ಕನ್ನಡಪ್ರಭ ವಾರ್ತೆ ರಬಕವಿ ಬನಹಟ್ಟಿ
ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ ನಿಮಿತ್ತ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ, ಧಾರ್ಮಿಕ ಉತ್ಸಾಹ, ಸಾಂಪ್ರದಾಯಿಕ ವಾದ್ಯಗಳ ನಿನಾದ ನಗರದಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಆರತಿ, ಕುಂಭ ಹೊತ್ತು ಸಾಗಿದ ಮಹಿಳೆಯರು, ರಸ್ತೆಗಳಲ್ಲಿ ರಂಗೋಲಿಗಳ ಶೃಂಗಾರ, ಸ್ವಾಗತ ಕಮಾನುಗಳು, ಧಾರ್ಮಿಕ ಧ್ವಜಗಳು, ಬ್ಯಾನರ್ ಹಾಗೂ ಸಕಲ ವಾದ್ಯ ಮೇಳಗಳು, ಭಕ್ತರ ಜಯ ಘೋಷಗಳು ಹಾಗೂ ಸಾಂಪ್ರದಾಯಿಕ ಕಲಾ ತಂಡಗಳ ಪ್ರದರ್ಶನಗಳಿಂದ ನಗರದೆಲ್ಲೆಡೆ ಧಾರ್ಮಿಕ ಸಂಭ್ರಮ ಮನೆಮಾಡಿತ್ತು.
ಶೋಭಾಯಾತ್ರೆ ರಬಕವಿಯ ಹಳೇ ಬಸ್ ನಿಲ್ದಾಣ ಹಾಗೂ ಬನಹಟ್ಟಿಯ ವೈಭವ ಚಿತ್ರಮಂದಿರದಿಂದ ಎರಡೂ ಕಡೆಗಳಿಂದ ಆರಂಭವಾಗಿ ಅವಳಿ ನಗರಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಭಕ್ತರು ಪುಷ್ಪವೃಷ್ಟಿಗೈದು ಕಾಡಸಿದ್ದೇಶ್ವರ ಶ್ರೀಗಳಿಗೆ ಗೌರವ ಸಲ್ಲಿಸಿದರು.ಶೋಭಾಯಾತ್ರೆಯಲ್ಲಿ ಕನ್ಹೇರಿ ಶ್ರೀಗಳು, ಶಿರೋಳದ ಶಂಕರಾರೂಢ ಶ್ರೀಗಳು, ಹಳೇ ಹುಬ್ಬಳ್ಳಿಯ ಜಗದ್ಗುರು ಯೋಗಾಚಾರ್ಯ ಶ್ರೀ, ಶಿವಶಂಕರ ಶಿವಾಚಾರ್ಯರು, ಮೈಗೂರಿನ ಗುರುಪ್ರಸಾದ ಶ್ರೀಗಳು, ಹುಲ್ಯಾಳದ ಹರ್ಷಾನಂದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ, ಸಿದ್ದು ಸವದಿ, ಹಿಂದೂ ಮುಖಂಡರಾದ ನಂದು ಗಾಯಕವಾಡ, ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಬಾಬುಗೌಡ ಪಾಟೀಲ, ಗೌರಿ ಮಿಳ್ಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.