ಶಶಿಕಾಂತ ಮೆಂಡೆಗಾರ
ಹೀಗೆ ವಿಜಯಪುರ, ಇಂಡಿ, ತಿಕೋಟಾ ತಾಲೂಕಿನ ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಬಿಜ್ಜರಗಿ, ಘೋಣಸಗಿ ಬಹುತೇಕ ಎಲ್ಲ ಗ್ರಾಮಗಳಲ್ಲಿ ರಭಸದಿಂದ ಸುರಿದ ಮಳೆಯಿಂದ ದ್ರಾಕ್ಷಿ ಬೆಳೆಗಾರರು ಅಕಾಲಿಕವಾಗಿ ಸುರಿದ ಬಿರುಗಾಳಿ ಮಳೆಯಿಂದ ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ.
ವರ್ಷಗಟ್ಟಲೆ ದ್ರಾಕ್ಷಿಯನ್ನು ಆರೈಕೆ ಮಾಡಿ, ಫಸಲು ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ಅಕಾಲಿಕ ಮಳೆ ಅನ್ನದಾತರಿಗೆ ಆರ್ಥಿಕ ಹೊಡೆತ ನೀಡಿತು.ಬಿರುಗಾಳಿ ಸಹಿತ ಮಳೆಯಿಂದಾಗಿ ಕೈಗೆ ಬಂದ ಫಸಲು ಮಾರುಕಟ್ಟೆಗೆ ಬರದಂತಾಗಿದ್ದು ದ್ರಾಕ್ಷಿ ಬೆಳೆದ ರೈತರ ಬಾಳು ಈ ವರ್ಷ ಹುಳಿಯಾಗುವ ಲಕ್ಷಣಗಳಿವೆ. ಅಧಿಕ ಮಳೆಯಿಂದಾಗಿ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ದ್ರಾಕ್ಷಿ ಗೊಂಚಲುಗಳು ಸೀಳುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕೂಡ ಸಿಗುವುದಿಲ್ಲ. ಇನ್ನು ಕಟಾವು ಮಾಡಿ ಒಣದ್ರಾಕ್ಷಿ ಮಾಡಲೆಂದು ಹಾಕಿದ್ದ ದ್ರಾಕ್ಷಿಗೆ ನೀರು ತಾಗುವುದರಿಂದ ಹಾಗೂ ವಾತಾವರಣದಲ್ಲಿ ಬದಲಾವಣೆಯಾಗುವುದಿಂದ ಆ ಒಣದ್ರಾಕ್ಷಿ ಕಂದು ಬಣ್ಣಕ್ಕೆ ತಿರುಗುವುದರಿಂದಲೂ ಮಾರುಕಟ್ಟೆಯಲ್ಲಿ ಬೆಲೆ ಸಿಗದಂತಾಗಲಿದೆ. ಹೀಗಾಗಿ ದ್ರಾಕ್ಷಿ ಬೆಳೆದ ಬೆಳೆಗಾರರಿಗೆ ಈ ಬಾರಿಯೂ ಸಂಕಷ್ಟ ಎದುರಾಗಿದೆ.
ವಾಯುಭಾರ ಕುಸಿತದಿಂದ ಏಕಾಏಕಿಯಾಗಿ ಮಳೆರಾಯ ಆಗಮಿಸಿದ್ದರಿಂದ ವರುಣನ ಆರ್ಭಟಕ್ಕೆ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ತೋಟದಲ್ಲಿನ ದ್ರಾಕ್ಷಿ ಬೆಳೆಗೂ ಹಾಗೂ ಒಣದ್ರಾಕ್ಷಿ ಮಾಡಲೆಂದು ಕಟಾವು ಮಾಡಿ ಹಾಕಿದ್ದ ಒಣದ್ರಾಕ್ಷಿ ಘಟಕಗಳು ಸಹ ಹಾನಿಗೊಳಗಾಗಿವೆ. ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ದ್ರಾಕ್ಷಿ ಬೆಳೆಯನ್ನು ಉಳಿಸಿಕೊಳ್ಳಲು ಮಳೆಹನಿ ತಾಗಬಾರದೆಂದು ಆಸರೆಗೆ ಹಳದಿ ತಾಡಪತ್ರಿ (ತಾಡಪಾಲ) ಹೊದಿಕೆಗಳನ್ನು ಹಾಕಿದ್ದಾರೆ. ರೈತರು ಎಷ್ಟೇ ಕಷ್ಟಪಟ್ಟರೂ ಒಣದ್ರಾಕ್ಷಿಗೆ ನೀರು ತಾಗುವುದರಿಂದ ಅದು ಕಪ್ಪು ಬಣ್ಣಕ್ಕೆ ತಿರುಗಿ ಆದಾಯಕ್ಕೆ ಹೊಡೆತ ಬೀಳಲಿದೆ.
