ಗಂಗಾ ನದಿಯಂತೆ ಕೃಷ್ಣೆಗೂ ಭವ್ಯ ಆರತಿ

KannadaprabhaNewsNetwork |  
Published : Sep 05, 2026, 04:00 AM IST
ಜಮಖಂಡಿ ತಾಲುಕು ಹಿಪ್ಪರಗಿಯ  ಉತ್ತರವಾಹಿನಿ ಕೃಷ್ಣೇಯ ತಿರದಲ್ಲಿ ಆಯೋಜಿಸಿದ್ದ ಕೃಷ್ಣಾ ಆರತಿ ಕಾರ್ಯಕ್ರಮ ಉದ್ದೇಶಿಸಿ ಉದ್ಯಮಿ   ಸಂಗಮೇಶ ನಿರಾಣಿ ಮಾತನಾಡಿದರು, ಮಾಜಿ ಸಚಿವ ಮುರುಗೇಶ ನಿರಾಣಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮಠಾಧೀಶರು ಇದ್ದರು, ಜಮಖಂಡಿ ತಾಲುಕು ಹಿಪ್ಪರಗಿಯ  ಉತ್ತರವಾಹಿನಿ ಕೃಷ್ಣೇಯ ತಿರದಲ್ಲಿ ಆಯೋಜಿಸಿದ್ದ ಕೃಷ್ಣಾ ಆರತಿ ಕಾರ್ಯಕ್ರಮ ಉದ್ದೇಶಿಸಿ ಉದ್ಯಮಿ   ಸಂಗಮೇಶ ನಿರಾಣಿ ಮಾತನಾಡಿದರು, ಮಾಜಿ ಸಚಿವ ಮುರುಗೇಶ ನಿರಾಣಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮಠಾಧೀಶರು ಇದ್ದರು,  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಸಂರಕ್ಷಣೆ ಹಾಗೂ ನದಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಕೆಲಸವಾಗಬೇಕು ಎಂದು ಉದ್ಯಮಿ ಸಂಗಮೇಶ ನಿರಾಣಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಸಂರಕ್ಷಣೆ ಹಾಗೂ ನದಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಕೆಲಸವಾಗಬೇಕು ಎಂದು ಉದ್ಯಮಿ ಸಂಗಮೇಶ ನಿರಾಣಿ ಕರೆ ನೀಡಿದರು. ಪರಿಸರ, ನದಿಗಳ ರಕ್ಷಣೆ ಹಾಗೂ ಜಲ ಮೂಲಗಳ ಸಂರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿರುವ ಸಾಧಕರನ್ನು ಸನ್ಮಾನಿ ಗೌರವಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಅವರ 61ನೇ ಜನ್ಮದಿನ ಹಾಗೂ ಕೃಷ್ಣಾರತಿ, ಕೃಷ್ಣಾ ಪುಣ್ಯ ಸ್ನಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಿನಿಂದ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪರಿಸರ ಪ್ರಮುಖ ಗಣಪತಿ ಹೆಗಡೆ ಅವರನ್ನು ಸ್ವಾಗತಿಸಿ, ಪರಿಸರ ಸಂರಕ್ಷಣೆಗಾಗಿ ಅವರು ಮಾಡುತ್ತಿರುವ ಕಾರ್ಯವನ್ನು ಸ್ಮರಿಸಿದರು. ಬತ್ತಿಹೋಗಿರುವ ನದಿಗಳ ಸ್ವಚ್ಛತೆ ಮತ್ತು ಜಲಮೂಲಗಳ ಪುನರುಜ್ಜೀವನಕ್ಕಾಗಿ ಅವರು ಸಲ್ಲಿಸಿರುವ ಸೇವೆ ಮಾದರಿಯಾಗಿದೆ ಎಂದರು.

ಕಳೆದ ವರ್ಷದ ಕಾರ್ಯಕ್ರಮದಲ್ಲಿ ನೂರಾರು ನಾಗಸಾಧುಗಳನ್ನು ಹಿಪ್ಪರಗಿ ಗ್ರಾಮಕ್ಕೆ ಕರೆತಂದು ಕ್ಷೇತ್ರವನ್ನು ಪುನೀತಗೊಳಿಸಿದ ದೇವಗಿರಿ ಬಾಬಾ ಅವರು ಈ ಬಾರಿಯೂ ಕಾರ್ಯಕ್ರಮಕ್ಕೆ ಆಗಮಿಸಿರುವುದನ್ನು ಸ್ಮರಿಸಿದರು. ಜಮಖಂಡಿ ತಾಲೂಕಿನ ವಿವಿಧ ಶಾಲಾ ಆವರಣಗಳಲ್ಲಿ ಗಿಡ ನೆಡುವ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದ ಅವರು, ಗ್ರಾಮಸ್ಥರು, ಯುವಕರು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿ ನೂರಾರು ಗಿಡಗಳನ್ನು ನೆಟ್ಟು ಅವುಗಳ ಪೋಷಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕು ಎಂದರು.

