ಗಜಮುಖನಿಗೆ ಅದ್ಧೂರಿ ವಿದಾಯ!

KannadaprabhaNewsNetwork |  
Published : Sep 21, 2026, 02:00 AM IST
ಉಣಕಲ್ಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಭಾನುವಾರ ಸಂಜೆ ನೆರವೇರಿತು. | Kannada Prabha

ಸಾರಾಂಶ

ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮಾತ್ರ ಮತ್ತಷ್ಟು ಸಂಭ್ರಮಕ್ಕೆ ಸಾಕ್ಷಿಯಾಯಿತು

ಹುಬ್ಬಳ್ಳಿ: ಏಳು ದಿನಗಳ ಕಾಲ ಶ್ರದ್ಧೆ, ಭಕ್ತಿ-ಭಾವದಿಂದ ಪೂಜಿಸಲ್ಪಟ್ಟ ಗಜಮುಖನಿಗೆ ಭಾನುವಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅದ್ಧೂರಿ ವಿದಾಯ ನೀಡಲಾಯಿತು. ಮನೆ, ಬೀದಿ ಹಾಗೂ 300ಕ್ಕೂ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ, ಆರತಿ ಹಾಗೂ ನೈವೇದ್ಯ ಅರ್ಪಿಸಿ, ಭಕ್ತರು ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜಿಸಿದರು.

ಸೆ. 14ರಂದು ಪ್ರತಿಷ್ಠಾಪಿಸಿದ್ದ ಮನೆ ಗಣಪತಿಗಳಿಗೆ ಬೆಳಗ್ಗೆಯಿಂದಲೇ ಪೂಜೆ ಸಲ್ಲಿಸಲಾಯಿತು. ಬಳಿಕ ಕುಟುಂಬಸ್ಥರು ಹಾಗೂ ಮಕ್ಕಳು ಒಟ್ಟಾಗಿ ಮೂರ್ತಿಯನ್ನು ಹೊತ್ತುಕೊಂಡು ಸಮೀಪದ ಕೆರೆ, ಬಾವಿ ಹಾಗೂ ಮಹಾನಗರ ಪಾಲಿಕೆ ನಿರ್ಮಿಸಿದ್ದ ವಿಸರ್ಜನಾ ತೊಟ್ಟಿಗಳತ್ತ ಸಾಗಿದರು. ದಾರಿಯುದ್ದಕ್ಕೂ ಗಣಪತಿ ಬಪ್ಪಾ ಮೋರಯಾ, ಮುಂದಿನ ವರ್ಷ ಬೇಗ ಬಾ ಎಂಬ ಘೋಷಣೆಗಳು ಮೊಳಗಿದವು.

ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮಾತ್ರ ಮತ್ತಷ್ಟು ಸಂಭ್ರಮಕ್ಕೆ ಸಾಕ್ಷಿಯಾಯಿತು. ವಿವಿಧ ಯುವಕ ಮಂಡಳಗಳ ಸದಸ್ಯರು ಡಿಜೆ ಸದ್ದಿನೊಂದಿಗೆ ಮೆರವಣಿಗೆ ನಡೆಸಿದರು. ಯುವಕರು, ಯುವತಿಯರು ಹಾಡು-ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಹಲವೆಡೆ ಗಣೇಶನಿಗೆ ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ಬೀಳ್ಕೊಡಲಾಯಿತು.

ಉಣಕಲ್ಲಿನಲ್ಲಿ ಜನಸಾಗರ: ಉಣಕಲ್ಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಸಾವಿರಾರು ಜನರು ಸಾಕ್ಷಿಯಾದರು. ಡಿಜೆ ಸದ್ದಿಗೆ ಯುವಕರು ಹುಚ್ಚೆದ್ದು ಕುಣಿದರೆ, ಮಹಿಳೆಯರು ಹಾಗೂ ಮಕ್ಕಳು ಮೆರವಣಿಗೆಯ ಉದ್ದಕ್ಕೂ ಕಣ್ತುಂಬಿಕೊಂಡರು. ವಿವಿಧ ಕಲಾತಂಡಗಳು, ವಾದ್ಯಮೇಳ ಹಾಗೂ ಭಕ್ತಿಗೀತೆಗಳು ಮೆರವಣಿಗೆಗೆ ಮೆರುಗು ನೀಡಿದವು.

ಶ್ರೀನಗರ, ಕೇಶ್ವಾಪುರ, ಹಳೇಹುಬ್ಬಳ್ಳಿ, ಗೋಪನಕೊಪ್ಪ ಸೇರಿದಂತೆ ವಿವಿಧ ಬಡಾವಣೆಗಳ ಗಣೇಶ ಮೂರ್ತಿಗಳನ್ನು ಹೊಸೂರು, ಇಂದಿರಾ ಗಾಜಿನ ಮನೆ ಹಾಗೂ ಉಣಕಲ್ಲ ಕೆರೆಯಲ್ಲಿ ನಿರ್ಮಿಸಲಾಗಿದ್ದ ಕೃತಕ ವಿಸರ್ಜನಾ ಬಾವಿಗಳಲ್ಲಿ ವಿಸರ್ಜಿಸಲಾಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ 300ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆಯಾದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಯೂಟ ತಯಾರಕರ ಬಾಕಿ ವೇತನ ನೀಡುವಂತೆ ಆಗ್ರಹ
ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ನೀಡಿ