ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರ ಪ್ರಶ್ನೆಗಳು, ಅವರ ಹೋರಾಟಗಳು ಮತ್ತು ಸಮಾಜದ ಬದಲಾವಣೆಯ ಅಗತ್ಯವನ್ನು ಸ್ಪಷ್ಟವಾಗಿ ಹೇಳಿರುವ ಅನುಪಮಾ ನಿರಂಜನ ಅವರ ಲೇಖನಗಳು ಮಹಿಳಾ ಜಾಗೃತಿಗೆ ಮಹತ್ವದ ಪ್ರೇರಣೆಯಾಗಿವೆ ಎಂದು ಹೇಳಿದರು.
ಮಹಿಳೆಯರು ವರದಿಗಾರಿಕೆಗೆ ಮಾತ್ರ ಸೀಮಿತವಾಗದೆ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ತಮ್ಮ ಸ್ಥಾನವನ್ನು ಬಲಪಡಿಸಬೇಕು. ಅಲ್ಲದೇ ಅವಕಾಶವಂಚಿತ ಮಹಿಳೆಯರ ಸ್ಥಿತಿ ಇನ್ನೂ ಮುಂದುವರಿದಿರುವುದು ವಿಷಾದನೀಯವಾಗಿದ್ದು, ಮಹಿಳಾ ಸಬಲೀಕರಣಕ್ಕೆ ಪತ್ರಿಕೋದ್ಯಮ ವಿಭಾಗಗಳು ಬಲವಾದ ವೇದಿಕೆಯಾಗಬೇಕು. ಮಾಧ್ಯಮದಲ್ಲಿ ಪರಿಣತಿ ಹೊಂದಿದವರು ಉತ್ತಮ ಪತ್ರಿಕೋದ್ಯಮ ಶಿಕ್ಷಕರಾಗಬಹುದು ಎಂದರು.ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ನೀಡುತ್ತಿರುವ ಗುಣಮಟ್ಟದ ಶಿಕ್ಷಣ, ಸಮೃದ್ಧ ಮತ್ತು ಸುಸಜ್ಜಿತ ಸ್ಟುಡಿಯೋ ವಾತಾವರಣ, ವಿದ್ಯಾರ್ಥಿ-ಕೇಂದ್ರೀಕೃತ ಕೆಲಸಗಳು ಪ್ರಶಂಸನೀಯ. ಗುರಿ ಸ್ಪಷ್ಟವಾಗಿದ್ದರೆ ಸಾಧನೆ ಸುಲಭವಾಗುತ್ತದೆ ಎಂದು ಸಲಹೆ ನೀಡಿದ ಅವರು, ಮಾಧ್ಯಮ ವಿಭಾಗಗಳ ಹೋಲಿಕೆ ಮಾಡಿದಾಗ ವಿಜಯಪುರ ಮಹಿಳಾ ವಿವಿ ಮಾಧ್ಯಮ ವಿಭಾಗ ಉನ್ನತ ಸ್ಥಾನದಲ್ಲಿದೆ. ಗ್ರಾಮೀಣ ಮತ್ತು ಕನ್ನಡ ಮಧ್ಯಮದ ಮಹಿಳೆಯರಿಗೆ ಬೆಳೆಯಲು ಹೆಚ್ಚಿನ ಅವಕಾಶಗಳು ದೊರೆಯಬೇಕು. ದೇಶವ್ಯಾಪಿಯಾಗಿ ಬೆಳೆಯುತ್ತಿರುವ ಪತ್ರಿಕೋದ್ಯಮ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಭಾವ ಬೀಳಲಿ ಎನ್ನುವುದು ಎಲ್ಲರ ಆಶಯ. ಮನೆಯ ಜವಾಬ್ದಾರಿಗಳ ನಡುವೆ ಶಿಕ್ಷಣ ಮುಂದುವರಿಸುವುದು ಗ್ರಾಮೀಣ ಮಹಿಳೆಯರಿಗೆ ಸವಾಲಾಗಿದ್ದು, ಅವರಿಗೆ ಹೆಚ್ಚಿನ ಸೌಲಭ್ಯ ಮತ್ತು ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ತಹಮೀನಾ ಕೊಲಾರ, ಡಾ.ಸಂದೀಪ, ಸಂಶೋಧನಾ ವಿದ್ಯಾರ್ಥಿನಿಯರಾದ ಪವಿತ್ರಾ ಕಂಬಾರ, ಜಯಶ್ರೀ ತಳವಾರ, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಇದ್ದರು.