ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ನಾಗಸಂದ್ರ ವ್ಯಾಪ್ತಿಯ ಎಲ್ಲಾಪುರ ಗ್ರಾಮದ ದೊಡ್ಡತಾರೆ ಮರದ ಶ್ರೀ ಶನೇಶ್ಚರ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ 22ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಬೆಳಿಗ್ಗೆ ಜಾತ್ರಾ ವಿಶೇಷವಾಗಿ ದೇವಾಲಯದಲ್ಲಿ ಹೋಮ ಪಂಚಾಮೃತ ಅಭಿಷೇಕ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ 5:00 ಗಂಟೆಗೆ ಯಲ್ಲಾಪುರ ಗ್ರಾಮದಿಂದ ಶ್ರೀ ಶನೇಶ್ಚರ ಸ್ವಾಮಿ ದೇವಾಲಯದಿಂದ ಹೊರಟ ವಿಗ್ರಹ ಜೋಡಿ ಆಲದ ಮರದ ಬಳಿ ಪ್ರತಿಷ್ಠಾಪನೆಗೊಂಡಿತ್ತು. ಸಂಜೆ ಆರು ಮೂವತ್ತರ ಸುಮಾರಿಗೆ ಬೊಮ್ಮಡಿಗೆರೆ ಬೆಟ್ಟದ ರಂಗನಾಥ ಸ್ವಾಮಿ, ಕರೀತಿಮಯ್ಯನ ಪಾಳ್ಯದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಹೆಡ್ಡಿಗೆರೆಯ ಪಡವಲದಮ್ಮ. ರಾಮನಾಯಕನ ಪಾಳ್ಯದ ಗ್ರಾಮ ದೇವತೆ ನಾಡ ಮಾರಮ್ಮ, ಹುಲಿವಾನದ ಗ್ರಾಮ ದೇವತೆ ಮಾರಮ್ಮ, ನಾಗಮಂಗಲದ ಮುಳ್ಳ ಕಟ್ಟಮ್ಮ, ಕೋಟೆ ಕೆರೆ ಗೂಬೆಕಲ್ಲಮ್ಮ , ತೆಂಗಿನ ಮರ ಪಾಳ್ಯದ ಭೈರವ, ಹಾಗೂ ಗ್ರಾಮದೇವತೆ ಮಾರಮ್ಮ, ತುರುಗನೂರು ಆಂಜನೇಯ ಸ್ವಾಮಿ ಹಾಗೂ ಶನೇಶ್ಚರ ಸೇರಿದಂತೆ ಹಲವಾರು ದೇವಾಲಯಗಳು ದೊಡ್ಡ ಆಲದ ಮರದ ಬಳಿ ಜಮಾವಣೆಗೊಂಡವು. ಸಾಂಪ್ರದಾಯಿಕವಾಗಿ ಎಲ್ಲಾ ದೇವರುಗಳಿಗೂ ಪೂಜೆ ಸಲ್ಲಿಸಲಾಯಿತು ಇದೇ ಸಂದರ್ಭದಲ್ಲಿ ಕರಿಯಣ್ಣ ಮಾಯಣ್ಣ ದೇವರ ಪೂಜೆ, ಸ್ವಾಮನ ಕುಣಿತ ಗೊಂಬೆ ಕುಣಿತ ಕೀಲು ಕುದುರೆ ಮದ್ದು ಮರ , ಸೇರಿದಂತೆ ಹಲವಾರು ವಿಶೇಷ ಮನರಂಜನೆ ಮತ್ತು ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು,