ಧಾರ್ಮಿಕ ಸಮಾರಂಭ
ಅರಸೀಕೆರೆ: ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಮನುಷ್ಯ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಪಟೂರಿನ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಹೇಳಿದರು.ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಮಹದೇಶ್ವರ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ‘ಬಾಲ್ಯದಿಂದಲೂ ನನಗೆ ಶ್ರೀಮಠ ಹಾಗೂ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳ ಒಡನಾಟವಿದೆ. ಶ್ರೀ ಪೀಠದ ಜಗದ್ಗುರು ಆದೇಶದಂತೆ ಬದುಕು ನಡೆಸಿದ್ದರಿಂದ ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧ್ಯಕ್ಷರಾಗಲು ಸಾಧ್ಯವಾಗಿದೆ. ಇಂತಹ ದಿವ್ಯ ಶಕ್ತಿ ಹೊಂದಿರುವ ಕೋಡಿಮಠ ಬಡವರು, ದೀನ, ದಲಿತರ ಆಶಾಕಿರಣವಾಗಿದ್ದು ವ್ಯಕ್ತಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.
ಕೋಳಗುಂದ ಕೇದಿಗೆಮಠದ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ಆಶಯದಂತೆ ಹಸಿದವರಿಗೆ ಅನ್ನ, ಅರಿವು, ಬಡ ಮಕ್ಕಳಿಗೆ ಶಿಕ್ಷಣ ನೀಡುವ ದಿಸೆಯಲ್ಲಿ ಶ್ರೀ ಮಠ ದಶಕಗಳ ಕಾಲದಿಂದಲೂ ನಿರಂತರವಾಗಿ ತೊಡಗಿಸಿಕೊಂಡಿದೆ. ಮಠಕ್ಕೆ ಭಕ್ತರೇ ಆಸ್ತಿ, ಭಕ್ತರಿಗೆ ಮಠವೇ ಆಸ್ತಿ ಎನ್ನುವಂತಿದೆ ಎಂದು ಹೇಳಿದರು. ವೈದ್ಯ ಡಾ.ಶಿವಕುಮಾರ್ ಶ್ರೀಮಠದೊಂದಿಗಿನ ಬಾಂಧವ್ಯ ಕುರಿತು ಮಾತನಾಡಿದರು.ವಾಣಿಜ್ಯೋದ್ಯಮಿ ಸುನಂದಮ್ಮನವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಮೂರು ದಿನಗಳಿಂದ ನಡೆಯುತ್ತಿದ್ದ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಸಂಜೆ ಸಂಪನ್ನಗೊಂಡಿತು.
ಶ್ರೀಮಠದ ಪೀಠಾಧ್ಯಕ್ಷ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಶ್ರೀ ಕ್ಷೇತ್ರದ ಉತ್ತರಾಧಿಕಾರಿ ಚೇತನ್ ಮರಿದೇವರು, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದೇಶ್ ನಾಗೇಂದ್ರ, ವೈದ್ಯ ದಂಪತಿ ಬಿಂದು ಡಾ.ಶಿವಕುಮಾರ್, ಶಿಕ್ಷಕ ಲೋಕೇಶ್, ಮಹದೇವಪ್ಪ ಇದ್ದರು. ಅರಸೀಕೆರೆಯಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭ ಉದ್ಘಾಟಿಸಲಾಯಿತು. ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಚೇತನ್ ಮರಿದೇವರು, ಇತರರಿದ್ದಾರೆ.