ಬಸವಾಭಿಮಾನಿಗಳಿಂದ ಅದ್ಧೂರಿ ಮೆರವಣಿಗೆ

KannadaprabhaNewsNetwork | Published : May 11, 2024 1:35 AM

ಸಾರಾಂಶ

ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಬಸವ ಪರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಬೃಹತ್‌ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವಿಶ್ವಜ್ಯೋತಿ, ಅಶ್ವಾರೂಢ ಬಸವೇಶ್ವರ, ಅಕ್ಕಮಹಾದೇವಿ, ನೀಲಾಂಬಿಕೆ ಸೇರಿದಂತೆ ಶರಣ -ಶರಣೆಯರ ವೇಷ ಭೂಷಣ, ಬಸವಾದಿ ಶರಣರ ವಚನಗಳ ಪಠಣ, ಕೋಲಾಟ...

ಇವು ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಬಸವ ಪರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಜರುಗಿದ ಬೃಹತ್‌ ಮೆರವಣಿಗೆ ದೃಶ್ಯಗಳು.

ನಗರದ ದುರ್ಗದ ಬೈಲ್‌ನಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಷಟಸ್ಥಲ ಧ್ವಜಾರೋಹಣ ನೆರವೇರಿಸುವುದರೊಂದಿಗೆ ನಿಂದ ಆಯೋಜಿಸಿದ್ದ ಬೃಹತ್‌ ಮೆರವಣಿಗೆಗೆ ಚಾಲನೆ ನೀಡಿದರು.

ಮೂರು ಸಾವಿರ ಮಠದ ಜ.ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೂರುಸಾವಿರ ಮಠದ ಸ್ವಾಮೀಜಿ, 12ನೇ ಶತಮಾನದಲ್ಲಿಯೇ ಸಾಮಾಜಿಕ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದ ಯುಗಪುರುಷ ಬಸವಣ್ಣನವರು ಸಮಾಜ ಸುಧಾರಕರಾಗಿದ್ದರು. ಬಸವಣ್ಣನವರು ತೋರಿದ ಬೆಳಕು ಇಂದಿಗೂ ಸಾಧಕರ ಸಾಧನೆಗೆ ದಾರಿದೀಪವಾಗಿದೆ ಎಂದು ಬಣ್ಣಿಸಿದರು.

ದುರ್ಗದ ಬೈಲ್‌ನಿಂದ ಆರಂಭವಾದ ಸಂಭ್ರಮದ ಮೆರವಣಿಗೆಯು ಮೇದಾರ ಓಣಿ, ದಾಜೀಬಾನ ಪೇಟ, ಸಂಗೊಳ್ಳಿ ರಾಯಣ್ಣ ಸರ್ಕಲ್‌, ಚನ್ನಮ್ಮ ಸರ್ಕಲ್‌ ಮಾರ್ಗವಾಗಿ ಬಸವವನಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಕುದುರೆ ಮೇಲೆ ಕುಳಿತಿದ್ದ ಬಸವಣ್ಣನ ಪಾತ್ರದಲ್ಲಿ ನಿವೃತ್ತ ಅಧಿಕಾರಿ ಕೆ.ಎಸ್‌. ಇನಾಮತಿ ಹಾಗೂ ನೀಲಾಂಬಿಕೆ ಮತ್ತು ಅಕ್ಕಮಹಾದೇವಿ ಪಾತ್ರಧಾರಿಗಳು, ಛತ್ರ ಚಾಮರ ಗಮನಸೆಳೆದವು. ಇದಲ್ಲದೇ ನಾನಾ ಕಲಾ ತಂಡಗಳು, ಮಹಿಳೆ ಮತ್ತು ಮಕ್ಕಳು ಕೋಲಾಟಗಳ, ಅಲಂಕೃತ ಬಸವ ರಥದಲ್ಲಿ ಬಸವೇಶ್ವರರ ಪುತ್ಥಳಿ, ವಚನ ಗ್ರಂಥಗಳು, ಶರಣೆಯರ ವಚನ ಕೋಲಾಟ, ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.

ಮೆರವಣಿಗೆ ಬಸವವನಕ್ಕೆ ಬಂದ ಬಳಿಕ ಬಸವೇಶ್ವರರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಗ್ಲಾಸ್‌ಹೌಸ್‌ನಲ್ಲಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು. ಬಳಿಕ ಪ್ರಸಾದ ವಿತರಿಸಲಾಯಿತು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸಮಾಜದಲ್ಲಿ ಸಮಾನತೆ ಹೋರಾಡಿದ ಬಸವಣ್ಣನವರು ಈ ವಿಶ್ವದ ಮಹಾ ಮಾನವತಾವಾದಿ. ಅವರು ಜಾತಿಗೆ ಸೀಮಿತರಾಗಿಲ್ಲ. ಎಲ್ಲ ಸಮಾಜದ ಗುರುವಾಗಿದ್ದಾರೆ. ಅವರ ಸಾಮಾಜಿಕ ಕ್ರಾಂತಿಕಾರಿ ನಿಲುವುಗಳು ಎಲ್ಲ ವರ್ಗದವರಿಗೆ ಪ್ರೇರಣೆಯಾಗಿವೆ. ಹೀಗಾಗಿಯೇ ರಾಜ್ಯ ಸರಕಾರ ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ ಹಾಗೂ ಹುಬ್ಬಳ್ಳಿಯ ಬಸವಪರ ಸಂಘಟನೆಗಳು, ಸಮಾಜದ ಬಂಧುಗಳು, ಯುವಕ ಸಂಘಗಳು ಹಾಗೂ ಮಹಿಳಾ ಸಂಘಟನೆಗಳು ಮೆರವಣಿಗೆಗೆ ಸಾಥ್‌ ನೀಡಿದ್ದವು.

ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ, ಜಿ.ಬಿ. ಹಳ್ಯಾಳ, ಎಸ್‌.ವಿ. ಪಟ್ಟಣಶೆಟ್ಟಿ, ಬಿ.ಎಲ್‌. ಲಿಂಗಶೆಟ್ಟಿ, ಎಸ್‌.ವಿ. ಕೊಟಗಿ, ಪ್ರಭು ಅಂಗಡಿ, ಶಿವಯೋಗಿ ಮೂರ್ಖಂಡಿ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಸುರೇಶ ಹೊರಕೇರಿ, ಸವಿತಾ ನಡಕಟ್ಟಿಘಿ, ದಾಕ್ಷಾಯಣಿ ಕೋಳಿವಾಡ, ಲಕ್ಷ್ಮಿ ಲಿಂಗಶೆಟ್ಟಿ ಸೇರಿದಂತೆ ಹಲವರು ಪ್ರಮುಖರು ಮೆರವಣಿಗೆಯಲ್ಲಿದ್ದರು.

Share this article