ಸಾವಯವ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ರೈತರನ್ನು ಹಾಗೂ ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಅಭಿನಂದಿಸಿದರು. ರೈತರು ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಕೃಷಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಬೇಕು ಎಂದು ಕರೆ ನೀಡಿದರು.

ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಒತ್ತಾಯ:

ಅಪರ್‌ ಕೃಷ್ಣಾ ಪ್ರೊಜೆಕ್ಟ್ (ಕೃಷ್ಣಾ ಮೇಲ್ದಂಡೆ ಯೋಜನೆ) ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಉತ್ತರ ಕರ್ನಾಟಕದ ರೈತರಿಗೆ ಕೃಷ್ಣಾ ನದಿ ನೀರಿನ ಹಕ್ಕು ದೊರೆಯಬೇಕು. ಸುಮಾರು 130 ಟಿಎಂಸಿ ನೀರು ಹಾಗೂ 14 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದ ನಿರ್ಮಿಸಿದ ಯೋಜನೆ ವರ್ಷಗಳಿಂದ ವಿಳಂಬವಾಗುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ನೀರಿನ ಲಭ್ಯತೆ ಇದ್ದರೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಇಚ್ಛಾಶಕ್ತಿ ಕಾಣಿಸುತ್ತಿಲ್ಲ ಎಂದು ಸಂಗಮೇಶ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೃಷ್ಣಾ ನದಿ ದಂಡೆಯಲ್ಲಿರುವ ಗ್ರಾಮಗಳಿಗೆ ಅಗತ್ಯವಾದ ಲಿಫ್ಟ್ ಇರಿಗೇಶನ್ ಯೋಜನೆಗಳನ್ನು ಜಾರಿಗೊಳಿಸಿ ರೈತರ ಜಮೀನುಗಳಿಗೆ ನೀರು ತಲುಪಿಸಬೇಕು. ನೀರಾವರಿ ಯೋಜನೆಗಳ ಮೂಲಕ ಉತ್ತರ ಕರ್ನಾಟಕದ ರೈತರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿದ ಅವರು, ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳಿಸಿ ರೈತರಿಗೆ ಅವರ ಹಕ್ಕಿನ ನೀರು ಒದಗಿಸದಿದ್ದರೆ, ಮುಂದಿನ ದಿನಗಳಲ್ಲಿ ಹಿಪ್ಪರಗಿಯಿಂದ ಕೂಡಲಸಂಗಮ ಹಾಗೂ ಇತರೆ ಪ್ರದೇಶಗಳವರೆಗೆ ಪಾದಯಾತ್ರೆ ನಡೆಸಿ ರೈತರ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಕೃಷ್ಣಾ ನದಿಯ ಸಂರಕ್ಷಣೆ, ಪರಿಸರ ರಕ್ಷಣೆ ಮತ್ತು ರೈತರ ನೀರಾವರಿ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಂಗಮೇಶ ನಿರಾಣಿ ಕರೆ ನೀಡಿದರು.

ಐದು ಸಂಕಲ್ಪಗಳೊಂದಿಗೆ ನದಿ ಸಂರಕ್ಷಣೆಗೆ ಕರೆ

ಕೃಷ್ಣಾ ನದಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದರೆ, ದೇಶದ ಇತರ ಪ್ರಮುಖ ನದಿಗಳಿಗೆ ನೀಡುವಷ್ಟು ಧಾರ್ಮಿಕ ಮತ್ತು ಸಾಂಸ್ಕೃತಿಕ ಗೌರವವನ್ನು ಕೃಷ್ಣೆಗೆ ನೀಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಅವರು ವಿಷಾದಿಸಿದರು. ಗಂಗಾ ಆರತಿ, ಕುಂಭಮೇಳ ಸೇರಿ ಉತ್ತರ ಭಾರತದಲ್ಲಿ ನದಿಗಳಿಗೆ ವಿಶೇಷ ಗೌರವ ನೀಡಲಾಗುತ್ತಿದೆ. ದಕ್ಷಿಣದಲ್ಲಿ ಕಾವೇರಿ ಮಾತೆಯನ್ನು ಭಕ್ತಿಭಾವದಿಂದ ಪೂಜಿಸಲಾಗುತ್ತಿದೆ. ಅದೇ ರೀತಿ ನಮ್ಮ ಕೃಷ್ಣಾ ನದಿಯನ್ನೂ ನಾವು ಗೌರವಿಸಿ, ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು. ನದಿ ಸಂರಕ್ಷಣೆಗಾಗಿ ಐದು ಸಂಕಲ್ಪಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದ ಅವರು, ಕೃಷ್ಣಾ ನದಿಯನ್ನು ಸ್ವಚ್ಛ ವಾಗಿಡುವುದು, ಜಲಮೂಲಗಳನ್ನು ಸಂರಕ್ಷಿಸುವುದು, ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು, ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು, ಗೋಸಂತತಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವುದು ಎಂಬ ಸಂಕಲ್ಪಗಳೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋ ಹತ್ಯೆಗೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ
ಕೈಗಾರಿಕೆ ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸಿ