ಹುಬ್ಬಳ್ಳಿ: ನಗರದಲ್ಲಿ ಪ್ರತಿಷ್ಠಾಪಿಸಿದ್ದ ಮೂರು ಹಿಂದು ಮಹಾಗಣಪತಿಗಳ ಮೂರ್ತಿಗಳನ್ನು 21ನೆಯ ದಿನವಾದ ಮಂಗಳವಾರ ಸಹಸ್ರಾರು ಭಕ್ತರ ಸಡಗರ, ಸಂಭ್ರಮದಿಂದ ಭವ್ಯ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.
ನವನಗರದ ಪಂಚಾಕ್ಷರಿನಗರ ಹಾಗೂ ಪುನೀತ ರಾಜಕುಮಾರ ಸರ್ಕಲ್‌ನಲ್ಲಿ ಎರಡು ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಇನ್ನು ಅಶೋಕನಗರದಲ್ಲಿ ಒಂದು ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಸತತ 21 ದಿನಗಳಿಂದ ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಯಿತು. ಪ್ರತಿನಿತ್ಯ ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಪೂಜೆ, ಹೋಮ ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಗಣೇಶನ ದರ್ಶನಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದರು.ಮಂಗಳವಾರ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ನವನಗರದ ಮೂರ್ತಿಗಳ ಮೆರವಣಿಗೆ ಕರ್ನಾಟಕ ಸರ್ಕಲ್, ಕ್ಯಾನ್ಸರ್ ಹಾಸ್ಪಿಟಲ್, ಭೈರಿದೇವರಕೊಪ್ಪ, ಉಣಕಲ್, ವಿದ್ಯಾನಗರದ ಮುಖ್ಯ ರಸ್ತೆಯ ಮಾರ್ಗವಾಗಿ ಸಂಚರಿಸಿತು. ನಂತರ ಹೊಸೂರಿನ ಮಹಾನಗರ ಪಾಲಿಕೆಯ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ಕುಣಿದು ಕುಪ್ಪಳಿಸಿದರು: ಗಣೇಶನ ವಿಸರ್ಜನೆಯ ಅಂಗವಾಗಿ ಸಂಜೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಇಡಲಾಗಿದ್ದ ಗಣೇಶನಿಗೆ ಹೂವಿನ ಹಾರ ಹಾಗೂ ಅಲಂಕಾರಿಕ ವಸ್ತುಗಳಿಂದ ಸಿಂಗಾರ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಡಿಜೆ ಮ್ಯೂಸಿಕ್‌ಗೆ ನರ್ತಿಸಿದರು. ಬೋಲೋ ಶ್ರೀ ಗಜಾನನ ಮಹಾರಾಜ್ ಕೀ...ಬಪ್ಪರೆ..ಬಪ್ಪಾ ಗಣಪತಿ ಬಪ್ಪಾ ಸೇರಿದಂತೆ ವಿವಿಧ ಜಯಘೋಷಗಳು ಮೊಳಗಿದವು.
ಗಣೇಶ ಪ್ರತಿಷ್ಠಾಪನೆಯ ಮಂಡಳಿಯ ಮುಖಂಡರಾದ ವಿಜಯಕುಮಾರ ಅಪ್ಪಾಜಿ, ಸುನೀಲಕುಮಾರ ರೇವಣಕರ, ವಿನೋದ ಪಾಟೀಲ, ಮಲ್ಲಯ್ಯಜ್ಜ ಹಿರೇಮಠ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಹಿರಿಯರು ಉಪಸ್ಥಿತರಿದ್ದರು.