ರೈತರು ಏನು ಮಾಡಬೇಕು?:ದ್ರಾಕ್ಷಿ ಬೆಳೆಗಾರರು ಈಗಾಗಲೇ ವಿಮೆ ಹಣವನ್ನು ತುಂಬಿದ್ದರೆ, ಮಳೆಗೆ ಹಾಳಾದ ತೋಟಗಳ ರೈತರು 72 ಗಂಟೆಗಳಲ್ಲಿ ಸಂಬಂಧಿಸಿದ ವಿಮೆ ಕಂಪನಿಯವರಿಗೆ, ಕಂದಾಯ ಇಲಾಖೆಯವರಿಗೆ ಮಾಹಿತಿ ನೀಡಬೇಕು. ಈ ಕುರಿತು ರೈತರು ಜಾಗೃತರಾಗಿ ಬೇಗ ಮೇಲಾಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು ಎಂದು ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೇಕರ ರೈತರಿಗೆ ತಿಳಿಸಿದ್ದಾರೆ.
------------ಕೋಟ್....
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಕಟಾವಿಗೆ ಬಂದ ದ್ರಾಕ್ಷಿ ಬೆಳೆ ಬಹುತೇಕ ಹಾನಿಯಾಗಿದೆ. ತಿಕೋಟಾ, ಚಡಚಣ, ಇಂಡಿ, ವಿಜಯಪುರ, ಸಾವಳಗಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ದ್ರಾಕ್ಷಿ ಮತ್ತು ಒಣದ್ರಾಕ್ಷಿ ಬೆಳೆದ ರೈತರು ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ. ಮಳೆಯಾದ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಪರಿಹಾರ ಒದಗಿಸಬೇಕು.- ಎಂ.ಎಸ್.ಲೋಣಿ, ಅಧ್ಯಕ್ಷರು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಪ್ರಾದೇಶಿಕ ಕಚೇರಿ ವಿಜಯಪುರ.
-------ಅವಳಿ ಜಿಲ್ಲೆಗಳಲ್ಲಿ ಬಹುತೇಕ ದ್ರಾಕ್ಷಿ ಬೆಳೆಗಾರರಿಗೆ ಈ ಎರಡು ದಿನಗಳಿಂದ ಉಂಟಾದ ಮಳೆಯಿಂದ ಶೇ.30 ರಿಂದ 40ರಷ್ಟು ಹಾನಿಯಾಗಿದೆ. ಒಣದ್ರಾಕ್ಷಿ ಗುಣಮಟ್ಟ ಕೂಡ ಕಡಿಮೆಯಾಗುತ್ತದೆ. ದ್ರಾಕ್ಷಿ ಸೀಳುವಂತಹ ಅವಕಾಶಗಳು ಜಾಸ್ತಿ ಇವೆ. ಜಿಲ್ಲಾಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮೀಕ್ಷೆ ಮಾಡಿಸಿ ಸಮಸ್ಯೆಗೆ ಸಲಹೆ ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
- ಸಿದ್ಧಗೊಂಡ ರುದ್ರಗೌಡರ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಪ್ರಾದೇಶಿಕ ಕಚೇರಿ ವಿಜಯಪುರ.