ಹೊನಗಾ, ಕಾಕತಿ ಹಾಗೂ ಕಂಗ್ರಾಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಳಪೆ ಮೂಲಸೌಕರ್ಯ, ನಾಗರಿಕ ಸೌಲಭ್ಯಗಳ ಕೊರತೆ ಹಾಗೂ ಕೈಗಾರಿಕಾ ಆಸ್ತಿಗಳ ಮಾಲೀಕತ್ವದ ದಾಖಲೆಗಳ ಸಮಸ್ಯೆ ಸೇರಿದಂತೆ ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸುವಂತೆ ಉತ್ತರ ಬೆಳಗಾವಿ ಕೈಗಾರಿಕಾ ಸಂಘ (ಎನ್‌ಬಿಐಎ) ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹೊನಗಾ, ಕಾಕತಿ ಹಾಗೂ ಕಂಗ್ರಾಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಳಪೆ ಮೂಲಸೌಕರ್ಯ, ನಾಗರಿಕ ಸೌಲಭ್ಯಗಳ ಕೊರತೆ ಹಾಗೂ ಕೈಗಾರಿಕಾ ಆಸ್ತಿಗಳ ಮಾಲೀಕತ್ವದ ದಾಖಲೆಗಳ ಸಮಸ್ಯೆ ಸೇರಿದಂತೆ ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸುವಂತೆ ಉತ್ತರ ಬೆಳಗಾವಿ ಕೈಗಾರಿಕಾ ಸಂಘ (ಎನ್‌ಬಿಐಎ) ಆಗ್ರಹಿಸಿದೆ.ಬೆಳಗಾವಿ ಕ್ಲಬ್‌ನ ಮೈತ್ರೇಯಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ ಎನ್.ಜೆ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಸಂಘವು 100ಕ್ಕೂ ಹೆಚ್ಚು ನೋಂದಾಯಿತ ಸದಸ್ಯರು ಹಾಗೂ 300ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳನ್ನು ಪ್ರತಿನಿಧಿಸುತ್ತಿದ್ದು, 5 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ನೇರ ಉದ್ಯೋಗ ಒದಗಿಸುತ್ತಿವೆ. ಹೊನಗಾ ಕೈಗಾರಿಕಾ ಪ್ರದೇಶದ ರಸ್ತೆಗಳ ಸ್ಥಿತಿ ಅತ್ಯಂತ ಹದಗೆಟ್ಟಿದ್ದು, ಸುಮಾರು 15 ವರ್ಷಗಳ ಹಿಂದೆ ಡಾಂಬರೀಕರಣಗೊಂಡ ಬಳಿಕ ಸಮರ್ಪಕ ಅಭಿವೃದ್ಧಿ ಕಂಡಿಲ್ಲ. ಹಲವು ಕಡೆ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ನಿಂತು ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಪಾಯ ಉಂಟಾಗುತ್ತಿದೆ. ಅಪೂರ್ಣ ಹಾಗೂ ನಿರ್ವಹಣೆ ಕೊರತೆಯ ಮಳೆನೀರು ಚರಂಡಿ ವ್ಯವಸ್ಥೆ, ಪೈಪ್‌ಲೈನ್‌ಗಳಿಂದ ರಸ್ತೆಗೆ ನೀರು ಸೋರಿಕೆ ಹಾಗೂ ಸಮರ್ಪಕ ಬೀದಿದೀಪಗಳ ಕೊರತೆಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಸಂಘ ತಿಳಿಸಿದೆ.ಕೇಬಲ್, ಪೈಪ್‌ಲೈನ್ ಹಾಗೂ ಗ್ಯಾಸ್‌ಲೈನ್ ಅಳವಡಿಕೆಗಾಗಿ ವಿವಿಧ ಏಜೆನ್ಸಿಗಳು ಪದೇಪದೇ ರಸ್ತೆಗಳನ್ನು ಅಗೆದು ಹಾಕುತ್ತಿದ್ದು, ಕಾಮಗಾರಿ ಬಳಿಕ ಸಮರ್ಪಕವಾಗಿ ಪುನಃಸ್ಥಾಪಿಸದಿರುವುದರಿಂದ ರಸ್ತೆಗಳು ಮತ್ತಷ್ಟು ಹದಗೆಡುತ್ತಿವೆ. ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯದ ಕೊರತೆಯೂ ಇದಕ್ಕೆ ಕಾರಣವಾಗಿದೆ ಎಂದು ಸಂಘ ಆರೋಪಿಸಿದೆ. ಕೆಐಎಡಿಬಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸಮಸ್ಯೆಗಳನ್ನು ತಂದಿದ್ದರೂ, ನಿರೀಕ್ಷಿತ ಪರಿಹಾರ ದೊರೆತಿಲ್ಲ ಎಂದು ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.ಇದೇ ವೇಳೆ 3 ದಶಕಗಳಿಗೂ ಹೆಚ್ಚು ಕಾಲದಿಂದ ಕೈಗಾರಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರೂ ಶೇ.50ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳ ಬಳಿ ಆಸ್ತಿಗಳ ಸಮರ್ಪಕ ಮಾಲೀಕತ್ವದ ದಾಖಲೆಗಳಿಲ್ಲ ಎಂಬ ಗಂಭೀರ ಸಮಸ್ಯೆಯನ್ನು ಸಂಘ ಪ್ರಸ್ತಾಪಿಸಿದೆ. ಈ ಸಮಸ್ಯೆಯಿಂದ ಕೈಗಾರಿಕೆಗಳ ವಿಸ್ತರಣೆ, ಹೂಡಿಕೆ ಹಾಗೂ ಆಸ್ತಿ ಸಂಬಂಧಿತ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಹೊಸ ಹೂಡಿಕೆಗಳನ್ನು ಆಹ್ವಾನಿಸುವ ಜತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳ ಸಮಸ್ಯೆಗಳಿಗೂ ಸರ್ಕಾರ ಆದ್ಯತೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಕೈಗಾರಿಕೆಗಳ ಬೆಳವಣಿಗೆ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಚಿವರು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಮಂಡಿಸಿ, ಶೀಘ್ರ ಪರಿಹಾರಕ್ಕೆ ಒತ್ತಾಯಿಸಲು ಸಂಘ ನಿರ್ಧರಿಸಿದೆ. ಸಭೆಯಲ್ಲಿ ಸಂಘದ ಕಾರ್ಯದರ್ಶಿ ನಾಗೇಂದ್ರ ಎಸ್. ಮೂರ್ತಿ, ಉಪಾಧ್ಯಕ್ಷ ಬೊನವೆಂಚರ್ ಪಿಂಟೋ, ಖಜಾಂಚಿ ಸಂತೋಷ ಕೆಲಗೇರಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಅಜಿತ್ ಪಾಟೀಲ, ಅಮಿತ್ ಬಾಗ್ರಿ, ಧೀರಜ್ ಕಾಂಚನ್, ಅಮೃತ ಕೋಡಾ, ಸುಧೀರ ದಾರೇಕರ್, ಮೋಹನ್ ರಡ್ಡಿ, ದಯಾನಂದ ಧೋಂಗಡಿ ಹಾಗೂ ಹಶಮ್ ಸೈಯದ್ ಉಪಸ್ಥಿತರಿದ್ದರು.