೋಟರಿ ಸಂಸ್ಥೆಯಲ್ಲಿರುವ ಸದಸ್ಯರು ನನ್ನ ಶಿಷ್ಯರಾಗಿದ್ದು ನಮ್ಮ ಮನೆಗೆ ಬಂದು ಗುರು ಪೂರ್ಣಿಮೆ ದಿನ ನನ್ನನ್ನು ಗೌರವಿರುವುದು ಸಂತಸ ತಂದಿದೆ ಎಂದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ವಿದ್ಯಾನಂದಕುಮಾರ್ ಮಾತನಾಡಿ, ವಿ.ಎಸ್.ಕೃಷ್ಣಭಟ್ಟರು 1956 ರಿಂದ 1963 ರ ವರೆಗೆ ಶೃಂಗೇರಿ ಮಠದಲ್ಲಿ ತರ್ಕಶಾಸ್ತ್ರ, ಜ್ಯೋತಿಷ್ಯ, ಋಗ್ವೇದ,1963 ರಿಂದ 1968ರ ವರೆಗೆ ಬೆಂಗಳೂರಿನ ಶ್ರೀ ಶಂಕರ ಮಠ ದಲ್ಲಿ ಅದ್ವೈತ ವೇದಾಂತ ವಿದ್ವಾನ್ ಪದವಿ ಪಡೆದಿದ್ದರು. 1967ರಿಂದ ಹಳಕನ್ನಡ, ನಡುಗನ್ನಡ, ಹೊಸ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ವ್ಯಾಕರಣ ಶಾಸ್ತ್ರ ಅಭ್ಯಾಸ ಮಾಡಿದ್ದು ಕರ್ನಾಟಕ ಸರ್ಕಾರದಿಂದ ಕನ್ನಡ ಪಂಡಿತ ಪದವಿ ಸಿಕ್ಕಿದೆ. ಅಲ್ಲದೆ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 1997 ರಲ್ಲಿ ನಿವೃತ್ತಿಯಾಗಿದ್ದು ಎಲ್ಲಾ ಧಾರ್ಮಿಕ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸು ತ್ತಿದ್ದು ಹಲವಾರು ಶಿಷ್ಯಂದಿರಿಗೆ ಮಂತ್ರೋಪದೇಶ ಮಾಡಿದ್ದಾರೆ ಎಂದರು.ವಕೀಲ ಜಿ.ದಿವಾಕರ್ ಮಾತನಾಡಿ, ಕೃಷ್ಣ ಭಟ್ಟರು ನಮಗೆಲ್ಲಾ ಪಾಠ ಮಾಡಿದವರು. ಸಾತ್ವಿಕ ವ್ಯಕ್ತಿತ್ವದ ಅವರು ಅಜಾತ ಶತ್ರುವಾಗಿದ್ದಾರೆ. ಶಿಸ್ತು ಬದ್ಧಜೀವನ ನಡೆಸಿದವರು. ಗುರು ಪೂರ್ಣಿಮೆ ದಿನ ಅವರಿಗೆ ಗುರು ವಂದನೆ ಮಾಡುವ ಭಾಗ್ಯ ನಮಗೆ ಸಿಕ್ಕಿದೆ ಎಂದರು.
ಕಟ್ಟಿನಮನೆ ಶಾಲೆ ಶಿಕ್ಷಕ ಬಿ.ಟಿ.ವಿಜಯಕುಮಾರ್ ಮಾತನಾಡಿ, ವಿ.ಎಸ್.ಕೃಷ್ಣಭಟ್ಟರು ಅನೇಕ ಕನ್ನಡ ಶಬ್ದದ ಕಗ್ಗಂಟನ್ನು ಬಿಡಿಸುತ್ತಿದ್ದರು. ನಮಗೆ ಗೊತ್ತಾಗದ ಕನ್ನಡದ ಸಮಸ್ಯೆಯನ್ನು ಕನ್ನಡ ಪಂಡಿತ ಕೃಷ್ಣಭಟ್ಟರಲ್ಲಿ ಬಂದು ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದರು.ನಿವೃತ್ತ ಶಿಕ್ಷಕ ಟಿ.ಎಂ. ಶಿವಕುಮಾರ್ ಮಾತನಾಡಿ, ಸಮರ್ಥ ಗುರು, ಸಮರ್ಥ ಶಿಷ್ಯರಿದ್ದರೆ ಅವರ ಮಿಲನ ಸಾರ್ಥಕ ವಾಗುತ್ತದೆ. ವೇದ ವ್ಯಾಸರು 18 ಉಪನಿಷತ್ , ಬ್ರಹ್ಮಸೂತ್ರ ಬರೆದಿದ್ದಾರೆ. ಜನ ಸಾಮಾನ್ಯರಿಗೆ ಅರ್ಥ ವಾಗುವಂತೆ ಮಹಾ ಭಾರತ ರಚನೆ ಮಾಡಿದ್ದಾರೆ. ವಿದೇಶದಲ್ಲಿ ಈಗಲೂ ಭಗವದ್ಗೀತೆ ಅಧ್ಯಯನ ಮಾಡುತ್ತಾರೆ. ಭಾರತೀಯರಿಗೆ ಇಲ್ಲಿನ ವೇದ, ಉಪನಿಷತ್, ಋಷಿಮುನಿಗಳ ಬಗ್ಗೆ ಕೇವಲ ನಕಾರಾತ್ಮಕ ಚಿಂತನೆ ಮಾಡುತ್ತಾರೆ. ನಮ್ಮ ದೇಶದ ಹಿಂದೂ ಧರ್ಮದ ಸಾಹಿತ್ಯಗಳ ವಿಶೇಷತೆಯನ್ನು ಕಡೆಗಣಿಸಿದ್ದೇವೆ ಎಂದು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯಿಂದ ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣಭಟ್ಟರಿಗೆ ಪಾದ ಪೂಜೆ ನೆರವೇರಿಸಿ ಆರತಿ ಎತ್ತಿ, ಸನ್ಮಾನಿಸಲಾಯಿತು.ಸಭೆಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಕೆ.ಕಿರಣ್, ನಿಯೋಜಿತ ಅಧ್ಯಕ್ಷ ಜಿ.ಆರ್. ದಿವಾಕರ್, ರೋಟರಿ ಸದಸ್ಯರಾದ ಕೆ.ಎಸ್.ರಾಜಕುಮಾರ್, ಎಂ.ಆರ್.ಸುಂದರೇಶ್,ಎಸ್.ಎಸ್.ಜಗದೀಶ್, ಅಭಿಷೇಕ್, ಕುಮಾರಶೆಟ್ಟಿ, ಗಿರೀಶ್ ಶೇಟ್, ರಜಿತ್ ,ತಾರೇಶ್, ಶಶಾಂಕ್, ಪವಿತ್ರತಾರೇಶ್ ಮತ್ತಿತರರು ಇದ್ದರು.