ಹಾನಗಲ್ಲ: ಪರಿಸರದ ನಾಶದಿಂದ ಮನುಕುಲವೇ ಆತಂಕದತ್ತ ದಾಪುಗಾಲು ಹಾಕುತ್ತಿದೆ ಎಂಬ ಎಚ್ಚರಿಕೆ ಮೂಡಿಸುವ ಜತೆಗೆ, ಭವಿಷ್ಯದ ಪೀಳಿಗೆಗೆ ಒಳ್ಳೆಯ ಪರಿಸರ ಬಿಟ್ಟು ಹೋಗುವತ್ತ ಎಲ್ಲರೂ ಚಿತ್ತ ಹರಿಸಬೇಕು ಎಂದು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಾದ ರಾಜೇಶ್ವರಿ ಪುರಾಣಿಕ ಹೇಳಿದರು.
ಸಿವಿಲ್ ನ್ಯಾಯಾಧೀಶ ಎಸ್.ಕೆ. ಜನಾರ್ದನ ಮಾತನಾಡಿ, ಮಾನವನ ಉಳಿವಿಗೆ ಪರಿಸರವೇ ನಿಜವಾದ ಆಸ್ತಿ. ದಿನಾಚರಣೆಗಳು ಕಾರ್ಯಕ್ರಮಕ್ಕೆ ಸೀಮಿತವಾಗದಿರಲಿ. ಸರ್ಕಾರದ ಇಲಾಖೆಗಳೊಂದಿಗೆ ಸಾಮಾಜಿಕ ಸಂಘಟನೆಗಳು ಜತೆಯಾಗಿ ಪರಿಸರ ಪ್ರಜ್ಞೆ ಮೂಡಿಸುವ, ಪರಿಸರ ಉಳಿಸುವ ಕಾರ್ಯದಲ್ಲಿ ಶಕ್ತಿ ತುಂಬಬೇಕಾಗಿದೆ. ನಮಗೆಲ್ಲ ಉಳ್ಳೆಯ ಶಿಕ್ಷಣ ಸಿಕ್ಕಿದೆ. ಇದರ ಫಲ ಭವಿಷ್ಯಕ್ಕೆ ಒಳ್ಳೆಯದನ್ನು ಮಾಡುವ ಪರಿಸರ ರಕ್ಷಣೆಗೂ ಆಗಬೇಕು. ಹಸಿರೇ ನಮ್ಮ ಉಸಿರು. ಮಳೆ ಬೆಳೆ ಚನ್ನಾಗಿದ್ದರೆ ಮಾತ್ರ ಮನುಷ್ಯನ ಬದುಕು ಎಂದರು.
ಅರಣ್ಯಾಧಿಕಾರಿ ಶಿವಾನಂದ ತೊಂಡೂರ ಮಾತನಾಡಿ, ಅರಣ್ಯ ಇಲಾಖೆಯ ಸಂಕಲ್ಪಕ್ಕೆ ಸಾಮಾಜಿಕ ಬೆಂಬಲ ಬೇಕು. ನೆಟ್ಟ ಗಿಡಗಳ ಉಳಿಸಲು ಕೇವಲ ಅರಣ್ಯ ಇಲಾಖೆ ಮಾತ್ರ ಹೆಣಗಾಡಿದರೆ ಸಾಲದು. ಈ ನಾಡಿನ ಪ್ರತಿಯೊಬ್ಬರೂ ಇದು ತಮ್ಮ ಜವಾಬ್ದಾರಿ ಎಂದು ಕಾಳಜಿವಹಿಸಬೇಕು ಎಂದರು.ಸಿಪಿಐ ಆರ್.ವೀರೇಶ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಪಿ. ಭೋಸಲೆ, ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ವಕೀಲ ಎಸ್.ಕೆ. ದೊಡ್ಡಮನಿ, ಮುಖ್ಯ ಶಿಕ್ಷಕ ಆರ್.ಬಿ. ರೆಡ್ಡಿ, ಪ್ರಾಚಾರ್ಯ ಶಿವಕುಮಾರ ಯತ್ತಿನಹಳ್ಳಿ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಶಿವಾನಂದ ಕ್ಯಾಲಕೊಂಡ ಹಾಗೂ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಪಾಲ್ಗೊಂಡಿದ್ದರು.