;Resize=(412,232))
ಈಶ್ವರ ಶೆಟ್ಟರ
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿನ ಭೀಕರ ಬರವನ್ನು ಖುದ್ದಾಗಿ ಪರಿಶೀಲಿಸಲು ಬಂದಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಪ್ರಸಕ್ತ ಸಾಲಿನಲ್ಲಿ ರೈತರ ಬದುಕಿನ್ನಲಾದ ತೊಂದರೆಗಳನ್ನು ಹಾಗೂ ಮಳೆಯನ್ನೆ ನಂಬಿ ಫಸಲನ್ನು ಕಾಣದ ಅವಲಂಬಿತ ರೈತರ ಕಷ್ಟವನ್ನು ಕಣ್ಣಾರೆ ನೋಡಿ ಸಹಜವಾಗಿ ಆತಂಕಕ್ಕೊಳಗಾದರು.
ಕೃಷ್ಣ ಘಟಪ್ರಭ ನದಿಗಳಂತಹ ಪ್ರಮುಖ ನೀರಿನ ಆಸರೆಯಿದ್ದರು ಸಹ ಮಳೆ ಆಶ್ರಿತ ಪ್ರದೇಶಗಳಲ್ಲಿ ಕಾಣುವ ಭೀಕರ ಬರವನ್ನು ಸಿಎಂ ಡಿ.ಕೆ.ಶಿವಕುಮಾರ ಅವರು ಖುದ್ದು ಪರಿಶೀಲನೆ ನಡೆಸುವ ಮೂಲಕ ರೈತರ ಕಷ್ಟವನ್ನು ಕಣ್ಣಾರೆ ನೋಡುವ ಮೂಲಕ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಹುನಗುಂದ, ಇಳಕಲ್, ಬಾಗಲಕೋಟೆ, ಗುಳೇದಗುಡ್ಡ ತಾಲೂಕುಗಳಲ್ಲಿ ರೈತರು ಬೆಳೆದ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಈರುಳ್ಳಿ, ಮೆಣಸಿನಕಾಯಿ ಮತ್ತು ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿ ಬರ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರೈತನ ಕಷ್ಟವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
ಲಕ್ಷಾಂತರ ಹಣ ವ್ಯಯಿಸಿ ಭೂಮಿಯನ್ನೆ ನಂಬಿಕೊಂಡು ಪ್ರಸಕ್ತ ಮುಂಗಾರಿನಲ್ಲಿ ರೈತ ತನ್ನ ಬೆಳೆಯನ್ನು ಬೆಳೆಯಲು ಪಟ್ಟ ಕಷ್ಟ ಒಂದೆಡೆಯಾದರೆ ಆರಂಭಿಕ ಮಳೆ ಅವಲಂಭಿಸಿ ಹಾಕಿದ ಫಸಲು ಮಳೆಯಿಲ್ಲದೆ ಹಾಳಾದಾಗ ಜುಲೈನಲ್ಲಿ ಮತ್ತೆ ಸಂಕಷ್ಟದಲ್ಲಿದ್ದ ರೈತ ಸಾಲ ಮಾಡಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಯನ್ನು ಹಾಕಿ ಫಸಲು ನಿರೀಕ್ಷೆಯಲ್ಲಿ ಸದ್ಯ ಇದ್ದಾನೆ. ಆದರೆ, ಮಳೆಯಿಲ್ಲದೆ ಈ ಫಸಲು ಸಹ ಒಣಗಿ ಹೋಗುತ್ತಿರುವುದನ್ನು ರೈತ ಮಹಿಳೆ ಮುಖ್ಯಮಂತ್ರಿಗಳ ಮುಂದೆ ದು:ಖಿತರಾಗಿ ಹೇಳುತ್ತಿರುವ ದೃಶ್ಯ ಸಹಜವಾಗಿ ಮನ ಕಲಕುವಂತಿತ್ತು.
ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ಅಂದಾನಪ್ಪ ಕೋಟಿ ಅವರ ಜಮೀನಿನಲ್ಲಿ ಹಾಕಿರುವ ತೊಗರಿಬೆಳೆಯು ಸದ್ಯ ಉತ್ತಮವಾಗಿ ಕಂಡರೂ ಸಹ ಮಳೆ ಬಾರದೆ ಹೋದರೆ ಆಗುವ ಆರ್ಥಿಕ ನಷ್ಟದ ಕುರಿತು ಇರುವ ಆತಂಕವನ್ನು ಮುಖ್ಯಮಂತ್ರಿಗಳ ಮುಂದೆ ವಿವರಿಸಿದ್ದು ಸಹ ರೈತನ ಸಮಸ್ಯೆಗಳ ಗಂಭಿರತೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿದರು.
ಕೆಲವೆಡೆ ಹಸಿರು ಇದ್ದರೂ ಬೆಳೆಯಿಲ್ಲ, ಕೆಲವು ಕಡೆ ಬೆಳೆ ಒಣಗಿವೆ, ನಿಗದಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ, ಕೆಲವರು ಈ ಬಾರಿಯ ಪರಿಸ್ಥಿತಿ ಕಂಡು ಹೊಲದಲ್ಲಿ ಬೀಜವನ್ನೇ ಹಾಕಿಲ್ಲ. ಇನ್ನೂ ಕೆಲವರು ಉಳುಮೆ ಮಾಡಲು ಹೋಗಿ ಹಾನಿ ಅನುಭವಿಸಿದ್ದಾರೆ ಇದು ಸಹ ಮುಖ್ಯಮಂತ್ರಿಗಳು ಗಮನಿಸಿದರು.
ಒಟ್ಟಾರೆ ಜಿಲ್ಲೆಯಲ್ಲಿ ರೈತ ಸಮೂಹ ಎದುರಿಸುತ್ತಿರುವ ಬರದಿಂದಾದ ಆರ್ಥಿಕ ಸಮಸ್ಯೆಯನ್ನು ಖುದ್ದಾಗಿ ಕಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜಿಲ್ಲೆಯಲ್ಲಿ ತೀವ್ರ ತೊಂದರೆ ಅನುಭವಿಸುವ ತಾಲೂಕುಗಳ ಬರ ಘೋಷಣೆ ಜತೆಗೆ ರಾಜ್ಯ ಹಾಗೂ ಕೇಂದ್ರದ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ನಿರೀಕ್ಷೆಯಲ್ಲಿ ರೈತಾಪಿ ವರ್ಗ ಇದೆ. ಆದಷ್ಟು ಬೇಗನೆ ರೈತರ ನೋವುಗಳಿಗೆ ಸರ್ಕಾರ ಸ್ಪಂದಿಸಲಿ.
ಬರ ಎದುರಿಸುತ್ತಿರುವ ರೈತರಿಗೆ ಏನು ಸಹಾಯ ಮಾಡಬೇಕು ಅಂತ ಚರ್ಚೆಮಾಡ್ತಿದ್ದೇನೆ, ಕೇಂದ್ರ ಸರ್ಕಾರವು ಸಹ ರೈತರ ಸಹಾಯಕ್ಕೆ ಬರಬೇಕು, ಇದರಲ್ಲಿ ಬಿಜೆಪಿವರದು ಜವಾಬ್ದಾರಿ ಇದೆ. ಬಿಜೆಪಿಯವರು ಕೇಂದ್ರ ಸರ್ಕಾರಕ್ಕೆ ಹೇಳಿ ಅವರೇ ರೈತರ ಸಾಲ ಮನ್ನಾ ಮಾಡಿಸಬೇಕು. ರೈತರಿಗೆ ನಾವು ಸಹ ರಾಜ್ಯ ಸರ್ಕಾರದಿಂದ ಏನು ಸಹಾಯ ಮಾಡಬೇಕು ಮಾಡುತ್ತೇವೆ. ಜತೆಗೆ ಕೇಂದ್ರ ಸರ್ಕಾರಕ್ಕೆ ಏನು ವರದಿ ಸಲ್ಲಿಸಬೇಕು ಅದನ್ನು ಸಲ್ಲಿಸುತ್ತೇವೆ.
-ಡಿ.ಕೆ.ಶಿವಕುಮಾರ, ಮುಖ್ಯಮಂತ್ರಿ